ಬಳ್ಳಾರಿ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆ: ಸೇತುವೆ ಕುಸಿತ

7

ಬಳ್ಳಾರಿ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆ: ಸೇತುವೆ ಕುಸಿತ

Published:
Updated:

ಬಳ್ಳಾರಿ: ತಾಲ್ಲೂಕಿನ ವಿವಿಧೆಡೆ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗೆವರೆಗೆ ಸುರಿದ ಭಾರಿ ಮಳೆಯಿಂದಾಗಿ ಈ ಭಾಗದಲ್ಲಿನ ಹಳ್ಳ- ಕೊಳ್ಳಗಳು ತುಂಬಿಹರಿಯುತ್ತಿದ್ದು ಹಗರಿ ನದಿಯಲ್ಲಿ ಪ್ರವಾಹ ಉಂಟಾಗಿದೆ.ತಾಲ್ಲೂಕಿನ ಕಮ್ಮರಚೇಡು ಮತ್ತು ರೂಪನಗುಡಿ ಗ್ರಾಮಗಳ ನಡುವಿನ ತಾತ್ಕಾಲಿಕ ಸೇತುವೆ ಕುಸಿದು, ಸಂಪರ್ಕ ಕಡಿತಗೊಂಡಿದೆ. ಗುಡುಗು, ಸಿಡಿಲು, ಗಾಳಿ ಜತೆ ಸುರಿದ ಭಾರಿ ಮಳೆ ಹಿನ್ನೆಲೆಯಲ್ಲಿ ರೂಪನಗುಡಿ, ಕಮ್ಮರಚೇಡು, ಶಂಕರಬಂಡೆ, ಕುಂಟನಾಳ, ವಿಘ್ನೇಶ್ವರ ಕ್ಯಾಂಪ್, ಅಸುಂಡಿ, ಗೋಡೆಹಾಳ ಮತ್ತಿತರ ಗ್ರಾಮಗಳ ಬಳಿ ವಿದ್ಯುತ್ ಕಂಬಗಳು, ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ನೆಲಕಚ್ಚಿವೆ.

ಇದರಿಂದಾಗಿ ಈ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಹತ್ತಿ, ಜೋಳ, ಮೆಕ್ಕೆ ಜೋಳ, ಮೆಣಸಿನಕಾಯಿ ಬೆಳೆಗೆ ಅಲ್ಪ ಪ್ರಮಾಣದ ಹಾನಿಯಾಗಿದೆ.ಆಂಧ್ರಪ್ರದೇಶದ ಗಡಿಭಾಗ ಹಾಗೂ ಚಿತ್ರದುರ್ಗ ಜಿಲ್ಲೆಯ ಕೆಲವು ಪ್ರದೇಶಗಳು ಸೇರಿದಂತೆ ಭಾರಿ ಮಳೆಯಾಗಿದೆ. ಮೂರು ವರ್ಷಗಳ ನಂತರ ವೇದಾವತಿ (ಹಗರಿ) ನದಿ ತುಂಬಿ ಹರಿಯುತ್ತಿದೆ.ಬಸ್ ಸಂಚಾರ ಸ್ಥಗಿತ: ಇದೇ ನದಿಗೆ ತಾಲ್ಲೂಕಿನ ಮೋಕಾ ಗ್ರಾಮದ ಬಳಿಯ ಸೇತುವೆಯ ಒಂದು ಭಾಗ ಕುಸಿದು 10ಕ್ಕೂ ಅಧಿಕ ಗ್ರಾಮಗಳಿಗೆ ಬಸ್ ಸಂಚಾರ ಸ್ಥಗಿತಗೊಂಡಿದೆ.ಅಲ್ಲದೆ, ಆಂಧ್ರಪ್ರದೇಶದ ಆದೋನಿಗೆ ಸಂಪರ್ಕ ಕಲ್ಪಿಸುವ ಮಾರ್ಗ ಸಹ ಕಡಿತಗೊಂಡಿದೆ. ಮೋಕಾ ಗ್ರಾಮದ ಬಳಿಯ ಎಂ.ಗೋನಾಳ, ತಂಬ್ರಳ್ಳಿ, ಜಾಲಿಹಾಳ, ಬೊಮ್ಮನಾಳ, ಸಿಂಧುವಾಳ, ಯರ್ರಗುಡಿ, ಬೆಣಕಲ್, ಡಿ.ನಾಗೇನಹಳ್ಳಿ, ಜಿ.ನಾಗೇನಹಳ್ಳಿ ಮತ್ತಿತರ ಗ್ರಾಮಗಳ ಸಂಪರ್ಕವೂ ಕಡಿತಗೊಂಡಿದೆ.ಎತ್ತುಗಳ ಸಾವು: ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಹುಲ್ಲೂರ ಹಾಗೂ ಮುದೇನಗುಡಿ ಗ್ರಾಮದ ನಡುವಿನ ಹಿರೇಹಳ್ಳದಲ್ಲಿ ಪ್ರವಾಹ ಬಂದು, ಎರಡು ಎತ್ತುಗಳು ಸಾವಿಗಿಡಾಗಿವೆ. ಚಕ್ಕಡಿಯಲ್ಲಿದ್ದ ಮೂವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮಂಗಳವಾರ ನಡೆದಿದೆ.ಹುಲ್ಲೂರ ಗ್ರಾಮದ ರೈತರು ಮುಂಜಾನೆ ಹೊಲಕ್ಕೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry