ಬಳ್ಳಾರಿ: ಮಳೆ ಇಲ್ಲದೆ ರೈತರು ಕಂಗಾಲು

ಬುಧವಾರ, ಜೂಲೈ 24, 2019
27 °C

ಬಳ್ಳಾರಿ: ಮಳೆ ಇಲ್ಲದೆ ರೈತರು ಕಂಗಾಲು

Published:
Updated:

ಬಳ್ಳಾರಿ: ಎರಡು ವರ್ಷಗಳಿಂದ ಬರಗಾಲ ಎದುರಿಸುತ್ತಿರುವ ಜಿಲ್ಲೆಯಲ್ಲಿ ಈ ಬಾರಿ ಜುಲೈ ಕಾಲಿಟ್ಟರೂ ಸಮರ್ಪಕವಾಗಿ ಮಳೆ ಬೀಳುತ್ತಿಲ್ಲ. ಹೀಗಾಗಿ ಮತ್ತೆ ಬರದ ಭೀತಿ ಆವರಿಸಿದೆ. ಕೃಷಿಯನ್ನೇ ನೆಚ್ಚಿಕೊಂಡಿರುವ ರೈತ ಸಮುದಾಯವನ್ನು ಚಿಂತೆಗೆ ನೂಕಿದೆ.ಮೇ ಅಂತ್ಯದಲ್ಲಿ ಹಾಗೂ ಜೂನ್ ಮೊದಲ ವಾರದಲ್ಲಿ ರೋಹಿಣಿ ಮಳೆ ಅಲ್ಪ ಪ್ರಮಾಣದಲ್ಲಿ ಸುರಿದಿದ್ದರಿಂದ ಜೋಳ, ಮೆಕ್ಕೆ ಜೋಳ, ಸೂರ್ಯಕಾಂತಿ, ಸಜ್ಜೆ  ಮತ್ತಿತರ ಬಿತ್ತನೆ ಪೂರೈಸಿರುವ ರೈತರು ಆಕಾಶದತ್ತಲೇ ಮುಖ ಮಾಡಿದ್ದು, ನಂತರದ ಮೃಗಶಿರಾ ಹಾಗೂ ಆರಿದ್ರಾ ಮಳೆ ನಿರೀಕ್ಷಿತ ಪ್ರಮಾಣದಲ್ಲಿ ಸುರಿಯದೆ ಅವರನ್ನೆಲ್ಲ ನಿರಾಸೆ ಮಡುವಿನಲ್ಲಿ ಸಿಲುಕಿಸಿದೆ.ಹೂವಿನಹಡಗಲಿ, ಕೂಡ್ಲಿಗಿ, ಹಗರಿಬೊಮ್ಮನಹಳಲ್ಲಿ ಮತ್ತು ಸಂಡೂರು ತಾಲ್ಲೂಕುಗಳು ಮಳೆಯಾಶ್ರಿತ ಕೃಷಿ ಅವಲಂಬಿಸಿದ್ದು, ಜಿಲ್ಲೆಯಲ್ಲಿ ಈವರೆಗೆ ಕೇವಲ ಶೇ 31ರಷ್ಟು ಬಿತ್ತನೆ ಪೂರ್ಣಗೊಂಡಿದೆ.ಹೂವಿನ ಹಡಗಲಿಯಲ್ಲಿ ಮಾತ್ರ ಶೇ 72ರಷ್ಟು ಬಿತ್ತನೆಯಾಗಿದ್ದು, ಮಿಕ್ಕ ಕಡೆ ಅದರ ಪ್ರಮಾಣ ಶೇ 30 ದಾಟಿಲ್ಲ. ಬಳ್ಳಾರಿ, ಸಿರುಗುಪ್ಪ ಮತ್ತು ಹೊಸಪೇಟೆ ತಾಲ್ಲೂಕುಗಳ ಮಳೆಯಾಶ್ರಿತ ಪ್ರದೇಶದಲ್ಲೂ ಅಷ್ಟಾಗಿ ಬಿತ್ತನೆಯಾಗಿಲ್ಲ.ಈ ಮೂರೂ ತಾಲ್ಲೂಕುಗಳಲ್ಲಿ ತುಂಗಭದ್ರಾ ಜಲಾಶಯ ಅವಲಂಬಿಸಿರುವ ರೈತರು, ಜಮೀನು ಸಿದ್ಧಪಡಿಸಿಕೊಂಡು ಕಾಲುವೆಗೆ ನೀರು ಬಿಡುವುದನ್ನೇ ಕಾಯುತ್ತಿದ್ದಾರೆ. ಮುನಿರಾಬಾದ್‌ನಲ್ಲಿ ಇದೇ 9ರಂದು ನಡೆಯಲಿರುವ ನೀರಾವರಿ ಸಲಹಾ ಸಮಿತಿ ಸಭೆ ನಂತರ ನೀರು ಹರಿಸುವ ವೇಳಾಪಟ್ಟಿ ಅಂತಿಮವಾಗುವ ಸೂಚನೆಗಳಿವೆ.

ಗುಳೆ ಅನಿವಾರ್ಯ: `ಮಳೀ ಸುರೀಬಹುದು ಅಂತ ಊರಿಗೆ ಹೊಳ್ಳಿ ಬಂದು ಭೂಮಿ ಹರಗಿ ಬಿತ್ತಗಿ ಮಾಡೇವಿ. ಚೋಟುದ್ದ ಪೀಕ್‌ನ್ಯಾಗ ಬೆಳೆದ ಕಳೇವು ತೆಗಿಯಾಕತ್ತೇವಿ. ಎರಡ್ ವರ್ಸದಿಂದ ಮಳೀ ಆಗಿಲ್ಲ. ಈ ವರ್ಸನೂ ಮಳೀ ಬರವಲ್ದು. ಹಿಂಗ ಆದ್ರ ಇನ್ನೊಂದ್ 15 ದಿವಸ ನೋಡಿ ಮತ್ತ ಗೋವಾ ಕಡೆ ಗುಳೇ ಹೋಗಬೇಕಾಗತೈತಿ' ಎಂದು ಹೊಸಪೇಟೆ ತಾಲ್ಲೂಕಿನ ತಾಳೆ ಬಸಾಪುರ ತಾಂಡಾದ ಕೃಷಿ ಕೂಲಿಕಾರರು `ಪ್ರಜಾವಾಣಿ' ಎದುರು ಅಳಲು ತೋಡಿಕೊಂಡರು.`ಬ್ಯಾರೆ ಕಡೆ ಚೊಲೋ ಮಳೀ ಸುರಿಯಾಕತ್ತೈತಿ. ನೆರಿ ಬಂದು ಎಷ್ಟೋ ಮಂದಿ ಜೀವಾ ಕಳಕೊಂಡಾರ. ಇಲ್ಲಿ ಮಳೀ ಇಲ್ಲದ ನಮ್ಮ ಜೀವ ಹೊಂಟೈತಿ. ಮೂರು ವರ್ಸದಿಂದ ಮಳೀ ಕೈಕೊಡಾಕತ್ತೈತಿ. ಸಾಲ ಹೆಚ್ಚಾಗಾಕತ್ತೈತಿ. ಮಳೀ ಆಗಲಿಲ್ಲಂದ್ರ ಹೆಂಗ ಮಾಡಬೇಕು ಅನ್ನೂದು ತಿಳೀವಲ್ಲದು' ಎಂದು ಆಕಾಶದತ್ತಲೇ ದೃಷ್ಟಿ ನೆಟ್ಟಿರುವ ಗ್ರಾಮದ ಲಕ್ಷ್ಮಣ ನಾಯ್ಕ ಹೇಳಿದರು.`ಬಿತ್ತಗಿ ಮಾಡಿ 25 ದಿನಾ ಆತು. ಅವತ್ತಿಂದ ಇವತ್ತಿನವರೆಗೂ ದಿನಾಲೂ ಮೋಡ ಆಗತೈತಿ. ಆದರೂ ಮಳೀನ ಸುರಿವಲ್ದು. ಸಣ್ಣಗ ಜುಬ್ಬರದಂಗ ಮಳೀ ಸುರಿದರೂ ಉಪಯೋಗ ಇಲ್ಲ. ಗೊಂಜೋಳ, ಜೋಳ ಬಾಡಾಕತ್ತೈತಿ. ಇನ್ನೊಂದ್ ವಾರದಾಗ ಮಳೀ ಬರಲಿಲ್ಲಾ ಅಂದ್ರ ಬೆಳೀ ಪೂರ್ತಿ ಒಣಗತೈತಿ...' ಎಂದು ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮರಿಯಮ್ಮನಹಳ್ಳಿಯ ಬನ್ನಿಕಲ್ ಬಸಪ್ಪ ಬೇಸರ ವ್ಯಕ್ತಪಡಿಸಿದರು.ಜುಲೈ ಅಂತ್ಯದವರೆಗೆ ಒಂದೆರಡು ಉತ್ತಮ ಮಳೆ ಸುರಿದರೂ ಮಿಕ್ಕ ಶೇ 70 ಭಾಗದಲ್ಲಿ ಬಿತ್ತನೆ ಪೂರ್ಣಗೊಳ್ಳುತ್ತದೆ. ಇಲ್ಲದಿದ್ದರೆ ಈಗ ಬಿತ್ತನೆ ಮಾಡಿರುವ ಭೂಮಿಯಲ್ಲಿನ ಬೆಳೆಯೂ ಒಣಗುತ್ತದೆ. ಮಳೆ ಸುರಿಯಬಹುದು ಎಂಬುದು ಕೃಷಿ ಇಲಾಖೆಯ ಅಧಿಕಾರಿ ಮಹಾಬಲೇಶ್ವರಪ್ಪ ಅವರ ಆಶಾಭಾವನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry