ಬುಧವಾರ, ಏಪ್ರಿಲ್ 14, 2021
23 °C

ಬಳೆ ಮಲಾರದಲ್ಲಿ ಕನಸುಗಳ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಗೀತಾ ಬ್ಯಾಂಗಲ್ ಸ್ಟೋರ್~- ಚಿತ್ರಕ್ಕೊಂದು ಆಕರ್ಷಕ ಶೀರ್ಷಿಕೆ. `ಇಲ್ಲಿ ಕನಸುಗಳನ್ನು ಮಾರಲಾಗುವುದು~ ಎಂಬ ಅಡಿಬರಹ. ಅಷ್ಟೇ ಆಕರ್ಷಕವಾಗಿ ಕಾರ್ಯಕ್ರಮ ಆಯೋಜಿಸಿದ್ದರು ನಿರ್ದೇಶಕ ಮಂಜು ಮಿತ್ರ. ವರಮಹಾಲಕ್ಷ್ಮಿ ಹಬ್ಬದ ದಿನದಂದು ಅವರ ಹೊಸ ಚಿತ್ರದ ಮುಹೂರ್ತ.ಚಲನಚಿತ್ರವೆಂದರೆ ನಾಯಕ ಅಥವಾ ನಾಯಕಿಯರದ್ದಲ್ಲ. ಅದು ನಿರ್ದೇಶಕನದ್ದು. ನಾನು ನಿರ್ದೇಶಕನಾಗಿ  ಗುರುತಿಸಿಕೊಳ್ಳುವಂತಾಗಬೇಕು ಎನ್ನುವುದು ಮಂಜು ಮಿತ್ರ ಮಹದಾಸೆ.

 

ಹೀಗಾಗಿ ಕನ್ನಡ ಚಿತ್ರರಂಗದ ಎಲ್ಲಾ ಪ್ರಮುಖ ನಿರ್ದೇಶಕರ ಛಾಯಾಚಿತ್ರಗಳನ್ನು ಹುಡುಕಿ ಆರಿಸಿ ತಂದು ಪ್ರದರ್ಶನಕ್ಕಿಟ್ಟಿದ್ದರು. ಅವರಂತೆ ನಾನಾಗಬೇಕು ಎಂಬ ಕನಸನ್ನು ಅದರೊಟ್ಟಿಗೆ ಬಿಚ್ಚಿಟ್ಟರು.ಅಷ್ಟೆಲ್ಲಾ ಇದ್ದರೂ ಸುದ್ದಿಗೋಷ್ಠಿಯಲ್ಲಿ ಮಾತ್ರ ಅವರ ಬಾಯಿಯಿಂದ ಮಾತುಗಳು ಸರಾಗವಾಗಿ ಹೊರಬೀಳಲಿಲ್ಲ. ಹತ್ತು ಹಲವು ವರ್ಷ ಚಿತ್ರರಂಗದಲ್ಲಿ ಕೆಲಸ ಮಾಡಿರುವ ಅವರಿಗೆ ಮೊದಲ ಬಾರಿಗೆ ಸ್ವತಂತ್ರವಾಗಿ ಆ್ಯಕ್ಷನ್ ಕಟ್ ಹೇಳುತ್ತಿರುವ ಸಂಭ್ರಮವಿತ್ತು.

 

`ಗೀತಾ ಬ್ಯಾಂಗಲ್ ಸ್ಟೋರ್~ ಕನಕಪುರದ ಮರಳವಾಡಿಯ ಹಾರವಳ್ಳಿ ಎಂಬ ಗ್ರಾಮದಲ್ಲಿ ನಡೆಯುವ ಕಥನದ ಚಿತ್ರ. ಇಡೀ ಸಿನಿಮಾ ಕತೆ ಅಡಗಿರುವುದು ಹಾರವಳ್ಳಿಯಲ್ಲಿ. ಹಳ್ಳಿಯ ಚಿತ್ರಣ ಗಾಢವಾಗಿ ತಟ್ಟುವಂತೆ ಮೂಡಿಬರಬೇಕೆನ್ನುವುದು ಮಂಜು ಬಯಕೆ.

 

ಹೀಗಾಗಿ ಮಂಜು ಮತ್ತು ಸ್ನೇಹಿತರು ಏಳೆಂಟು ತಿಂಗಳು ಮೂಲಸೌಕರ್ಯ ಸಂಪರ್ಕವಿಲ್ಲದ ಹಳ್ಳಿಯ ತೋಟವೊಂದರ ಮನೆಯಲ್ಲಿ ಕುಳಿತು ಚರ್ಚಿಸಿ ಚಿತ್ರಕತೆ ರಚಿಸಿದ್ದಾರೆ. ನಾಯಕ ಕೃಷಿಕ - ರೇಷ್ಮೆ ಬೆಳೆಗಾರ. ನಾಯಕಿ ಶೀರ್ಷಿಕೆಯಲ್ಲಿನ ಅಂಗಡಿಗೆ ಸಂಬಂಧಿಸಿದವಳು.ಇದೊಂದು ನವಿರು ಪ್ರೇಮಕತೆ ಎಂದು ಸುಮ್ಮನಾದರು ಮಂಜು. ಚಿತ್ರದ ಒಳಗುಟ್ಟುಗಳನ್ನು ಬಿಟ್ಟುಕೊಡಬಾರದು ಎನ್ನುವ ಪಟ್ಟು ಹಿಡಿದಿದ್ದರು ಅವರು. ಕೃಷಿಕ ಮತ್ತು ಬಳೆ ಅಂಗಡಿಯ ಹುಡುಗಿಗಾಗಿ ಇನ್ನೂ ಹುಡುಕಾಟ ನಡೆಯುತ್ತಿದೆ. ಅದರ ಹೊರತು ಉಳಿದ ತಾರಾಗಣ ಸಂಪೂರ್ಣ ಸಿದ್ಧಗೊಂಡಿದೆ.ಚಿತ್ರಕ್ಕೆ ಸಂಗೀತ ನೀಡುತ್ತಿರುವವರು ವಿ. ಮನೋಹರ್. ಏಳರಲ್ಲಿ ಮೂರು ಹಾಡುಗಳಿಗೆ ಅವರು ಆಗಲೇ ಸ್ವರ ಹೆಣೆದಿದ್ದಾರೆ. ನಿರ್ದೇಶಕ ಮಂಜು ಮಿತ್ರರ ಕಠಿಣ ಶ್ರಮದ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.ಸಿನಿಮಾ ಕ್ಷೇತ್ರಕ್ಕೆ ಬರುತ್ತೇನೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ ಎಂದರು ನಿರ್ಮಾಪಕ ಕೆಂಪರಾಜು. ಅವರು ಮಿನರಲ್ ವಾಟರ್ ಕಂಪೆನಿಯೊಂದನ್ನು ನಡೆಸುತ್ತಿದ್ದಾರೆ. ಮಂಜು ಶೀರ್ಷಿಕೆ ವಿನ್ಯಾಸವನ್ನು ತಂದು ತೋರಿಸಿದಾಗಲೇ ಅವರಲ್ಲಿ ಅಗಾಧ ಪ್ರತಿಭೆಯಿದೆ ಎಂಬುದು ಅವರಿಗೆ ಅರಿವಾಯಿತಂತೆ. ಕತೆ ಕೇಳದೆಯೇ ಅವರು ಬಂಡವಾಳ ಹೂಡಲು ಒಪ್ಪಿಕೊಳ್ಳಲು ಅದೇ ಸಾಕಾಯಿತಂತೆ.ಛಾಯಾಗ್ರಾಹಕ ಸಿನಿಟೆಕ್ ಸೂರಿ, ನೃತ್ಯ ನಿರ್ದೇಶಕಿ ಮದನ್ ಹರಿಣಿ, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.