ಬುಧವಾರ, ಅಕ್ಟೋಬರ್ 16, 2019
28 °C

ಬಳ್ಳಾರಿ ವಿಮಾನ ನಿಲ್ದಾಣ ಮರು ವಿನ್ಯಾಸಕ್ಕೆ ಶಿಫಾರಸು?

Published:
Updated:

ಬೆಂಗಳೂರು: ಬಳ್ಳಾರಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸ್ವಾಧೀನ ಮಾಡಿಕೊಳ್ಳಲಾಗಿದ್ದ 950 ಎಕರೆ ಜಮೀನಿನ ಪೈಕಿ 250 ಎಕರೆ ಜಮೀನಿಗೆ ಹೊರಡಿಸಲಾಗಿದ್ದ ಅಧಿಸೂಚನೆಯನ್ನು ಹೈಕೋರ್ಟ್ ರದ್ದು ಮಾಡಿರುವ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರ ವಿಮಾನ ನಿಲ್ದಾಣದ ವಿನ್ಯಾಸ ಕುರಿತು ಪುನಃ ಪರಿಶೀಲನೆ ನಡೆಸುವ ಸಾಧ್ಯತೆ ಇದೆ.ಭೂಮಿಯ ಲಭ್ಯತೆಗೆ ಅನುಗುಣವಾಗಿ ವಿಮಾನ ನಿಲ್ದಾಣದ ವಿನ್ಯಾಸವನ್ನು ಪುನಃ ಪರಿಶೀಲನೆಗೆ ಒಳಪಡಿಸುವಂತೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ, ಮಾರ್ಗ್ ಲಿಮಿಟೆಡ್ ಸಂಸ್ಥೆಗೆ ಶಿಫಾರಸು ಮಾಡಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

 

`ಈ ಯೋಜನೆಯ ಹಕ್ಕು ಪಡೆದುಕೊಂಡಿರುವ ಮಾರ್ಗ್ ಲಿಮಿಟೆಡ್ ಕಂಪೆನಿಯ ಜೊತೆ ಸರ್ಕಾರ ಶೀಘ್ರದಲ್ಲೇ ಸಭೆ ನಡೆಸಲಿದೆ. ವಿಮಾನ ನಿಲ್ದಾಣದ ವಿನ್ಯಾಸದಲ್ಲಿ ಬದಲಾವಣೆ ತರುವ ಕುರಿತು ಸಭೆಯಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು~ ಎಂದು ಇಲಾಖೆಯ ಕಾರ್ಯದರ್ಶಿ ರಾಜಕುಮಾರ್ ಖತ್ರಿ ತಿಳಿಸಿದರು.ಯೋಜನೆಗೆ ಅಗತ್ಯವಿರುವುದು 950 ಎಕರೆ ಭೂಮಿ. ಸರ್ಕಾರದ ಬಳಿ ಪ್ರಸ್ತುತ ಇರುವುದು 675 ಎಕರೆ ಭೂಮಿ. 250 ಎಕರೆ ಭೂಮಿ ಸ್ವಾಧೀನಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಹೈಕೋರ್ಟ್ ಬುಧವಾರ ರದ್ದುಮಾಡಿದೆ. ಜಿ. ಜನಾರ್ದನ ರೆಡ್ಡಿ ಅವರು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸಚಿವರಾಗಿದ್ದಾಗ ಈ ಯೋಜನೆಯ ಅನುಷ್ಠಾನ ಕುರಿತು ಆಸಕ್ತಿ ವಹಿಸಿದ್ದರು.  ಯೋಜನೆಗೆ ರೈತರಿಂದ ತೀವ್ರ ಪ್ರತಿರೋಧವೂ ವ್ಯಕ್ತವಾಗಿತ್ತು.

Post Comments (+)