ಸೋಮವಾರ, ಮೇ 23, 2022
30 °C

ಬಳ್ಳಾರಿಯ ಗಾಂಧಿ ಸಾಲೊಮನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿಯ ಗಾಂಧಿ ಸಾಲೊಮನ್

ಪುಟ್ಟ ಹುಡುಗಿಯೊಬ್ಬಳು ಕಿತ್ತು ತಿನ್ನುವ ಬಡತನದ ಕಾರಣಕ್ಕೆ, ಕೂಲಿ ಮಾಡಿ ಅವ್ವನಿಗೆ ನೆರವಾಗಲೆಂದು ಬಳ್ಳಾರಿಯ ಬಜಾರುಗಳಲ್ಲಿ ಕೆಲಸ ಹುಡುಕಿಕೊಂಡು ಸುತ್ತುತ್ತಿರುತ್ತಾಳೆ.ಒಂದು ದಿನ, ಹಸಿವಿನಿಂದ ಕಂಗಾಲಾದ ಬಾಲಕಿ ಜನರಿಂದ ಗಿಜಿಗುಡುವ ಕಚೇರಿಯೊಂದನ್ನು ಪ್ರವೇಶಿಸುತ್ತಾಳೆ. ಅಲ್ಲೊಬ್ಬ ಬಡಕಲು ಅಜ್ಜ. ಜನರ ಸಮಸ್ಯೆಗಳನ್ನು ಕೇಳುತ್ತಿದ್ದಾನೆ, ಪರಿಹಾರ ಸೂಚಿಸುತ್ತಿದ್ದಾನೆ. ಕಚೇರಿಯ ಮೂಲೆಯಲ್ಲಿ ನಿಂತ ಹುಡುಗಿಯನ್ನು ನೋಡಿದೊಡನೆಯೇ, ಆ ಅಜ್ಜ ಕೂತಲ್ಲಿಂದ ಎದ್ದು ಬಂದು ಅವಳ ತಲೆ ನೇವರಿಸಿ ಮಾತನಾಡಿಸುತ್ತಾನೆ. ಹುಡುಗಿ ಬಿಕ್ಕಳಿಸುತ್ತಾಳೆ.ಅಜ್ಜ ಊಟ ತರಿಸಿ ತುತ್ತುಣಿಸುತ್ತಾನೆ. ಹುಡುಗಿ ನಿಧಾನವಾಗಿ ತನ್ನ ತವಕ ತಲ್ಲಣಗಳ ಹೇಳಿಕೊಳ್ಳುತ್ತಾಳೆ. `ಹಸಿವಾದಾಗಲೆಲ್ಲ ಇಲ್ಲಿಗೆ ಬಾ~ ಎಂದು ಅಜ್ಜ ಪ್ರೀತಿಯಿಂದ ತಲೆ ನೇವರಿಸುತ್ತಾನೆ. ನಂತರದಲ್ಲಿ, ಆ ಹುಡುಗಿ ಅಜ್ಜನಿಗೆ ಸಹಾಯಕವಾಗಿ ಆ ಕಚೇರಿಯಲ್ಲಿ ಓಡಾಡಿಕೊಂಡೇ ಬೆಳೆಯುತ್ತಾಳೆ. ಆ ಅಜ್ಜನೇ `ಬಳ್ಳಾರಿಯ ಗಾಂಧಿ~ ಎಂದು ಜನಪ್ರೀತಿಗೆ ಒಳಗಾಗಿದ್ದ ನಿಷ್ಠಾವಂತ ಸಮಾಜವಾದಿ ದಾಸನ್ ಸಾಲೊಮನ್. ಅವರ ಕೈತುತ್ತು ಸವಿದ ಬಾಲಕಿಯೀಗ ಎಪ್ಪತ್ತರ ಆಸುಪಾಸಿನ ಹಿರೀಕಳು, ಬಳ್ಳಾರಿಯ ತಾಲ್ಲೂಕು ಕಚೇರಿಯ ಮುಂದೆ ಅರ್ಜಿ ಫಾರಂಗಳನ್ನು ಮಾರುತ್ತಾ ಕೂರುವ ಅಜ್ಜಿ ಹೆಚ್.ಕೆ. ಶಾಂತ.ಆಂಥೋನಿ ಕ್ಲೆಮೆಂಟ್ ಜೇಸುದಾಸನ್ ಸಾಲೊಮನ್ (ಜ: ಜುಲೈ 6, 1915) ಬಳ್ಳಾರಿಯ ವಾರ್ಡ್ಲಾ ಸ್ಕೂಲು ಮತ್ತು ಅನಂತಪುರದ ಸರಕಾರಿ ಕಲಾ ಕಾಲೇಜಿನಲ್ಲಿ ಶಿಕ್ಷಣ ಮುಗಿಸಿದರು. ಅವರು ತರುಣಾವಸ್ಥೆಯಲ್ಲಿದ್ದ ದೇಶದೆಲ್ಲೆಡೆ ಕಾವಿನಲ್ಲಿದ್ದ ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ ಸಹಜವಾಗಿ ಸಾಲೊಮನ್ ಅವರನ್ನೂ ಪ್ರಭಾವಿಸಿತ್ತು. 1942ರ `ಕ್ವಿಟ್ ಇಂಡಿಯಾ~ ಚಳವಳಿಯ ಸಂದರ್ಭದಲ್ಲಿ ಅವರು ಪೊಲೀಸರ ಹೊಡೆತದಿಂದ ತೀವ್ರವಾಗಿ ಗಾಯಗೊಂಡರು, ಬಂಧಿತರಾಗಿ ಜೈಲು ಸೇರಿದರು.1934ರ ನಂತರ ಸಮಾಜವಾದಿ ಪಾರ್ಟಿ ರೂಪಿಸುತ್ತಿದ್ದ ರೈತ ಹೋರಾಟದಲ್ಲಿ ಸಾಲೊಮನ್ ಸಕ್ರಿಯವಾಗಿದ್ದರು. ಕಾಗೋಡು ರೈತ ಹೋರಾಟದಲ್ಲಿಯೂ ಭಾಗವಹಿಸಿದ್ದರು. 1973ರಲ್ಲಿ ನಡೆದ ಸಂಡೂರು ಭೂ ಹೋರಾಟದಲ್ಲೂ ಅವರ ಪಾತ್ರ ದೊಡ್ಡದು. ಹೋರಾಟದ ನಲವತ್ತು ದಿನಗಳ ಕಾಲ ಸಂಡೂರಿನಲ್ಲಿಯೇ ಇದ್ದು ಚಳವಳಿ ರೂಪಿಸುವಲ್ಲಿ ಕ್ರಿಯಾಶೀಲರಾಗಿದ್ದರು. ಗೋಪಾಲ ಗೌಡರೊಂದಿಗೆ ನಡೆಸಿದ ಪತ್ರವ್ಯವಹಾರಗಳನ್ನು ನೋಡಿದರೆ ಸಮಾಜವಾದಿಯಾಗಿ ಅವರಿಗಿದ್ದ ಬದ್ಧತೆಯ ಅರಿವಾಗುತ್ತದೆ.ಸಾಲೊಮನ್ ನಿಜಾರ್ಥದಲ್ಲಿ ಕರ್ನಾಟಕದ ಬಹುದೊಡ್ಡ ಕಾರ್ಮಿಕ ನಾಯಕ. ಎಪ್ಪತ್ತರ ದಶಕದಲ್ಲಿ ಕರ್ನಾಟಕ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಕೆ.ಜಿ ಮಹೇಶ್ವರಪ್ಪ ಸಾಲೊಮನ್‌ರನ್ನು ಕುರಿತು- `ಒಳ್ಳೇ ಲೇಬರ್ ಲೀಡರ್ ಅವ್ರ. ಅಂಡ್ ಕಮುನಿಟಿ ಡಿಸ್ ಅಡ್ವಂಟೇಜ್ ಇರ್ತದೆ. ಬಿಕಾಸ್ ಹಿ ವಾಸ್ ಎ ಕ್ರಿಶ್ಚಿಯನ್. ಬಟ್ ಹಿ ವಾಸ್ ಎ ವೆರಿಗುಡ್ ಲೀಡರ್. ಅವ್ರ ಭಾಳಾ  ವರ್ಷ ಟ್ರೇಡ್ ಯೂನಿಯನ್ನಿನ್ಯಾಗ ಇದ್ರು. ಹಿಂದ್ ಮಜ್ದೂರ್ ಪಂಚಾಯ್ತಗೆ ಅಧ್ಯಕ್ಷರಾಗಿದ್ರು. ಬಳ್ಳಾರಿಯಲ್ಲಿ ಭಾಳಾ ಹೋರಾಟ ಮಾಡ್ಯಾರ ಅವ್ರ. ನಮ್ ಸ್ಟೇಟ್‌ನ ಟಾಪ್‌ಮೋಷ್ಟ ಟ್ರೇಡ್ ಯೂನಿಯನ್ ಲೀಡರ್ ಅವರು~ ಎನ್ನುತ್ತಾರೆ.ಸಾಲೊಮನ್ ಲೋಹಿಯಾ ಪ್ರಣೀತ ಸಮಾಜವಾದದಲ್ಲಿ ಹೆಚ್ಚು ನಂಬಿಕೆ ಇಟ್ಟಿದ್ದರು. ಸಮಾಜವಾದಿ ಸಿದ್ಧಾಂತದ ನಿಜದ ಜೀವಂತಿಕೆ ಇರುವುದು ಸಾಮಾಜಿಕ ಅಸಮಾನತೆ ಹೋಗಲಾಡಿಸಲು ನಡೆಸುವ ಹೋರಾಟಗಳಲ್ಲಿ ಎನ್ನುವುದವರ ನಂಬಿಕೆಯಾಗಿತ್ತು. ಹಾಗಾಗಿ ಅವರು ಬಳ್ಳಾರಿಯಲ್ಲಿ ಹತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳನ್ನು ಸ್ಥಾಪಿಸಿದ್ದರು.ಹಮಾಲಿಗಳ ಸಂಘ, ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಂಘ, ಮೈನ್ಸ್ ಕಾರ್ಮಿಕರ ಸಂಘ, ಪುರಸಭಾ ಕಾರ್ಮಿಕರ ಸಂಘ, ಬೀಡಿ ಕಾರ್ಮಿಕರು, ಆಟೋಮೊಬೈಲ್ ಕಾರ್ಮಿಕರು, ವಿದ್ಯುತ್ ಇಲಾಖೆಯ ಕಾರ್ಮಿಕರ ಸಂಘ-ಹೀಗೆ ಅಸಂಘಟಿತ ಕಾರ್ಮಿಕರಲ್ಲಿ ಸಂಘಟಿತ ಮನೋಭಾವ ಬೆಳೆಸುವಲ್ಲಿ ಬಳ್ಳಾರಿ ಭಾಗದಲ್ಲಿ ಸಾಲೊಮನ್ ವಹಿಸಿದ ಪಾತ್ರ ದೊಡ್ಡದು.

ಅವರು ಅಖಿಲ ಭಾರತ ಸಕ್ಕರೆ ಕಾರ್ಮಿಕರ ಒಕ್ಕೂಟದ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯ ಸಕ್ಕರೆ ಕಾರ್ಖಾನೆ ಸಂಘಗಳ ಒಕ್ಕೂಟಕ್ಕೆ ರಾಜ್ಯಾಧ್ಯಕ್ಷರಾಗಿದ್ದರು.ಹಿಂದ್ ಮಜ್ದೂರ್ ಪಂಚಾಯ್ತಗೆ ಅಧ್ಯಕ್ಷರಾಗಿದ್ದರು. ಅರಸು ಅವಧಿಯಲ್ಲಿ ವಿಧಾನ ಪರಿಷತ್ ಮೂಲಕ ಕಾರ್ಮಿಕ ಮಂತ್ರಿಯಾಗಲು ಇದ್ದ ಆಹ್ವಾನವನ್ನು ನಿರಾಕರಿಸಿದರಂತೆ, ಕಾರಣ ಕಣ್ಣ ಮುಂದೆಯೇ ಸಮಾಜವಾದಿ ನಾಯಕರುಗಳು ರಾಜಕಾರಣದಲ್ಲಿ ತತ್ವ ಸಿದ್ಧಾಂತಗಳಿಗೆ ತಿಲಾಂಜಲಿಯಿಟ್ಟು ರಾಜಿಯಾದದ್ದು.ಅವಿರತ ಹೋರಾಟಗಳ ನಡುವೆ ಸಾಲೊಮನ್ ಮನೆ ಮರೆತಿದ್ದರು. ಬಳ್ಳಾರಿಯ ಗ್ಲಾಸ್ ಬಜಾರಿನಲ್ಲಿರುವ ಅವರ ಮಗ ಚಂದ್ರನ್ ಸಾಲೊಮನ್ ಮಾತುಗಳಲ್ಲಿ ಆ ವಿಷಾದ ಕಾಣುತ್ತದೆ. ರೆವಿನ್ಯೂ ಇನ್‌ಸ್ಪೆಕ್ಟರಾಗಿ ಕೆಲಸಕ್ಕೆ ಸೇರಿದ್ದವರು ರಾಜೀನಾಮೆ ನೀಡಿ, ಸಂಪೂರ್ಣ ಹೋರಾಟದಲ್ಲಿಯೇ ಮುಳುಗಿದರು. ಆಗ ಒಬ್ಬ ಗಂಡು ಮಗ ಐದು ಜನ ಹೆಣ್ಣುಮಕ್ಕಳ ತುಂಬು ಸಂಸಾರವನ್ನು ದಾಸನ್ ಅವರ ಪತ್ನಿ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ನಿರ್ವಹಿಸಿದ್ದಾರೆ.ಬಳ್ಳಾರಿಯಲ್ಲಿ ಮಹಾಬಳೇಶ್ವರಪ್ಪ, ರಂಜಾನ್ ಸಾಬ್, ಮಳೆಬೆನ್ನೂರು, ಯಜಮಾನ ಶಾಂತರುದ್ರಪ್ಪ ಮೊದಲಾದ ಗಾಂಧಿವಾದಿಗಳ ಪಡೆ ದೊಡ್ಡದಿತ್ತು. ಈ ಸಾಲಿಗೆ ಸೇರುವ ಮತ್ತೊಂದು ಹೆಸರು ಸಾಲೊಮನ್ ಅವರದು. `ಬಳ್ಳಾರಿಯ ಗಾಂಧಿ~ ಎನ್ನುವುದು ಅವರಿಗೆ ಅನ್ವರ್ಥವೂ ಆಗಿತ್ತು. ಕಾರಣ ಅವರು ಸರಳಜೀವಿ. ಹಣ ಅಧಿಕಾರಕ್ಕಾಗಿ ಎಂದೂ ಆಸೆಪಡಲಿಲ್ಲ. ಗಾಂಧಿಯ ಅಸಹಕಾರ ಚಳವಳಿಯ ತಾತ್ವಿಕತೆಯನ್ನು ಆಧರಿಸಿ ಕಾರ್ಮಿಕ ಚಳವಳಿಗಳನ್ನು ರೂಪಿಸುತ್ತಿದ್ದರು.ಬಳ್ಳಾರಿಯ ಜನ ದಾಸೆನ್ ಅವರನ್ನು ಗಾಂಧಿ ಎಂದು ಕರೆದದ್ದಕ್ಕೋ ಏನೋ ಅವರು ತಮ್ಮ ಕೊನೆಯುಸಿರೆಳೆದದ್ದೂ ಗಾಂಧಿ ಹುಟ್ಟಿದ ದಿನದಂದೇ (ಅಕ್ಟೋಬರ್ 2, 1995). ಇಂತಹ ಹೋರಾಟಗಾರನನ್ನು ಬಳ್ಳಾರಿಯ ಜನರೀಗ ಮರೆವಿಗೆ ಸರಿಸಿದ್ದಾರೆ.     

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.