ಬಳ್ಳಾರಿ: ಐದು ಕಡೆ ಶಕ್ತಿ ಪ್ರದರ್ಶನ

7

ಬಳ್ಳಾರಿ: ಐದು ಕಡೆ ಶಕ್ತಿ ಪ್ರದರ್ಶನ

Published:
Updated:
ಬಳ್ಳಾರಿ: ಐದು ಕಡೆ ಶಕ್ತಿ ಪ್ರದರ್ಶನ

ಬಳ್ಳಾರಿ: ಚಿತ್ರಮಂದಿರದ ಹೊರಗೆ ರಾರಾಜಿಸುವ ಕನ್ನಡ ಚಿತ್ರಗಳ ಪೋಸ್ಟರ್ ನೋಡಿ, ಚಿತ್ರ ವೀಕ್ಷಣೆಗೆಂದು ಟಿಕೆಟ್ ಪಡೆಯಲು ಹೋದರೆ, ‘ಕನ್ನಡ ಇಲ್ಲ, ತೆಲುಗು ಚಿತ್ರ ಇದೆ ನೋಡಿ’ ಎಂದು ಟಿಕೆಟ್ ಕೊಡುವವರು ಹೇಳುತ್ತಾರೆ.ಕನ್ನಡ ಚಿತ್ರ ನೋಡಬೇಕು ಎಂದು ಹೋದವರಿಗೆ ಒತ್ತಾಯಪೂರ್ವಕವಾಗಿ ತೆಲುಗು ಚಿತ್ರ ನೋಡುವ ಸೌಭಾಗ್ಯ.

ಜ್ಯೂನಿಯರ್ ಎನ್‌ಟಿಆರ್ ಅಭಿನಯದ ‘ಶಕ್ತಿ’ ತೆಲುಗು ಚಿತ್ರ ನಗರದಲ್ಲಿ ಶುಕ್ರವಾರವಷ್ಟೇ ನಗರದ ಒಟ್ಟು 8 ಚಿತ್ರಮಂದಿರಗಳ ಪೈಕಿ ಐದು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ.ಹಳೆ ಬಸ್ ನಿಲ್ದಾಣದ ಬಳಿಯಿರುವ ನಟರಾಜ ಕಾಂಪ್ಲೆಕ್ಸ್‌ನ ನಾಲ್ಕೂ ಚಿತ್ರಮಂದಿರಗಳು ಹಾಗೂ ರಾಧಿಕಾ ಚಿತ್ರಮಂದಿರದಲ್ಲಿ ‘ಶಕ್ತಿ’ ಪ್ರದರ್ಶನ ನಡೆಯುತ್ತಿದ್ದು, ಮುಗಿಬಿದ್ದ ಅಭಿಮಾನಿಗಳಿಗೋಸ್ಕರ ಬೆಳಗಿನಜಾವ 2.30ಕ್ಕೆ ಚಿತ್ರ ಪ್ರದರ್ಶನವನ್ನು ಆರಂಭಿಸಲಾಗಿದೆ.ಶುಕ್ರವಾರವಷ್ಟೇ ರಾಜ್ಯದಾದ್ಯಂತ ಬಿಡುಗಡೆಯಾದ ‘ಸಂಜು ವೆಡ್ಸ್ ಗೀತಾ’ ಚಿತ್ರವು ನಟರಾಜ ಕಾಂಪ್ಲೆಕ್ಸ್‌ನಲ್ಲಿ ಬಿಡುಗಡೆಯಾಗಿದೆ ಎಂದು ಪತ್ರಿಕೆಗಳಲ್ಲಿನ ರಾಜ್ಯವ್ಯಾಪಿ ಜಾಹೀರಾತುಗಳಲ್ಲಿ ಪ್ರಕಟವಾಗಿದೆ. ಆದರೆ, ಬಳ್ಳಾರಿಯಲ್ಲಿ ಆ ಚಿತ್ರ ಬಿಡುಗಡೆಯಾಗಿಯೇ ಇಲ್ಲ. ಅಲ್ಲದೇ ಪ್ರಿನ್ಸ್ ಚಿತ್ರ ಕೂಡ ಬಳ್ಳಾರಿಗೆ ಬಂದಿಲ್ಲ.ನಟರಾಜ ಕಾಂಪ್ಲೆಕ್ಸ್‌ನಲ್ಲಿ ಸುದೀಪ್ ಅಭಿನಯದ ‘ಕೆಂಪೇಗೌಡ’, ಹಾಗೂ ಶ್ರೀಕಿ ಅಭಿನಯದ ‘ಒಲವೇ ಮಂದಾರ’ ಚಿತ್ರಗಳು ಪ್ರದರ್ಶನ ಕಾಣುತ್ತಿರುವುದಾಗಿ ಪೋಸ್ಟರ್‌ಗಳು ಹೇಳುತ್ತವೆ. ನೋಡಲು ತೆರಳಿದ ಬಳ್ಳಾರಿಯ ಕನ್ನಡ ಚಿತ್ರ ಪ್ರೇಮಿಗಳಿಗೆ ಮಾತ್ರ ತೀವ್ರ ನಿರಾಸೆ ಎದುರಾಗಿದೆ.ಇಲ್ಲಿರುವ ಯಾವುದೇ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳ ಪ್ರದರ್ಶನ ಇಲ್ಲ. ದರ್ಶನ್, ರಮ್ಯಾ ಅಭಿಮಾನಿಗಳು ತಮ್ಮ ಆರಾಧ್ಯದೈವದ ಚಿತ್ರ ನೋಡಬೇಕೆನ್ನುವ ಕಾತರದಲ್ಲಿದ್ದರೂ ಅವರ ಚಿತ್ರಗಳು ಬಿಡುಗಡೆಯಾಗಿಲ್ಲ. ಸುದೀಪ್ ಅಭಿನಯದ ‘ಕೆಂಪೇಗೌಡ’ ಚಿತ್ರ ನೋಡಬೇಕು ಎಂದು ತೆರಳಿದರೆ ಆ ಚಿತ್ರದ ಪೋಸ್ಟರ್ ಇತ್ತಾದರೂ ಪ್ರದರ್ಶನ ಇಲ್ಲ ಎಂದು ತಿಳಿದು ಬೇಸರವಾಯಿತು ಎಂದು ಕನ್ನಡ ಚಿತ್ರಪ್ರೇಮಿ ಮೋಹನ್‌ಕುಮಾರ್ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡ.‘ಕನ್ನಡ ಚಿತ್ರ ಪ್ರದರ್ಶಿಸುವಂತೆ ಎಷ್ಟೇ ಹೋರಾಟ ಮಾಡಿದರೂ ಒಮ್ಮೊಮ್ಮೆ ಚಿತ್ರ ಪ್ರದರ್ಶನವನ್ನು ರದ್ದುಗೊಳಿಸಲಾಗುತ್ತದೆ. ಬಳ್ಳಾರಿ ಕರ್ನಾಟಕದಲ್ಲಿದೆಯೋ, ಆಂಧ್ರದಲ್ಲಿದೆಯೋ ಎಂಬುದೇ ಅರ್ಥವಾಗುವುದಿಲ್ಲ’  ಎಂದು ನವಕರ್ನಾಟಕ ಯುವಶಕ್ತಿ ಸಂಘಟನೆಯ ಚಂದ್ರಶೇಖರ ಆಚಾರ್, ಚಾನಾಳ್ ವೀರಾರೆಡ್ಡಿ, ವಿ.ರಾಮಚಂದ್ರ, ಸಿದ್ಮಲ್ ಮಂಜುನಾಥ ತಿಳಿಸುತ್ತಾರೆ.ಕನ್ನಡದ ನಟ-ನಟಿಯರು, ನಿರ್ಮಾಪಕರ ನಡುವೆ ಜಗಳವಾದರೆ ಒಬ್ಬರನ್ನು ನಿಷೇಧಿಸುವ ಚಲನಚಿತ್ರ ವಾಣಿಜ್ಯ ಮಂಡಳಿ, ಬಳ್ಳಾರಿಯಲ್ಲಿ ಕನ್ನಡ ಚಿತ್ರವೇ ಇಲ್ಲದಿದ್ದರೂ ಗಮನಿಸದೇ ಇರುವುದು ಏಕೆ? ಎಂದೂ ಅವರು ಸಿಟ್ಟಿನಿಂದ ಕೇಳುತ್ತಾರೆ.ಕನ್ನಡ ಪ್ರೇಕ್ಷಕರೇ ಇಲ್ಲ


ಕನ್ನಡ ಚಿತ್ರ ಪ್ರದರ್ಶನ ಇರುವುದು ನಿಜ. ಆದರೆ, ಚಿತ್ರ ನೋಡಲು ಪ್ರೇಕ್ಷಕರೇ ಬರದಿದ್ದರೆ ಪ್ರದರ್ಶನ ಮಾಡುವುದಾದರೂ ಹೇಗೆ? ಎಂದು ನಟರಾಜ ಕಾಂಪ್ಲೆಕ್ಸ್ ವ್ಯವಸ್ಥಾಪಕ ಲಕ್ಷ್ಮೀಕಾಂತ ರೆಡ್ಡಿ ಪ್ರಶ್ನಿಸುತ್ತಾರೆ. ವಿಶ್ವಕಪ್ ಕ್ರಿಕೆಟ್ ಭರದಲ್ಲಿ ಕಳೆದ ಒಂದೂವರೆ ತಿಂಗಳಿಂದ ಚಿತ್ರಮಂದಿರಗಳು ಖಾಲಿ ಹೊಡೆಯುತ್ತಿವೆ. ಭಾರತ- ಪಾಕ್ ನಡುವಿನ ಸೆಮಿಫೈನಲ್ ಪಂದ್ಯದ ದಿನವಂತೂ ಚಿತ್ರಮಂದಿರಗಳನ್ನು ಪ್ರೇಕ್ಷಕರೇ ಬಾರದ್ದರಿಂದ ಅನಿವಾರ್ಯವಾಗಿ ಬಂದ್ ಮಾಡಲಾಗಿತ್ತು. ಇದೀಗ ಶನಿವಾರವೂ ಫೈನಲ್ ಪಂದ್ಯ ಇದೆ. ಅಂದೂ ಚಿತ್ರಮಂದಿರಗಳು ಖಾಲಿ ಹೊಡೆಯವುದು ಶತಃಸಿದ್ಧ. ಹೀಗಾದರೆ ಚಿತ್ರಮಂದಿರ ನಡೆಸುವುದು ಹೇಗೆ? ಎಂಬುದೇ ಅರ್ಥವಾಗುತ್ತಿಲ್ಲ ಎಂದೂ ಅವರು ಅಲವತ್ತುಕೊಳ್ಳುತ್ತಾರೆ.ದರ್ಶನ್ ಅಭಿನಯದ ‘ಪ್ರಿನ್ಸ್’ ಚಿತ್ರವನ್ನು ಭಾನುವಾರದಿಂದ ಬಿಡುಗಡೆ ಮಾಡುವುದಾಗಿ ವಿತರಕರೇ ತಿಳಿಸಿದ್ದಾರೆ. ಕನ್ನಡ ಚಿತ್ರಗಳಿಗೆ ಜನ ಬಾರದ್ದರಿಂದ  ‘ಶಕ್ತಿ’ ಚಿತ್ರಕ್ಕೆ ಬಂದ ಹೆಚ್ಚುವರಿ ಪ್ರೇಕ್ಷಕರಿಗೂ ಅಲ್ಲೇ ಪ್ರವೇಶ ನೀಡಿ, ಅದೇ ಚಿತ್ರ ಪ್ರದರ್ಶಿಸಲಾಗಿದೆ. ಇತ್ತೀಚೆಗಷ್ಟೇ ಪುನೀತ್ ಅಭಿನಯದ ‘ಜಾಕಿ’ ಚಿತ್ರ ಬಿಡುಗಡೆಯಾದಾಗ ಎಲ್ಲ ನಾಲ್ಕೂ ಚಿತ್ರಮಂದಿರಗಳಲ್ಲಿ ಪ್ರದರ್ಶನಗೊಂಡಿತು ಎಂದು ಅವರು ತಿಳಿಸುತ್ತಾರೆ.‘ನಮ್ಮ ಎರಡು ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರವನ್ನು ಕಡ್ಡಾಯವಾಗಿ ಪ್ರದರ್ಶಿಸಲಾಗುತ್ತದೆ. ಆದರೆ, ಪ್ರೇಕ್ಷಕರೇ ಬಾರದ್ದರಿಂದ ಶುಕ್ರವಾರ ತೆಲುಗು ಚಿತ್ರ ಪ್ರದರ್ಶಿಸಲಾಗಿದೆ. ಮಧ್ಯಾಹ್ನದ ನಂತರ ಆ ಚಿತ್ರಕ್ಕೂ ಪ್ರೇಕ್ಷಕರ ಕೊರತೆ ಕಂಡುಬಂದಿದೆ’ ಎಂದು ಅವರು    ತಿಳಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry