ಬಳ್ಳಾರಿ ಕೋಟೆಯಲ್ಲೆಗ ಬರೀ ಕತ್ತಲು!

7
ಬೆಳಕು ವಿನ್ಯಾಸದ ಯೋಜನೆ ಸ್ಥಗಿತ: ಲಕ್ಷಾಂತರ ಮೌಲ್ಯದ ದೀಪಗಳು ಹಾಳು

ಬಳ್ಳಾರಿ ಕೋಟೆಯಲ್ಲೆಗ ಬರೀ ಕತ್ತಲು!

Published:
Updated:
ಬಳ್ಳಾರಿ ಕೋಟೆಯಲ್ಲೆಗ ಬರೀ ಕತ್ತಲು!

ಬಳ್ಳಾರಿ: ಐತಿಹಾಸಿಕ ಬಳ್ಳಾರಿ ಕೋಟೆಗೆ ಮೆರುಗು ನೀಡುವ ಸಲುವಾಗಿ ವರ್ಷಗಳ ಹಿಂದೆ ಆರಂಭವಾಗಿದ್ದ ಬೆಳಕು ಯೋಜನೆಯು ನೆನೆಗುದಿಗೆ ಬಿದ್ದಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಖರೀದಿಸಿದ್ದ ನೂರಾರು ದೀಪಗಳು ಹಾಳಾಗಿದ್ದು, ಗುಡ್ಡದ ಮೇಲೆ ಬೆಳಕೇ ಕಾಣದಂತಾಗಿದೆ.

ಬಳ್ಳಾರಿಯ ಹೃದಯ ಭಾಗದಿಂದ ಸುಮಾರು 4 ಕಿ.ಮೀ. ದೂರದಲ್ಲಿರುವ ಬಳ್ಳಾರಿ ಗುಡ್ಡದಲ್ಲಿ ಬೆಳಕು ಯೋಜನೆಯನ್ನು ಭಾರತೀಯ ಪ್ರಾಚ್ಯವಸ್ತು ಇಲಾಖೆಯ ಸಹಯೋಗದಲ್ಲಿ ಪ್ರವಾಸೋದ್ಯಮ ಇಲಾಖೆಯು ಹಮ್ಮಿಕೊಂಡಿತ್ತು. ಇದಕ್ಕಾಗಿ ಸುಮಾರು 188 ವಿಶೇಷ ದೀಪಗಳನ್ನು ಖರೀದಿ ಮಾಡಲಾಗಿತ್ತು. ಈ ದೀಪಗಳಿಂದ ಇಲ್ಲಿನ ಬೃಹತ್ ಆಕಾರದ ಕಲ್ಲುಬಂಡೆಗಳ ಮೇಲೆ ಹಾಗೂ ಕೋಟೆಗಳ ಮೇಲೆ ಬೆಳಕು ಹೊರಹೊಮ್ಮಿಸಿ ಕೋಟೆಯನ್ನು ವರ್ಣಮಯವಾಗಿ ಶೃಂಗರಿಸಲಾಗುತ್ತಿತ್ತು. ಸುಮಾರು ಎರಡು ಕಿ.ಮೀ. ಉದ್ದದ ಹಾದಿಯಲ್ಲಿ ಹೀಗೆ ದೀಪಗಳನ್ನು ವಿನ್ಯಾಸಗೊಳಿಸಲಾಗಿತ್ತು. ಪ್ರತಿ ಭಾನುವಾರ, ಸರ್ಕಾರಿ ರಜಾ ದಿನಗಳಂದು ಇಡೀ ಬೆಟ್ಟಕ್ಕೆ ಬೆಳಕಿನ ವಿನ್ಯಾಸ ಮಾಡಲಾಗುತ್ತಿತ್ತು. ಬಳ್ಳಾರಿಯ ಯಾವುದೇ ಮೂಲೆಯಲ್ಲಿ ನಿಂತು ನೋಡಿದರೂ ಆ ದೃಶ್ಯ ಕಣ್ಣಿಗೆ ಕಟ್ಟುವಂತಿತ್ತು ಎಂದು ಇಲ್ಲಿನ ನಿವಾಸಿಗಳು ನೆನೆಪಿಸಿಕೊಳ್ಳುತ್ತಾರೆ.ಆದರೆ ಹೀಗೆ ಬೆಳಕು ಚೆಲ್ಲುತ್ತಿದ್ದ ದೀಪಗಳ ಪೈಕಿ ಯಾವೊಂದು ದೀಪಗಳು ಈಗ ಸುಸ್ಥಿತಿಯಲ್ಲಿ ಉಳಿದಿಲ್ಲ. ಸಾಕಷ್ಟು ಹಿಂದೆಯೇ ಈ ಯೋಜನೆಯೂ ನಿಂತುಹೋಗಿದೆ. ಬಹುತೇಕ ದೀಪಗಳ ಗಾಜುಗಳನ್ನು ಕಿಡಿಗೇಡಿಗಳು ಹೊಡೆದು ಹಾಕಿದ್ದಾರೆ. ಕೆಲವು ದೀಪಗಳನ್ನು ಹೊತ್ತೊಯ್ಯಲಾಗಿದೆ. ಹೀಗಾಗಿ ಖಾಲಿ ಪೆಟ್ಟಿಗೆಗಳಷ್ಟೇ ಕಾಣುತ್ತಿವೆ.

ಗುಡ್ಡದಲ್ಲಿನ ಹುಲ್ಲನ್ನು ಸುಡಲು ಬೆಂಕಿ ಹಚ್ಚಲಾಗಿದ್ದು, ಅದರ ಶಾಖಕ್ಕೆ ವೈರುಗಳು ಸುಟ್ಟುಹೋಗಿವೆ. ಕೆಲವು ಕಡೆ ಸಂಪರ್ಕವೇ ಕಡಿದುಹೋಗಿದೆ. ವಿದ್ಯುತ್ ಪೆಟ್ಟಿಗೆಗಳ ಸ್ಥಿತಿ ಸಹ ಇದಕ್ಕಿಂತ ಭಿನ್ನವಾಗಿಲ್ಲ. ಸಾಕಷ್ಟು ಫ್ಯೂಜ್‌ಗಳು ಕಳ್ಳರ ಪಾಲಾಗಿವೆ. ಉಳಿದವು ಉಪಯೋಗಕ್ಕೆ ಬಾರದೇ ಹಾಳಾಗಿವೆ.

`ಜನಾರ್ದನ ರೆಡ್ಡಿಯವರು ಪ್ರವಾಸೋದ್ಯಮ ಸಚಿವರಾಗಿದ್ದ ಸಂದರ್ಭ ಅವರ ವಿಶೇಷ ಆಸಕ್ತಿಯಿಂದ ಈ ಯೋಜನೆ ಕಾರ್ಯಾರೂಪಕ್ಕೆ ಬಂದಿತ್ತು. ಒಂದಿಷ್ಟು ದಿನ ಚೆನ್ನಾಗಿಯೂ ನಡೆಯಿತು.ವಾರಾಂತ್ಯಗಳಂದು ಇಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗುತಿತ್ತು. ಆದರೆ ಕ್ರಮೇಣ ಇಲ್ಲಿನ ದೀಪಗಳು ಒಂದೊಂದೇ ಕೆಡತೊಡಗಿದವು. ನಿರ್ವಹಣೆಯೂ ಕೈತಪ್ಪಿತು. ಈಗ ಒಂದೂ ದೀಪ ಉಳಿದಿಲ್ಲ. ಇದನ್ನು ಕಂಡರೆ ಬೇಸರವಾಗುತ್ತಿದೆ' ಎಂದು ಕೋಟೆಗೆ ಆಗಾಗ್ಗೆ ಭೇಟಿ ನೀಡುವ, ಹೆಸರು ಹೇಳಲಿಚ್ಛಿಸದ ವ್ಯಕ್ತಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ನನಗೆ ಗೊತ್ತಿಲ್ಲ... ನನಗೆ ಗೊತ್ತಿಲ್ಲ...

`ಬಳ್ಳಾರಿ ಗುಡ್ಡವನ್ನು ಸದ್ಯ ಭಾರತೀಯ ಪ್ರಾಚ್ಯವಸ್ತು ಇಲಾಖೆಯು ನಿರ್ವಹಿಸುತ್ತಿದೆ' ಎಂದು ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ತಿಳಿಸಿದರು. ಈ ಕುರಿತು ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ `ನಾವು ಇಲ್ಲಿ ಕಾವಲು ಇನ್ನಿತರ ವ್ಯವಸ್ಥೆಗಳನ್ನಷ್ಟೇ ನೋಡಿಕೊಳ್ಳುತ್ತೇವೆ. ಬೆಳಕು ಮತ್ತು ದೀಪಗಳ ನಿರ್ವಹಣೆಯನ್ನು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ನೋಡಿಕೊಳ್ಳುತ್ತಾರೆ' ಎಂದರು.ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಜು ಅವರನ್ನು ಸಂಪರ್ಕಿಸಿದಾಗ `ಸದ್ಯ ಪ್ರವಾಸೋದ್ಯಮ ಇಲಾಖೆಗೂ ಇದಕ್ಕೂ ಸಂಬಂಧವಿಲ್ಲ. ಈಗಾಗಲೇ ಅದನ್ನು ಮಹಾನಗರಪಾಲಿಕೆಗೆ ಹಸ್ತಾಂತರಿಸಿದ್ದೇವೆ' ಎಂಬ ಹಾರಿಕೆಯ ಉತ್ತರ ನೀಡಿದರು. ಇಲಾಖೆಯಿಂದ ಈ ಕೆಲಸ ನಡೆದಿದ್ದರೂ ಎಲ್ಲ ಕೆಲಸವನ್ನೂ ಜಿಲ್ಲಾಧಿಕಾರಿ ಕಚೇರಿಯವರೇ ಮಾಡಿಸಿದ್ದಾರೆ. ಅವರನ್ನೇ ಕೇಳಿ ಎಂದರು. ಯೋಜನೆ ಯಾವಾಗ ಆರಂಭವಾಯಿತು? ಎಷ್ಟು ವೆಚ್ಚ? ಯಾವೊಂದು ಮಾಹಿತಿಯನ್ನೂ ಅವರು ನೀಡಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry