ಬಳ್ಳಾರಿ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ

7

ಬಳ್ಳಾರಿ ಬಂದ್ ಕರೆಗೆ ಮಿಶ್ರ ಪ್ರತಿಕ್ರಿಯೆ

Published:
Updated:

ಬಳ್ಳಾರಿ: ಸಮರ್ಪಕ ವಿದ್ಯುತ್ ಪೂರೈಕೆಗೆ ಒತ್ತಾಯಿಸಿ ಸಾರ್ವಜನಿಕ ಹಿತಾಸಕ್ತಿ ವೇದಿಕೆ ಮತ್ತು ಇತರೆ ಜನಪರ ಸಂಘಟನೆಗಳು ಕರೆ ನೀಡಿದ್ದ ಬಳ್ಳಾರಿ ಬಂದ್‌ಗೆ ಸೋಮವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.ಬ್ಯಾಂಕುಗಳು, ಚಲನಚಿತ್ರ ಮಂದಿರಗಳು, ಪೆಟ್ರೋಲ್ ಬಂಕ್‌ಗಳು ಹಾಗೂ ನಗರದ ಕೆಲ ಅಂಗಡಿ ಮುಂಗಟ್ಟುಗಳು ಬಂದ್‌ಗೆ ಸಹಕರಿಸಿದ್ದವು. ಆದರೆ ಬಹಳಷ್ಟು ಕಡೆ ವಾಣಿಜ್ಯ ವ್ಯವಹಾರ ಎಂದಿನಂತಿತ್ತು.

ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಹಾಗೂ ಶಾಲಾ ಕಾಲೇಜುಗಳು ಅಂಗಡಿ ಹಾಗೂ ಹೋಟೆಲ್‌ಗಳು ಕೆಲಕಾಲ ಬಂದ್ ಮಾಡಿ ನಂತರ ಎಂದಿನಂತೆ ವ್ಯವಹಾರದಲ್ಲಿ ನಿರತವಾದವು.ಬೆಂಗಳೂರು ರಸ್ತೆ, ಬ್ರಾಹ್ಮಣ ಬೀದಿ, ತೇರುಬೀದಿ, ಟ್ಯಾಂಕ್‌ಬಂಡ್ ರಸ್ತೆಗಳಲ್ಲಿ ಕೆಲಕಾಲ ಬಂದ್‌ನ ವಾತಾವರಣ ಕಂಡು ಬಂದಿತಾದರೂ, ಕೆಲವೇ ಗಂಟೆಯಲ್ಲಿ ಮಾಮೂಲಿ ವಹಿವಾಟು ಆರಂಭವಾಯಿತು. `ಬಳ್ಳಾರಿ ಬಂದ್~ ನಿಂದ ಎಲ್ಲ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳುತ್ತದೆ ಎಂದು ಭಾವಿಸಿದ್ದ ನಗರದ ಜನರಿಗೆ ಬಂದ್ ಬಿಸಿ ಅಷ್ಟಾಗಿ ತಟ್ಟಲಿಲ್ಲ.ವಿದ್ಯುತ್ ಕೊರತೆ ನೀಗಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಒತ್ತಾಯಿಸಿ ನಾನಾ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.ಗಡಗಿಚನ್ನಪ್ಪ ವತ್ತದಲ್ಲಿ ಜಮಾಯಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಸಾರ್ವಜನಿಕ ಹಿತಾಸಕ್ತಿ ವೇದಿಕೆ, ಮಹಾತ್ಮಗಾಂಧಿ ಕಾರ್ಮಿಕರ ಸಂಘ, ಅಖಿಲ ಭಾರತ ಅಹಿಂದ ಶಕ್ತಿ ಪರಿಷತ್, ಬಳ್ಳಾರಿ ಸಿದ್ಧ ಉಡುಪು ಘಟಕಗಳ ನೇತತ್ವದಲ್ಲಿ ಬಳ್ಳಾರಿ ಬಂದ್‌ಗೆ ಕರೆ ನೀಡಲಾಗಿತ್ತು. ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಬಂದ್ ಬೆಂಬಲಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಯುವಶಕ್ತಿ ಸಂಘಟನೆ ಕಾರ್ಯಕರ್ತರು ಪ್ರತೇಕವಾಗಿ ಜೆಸ್ಕಾಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದರು.ಖಾದರ್ ಬಾಷಾ, ಚಾಂದ್‌ಬಾಷಾ, ಗಿರಿಯಾದವ್, ರವಿಕುಮಾರ್, ಫಾರೂಕ್, ಪಿ.ಮೌಲಾ, ವಿ.ಜಯರಾಮ್, ಪಾರ್ಥಸಾರಥಿ, ಗಾರ್ಮೆಂಟ್ ಅಸೋಸಿಯೇಷನ್‌ನ ಮಲ್ಲಿಕಾರ್ಜುನಗೌಡ, ಪಿ.ಮೌಲಾಲಿ ಟ್ರ್ಯಾಕ್ಟರ್ ಹನುಮಂತಪ್ಪ ಮೊದಲಾದವರು ನೇತೃತ್ವ ವಹಿಸಿದ್ದರು. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry