ಬಳ್ಳಾರಿ: ಹದಗೆಟ್ಟ ಸಂಚಾರ ವ್ಯವಸ್ಥೆ

ಶುಕ್ರವಾರ, ಮೇ 24, 2019
22 °C

ಬಳ್ಳಾರಿ: ಹದಗೆಟ್ಟ ಸಂಚಾರ ವ್ಯವಸ್ಥೆ

Published:
Updated:

ಬಳ್ಳಾರಿ: ದ್ವಿಚಕ್ರ ವಾಹನ, ಟಂಟಂ, ಆಟೋರಿಕ್ಷಾ, ಖಾಸಗಿ ಬಸ್ ಮತ್ತಿತರ ವಾಹನಗಳ ಅಡ್ಡಾದಿಡ್ಡಿ ಓಡಾಟ, ನಿಲುಗಡೆ, ವಿಪರೀತ ವೇಗ, ಎದುರುಗಡೆ ಬರುವ ವಾಹನಗಳ ಕುರಿತ ನಿರ್ಲಕ್ಷ್ಯ, ಅಪಾಯಕ್ಕೆ ಆಹ್ವಾನ.

ಇದು, ಹದಗೆಟ್ಟು ಹೋಗಿರುವ ನಗರದ ಸಂಚಾರ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ.ಮಾರುಕಟ್ಟೆ, ವಾಣಿಜ್ಯ ಮಳಿಗೆಗಳು, ಪ್ರಮುಖ ವೃತ್ತಗಳು ಮತ್ತು ಮುಖ್ಯ ರಸ್ತೆಗಳಲ್ಲಿ ನಿತ್ಯವೂ ನಿಯಮಬಾಹಿರ ವಾಹನ ನಿಲುಗಡೆ, ದ್ವಿಚಕ್ರ ವಾಹನಗಳ ಅಡ್ಡಾದಿಡ್ಡಿ ಓಡಾಟ, ವಿಪರೀತ ವೇಗ ಸಾಮಾನ್ಯವಾಗಿ ಕಂಡುಬರುತ್ತದೆ.

ಸಂಚಾರ ನಿಯಮಗಳನ್ನು ಉಲ್ಲಂಘಿಸಲಾಗುತ್ತಿದ್ದರೂ, ಸಂಚಾರಿ ಠಾಣೆ ಪೊಲೀಸರು ಮಾತ್ರ `ಕಂಡೂ ಕಂಡಿಲ್ಲ~ ಎಂಬಂತೆ ಮೂಕ ಪ್ರೇಕ್ಷಕರಾಗಿರುವುದು ಸಾರ್ವಜನಿಕರ ತೊಂದರೆ ಮುಂದುವರಿಯಲು ಕಾರಣವಾಗಿದೆ.ಖಾಸಗಿ ಬಸ್ ನಿಲುಗಡೆ: ನಗರದ ಹಳೆಯ ಬಸ್ ನಿಲ್ದಾಣದ ಎದುರು ಹಾಗೂ ಪಕ್ಕದ ಅಂಬೇಡ್ಕರ್ ಕಾಂಪ್ಲೆಕ್ಸ್ ಬಳಿ ಖಾಸಗಿ ಬಸ್ ನಿಲ್ಲಿಸಲಾಗುತ್ತಿದೆ. `ಬಸ್ ನಿಲ್ದಾಣದಿಂದ 500 ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಖಾಸಗಿ ಬಸ್‌ಗಳು ನಿಲ್ಲಕೂಡದು~ ಎಂಬ ನಿಯಮವಿದ್ದರೂ, ಅದನ್ನು ಗಾಳಿಗೆ ತೂರಲಾಗುತ್ತಿದೆ ಎಂದು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಳ್ಳಾರಿ ವಿಭಾಗೀಯ ನಿಯಂತ್ರಣಾಧಿಕಾರಿ ದುರ್ಗಪ್ಪ ಆರೋಪಿಸುತ್ತಾರೆ.ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದೆದುರೇ ನಿಂತು, ಬಸ್ ನಿಲ್ದಾಣದೊಳಗೆ ತಮ್ಮ ಜನರನ್ನು ಕಳುಹಿಸಿ, ಪ್ರಯಾಣಿಕರನ್ನು ಕರೆದೊಯ್ಯುವ ಪರಿಪಾಠವೂ ಇಲ್ಲಿದೆ. ಇದರಿಂದ ಸಾರಿಗೆ ಸಂಸ್ಥೆಯ ಆದಾಯಕ್ಕೆ ಭಾರಿ ಹೊಡೆತ ಬಿದ್ದಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾಧಿಕಾರಿ, ಸಂಚಾರಿ ಠಾಣೆಯ ಸಿಪಿಐ ಅವರ ಗಮನಕ್ಕೆ ತಂದು, ದೂರು ನೀಡಲಾಗಿದೆ. ಆದರೂ ನಿಯಮಬಾಹಿರ ನಿಲುಗಡೆಗೆ ಕಡಿವಾಣ ಹಾಕಲಾಗುತ್ತಿಲ್ಲ ಎಂದು ಅವರು ಹೇಳುತ್ತಾರೆ.ಶಾಸಕರಿಗೆ ಸೇರಿದ ಖಾಸಗಿ ಬಸ್‌ಗಳನ್ನು ಇಲ್ಲಿ ನಿಲುಗಡೆ ಮಾಡಲಾಗುತ್ತಿದೆ. ಅದನ್ನು ತಪ್ಪಿಸುವುದು ದುಸ್ತರ ಎಂದೂ ಅಧಿಕಾರಿಗಳು ಹೇಳುತ್ತಾರೆ ಎಂದು ಅವರು ತಿಳಿಸುತ್ತಾರೆ.ನಗರದ ರಾಘವ ಕಲಾಮಂದಿರದ ಬಳಿ ಖಾಸಗಿ ಬಸ್‌ಗಳಿಗಾಗಿಯೇ ಪ್ರತ್ಯೇಕ ನಿಲ್ದಾಣ ಇದ್ದರೂ, ಅನೇಕ ಖಾಸಗಿ ಬಸ್‌ಗಳು ಹಳೆಯ ಬಸ್ ನಿಲ್ದಾಣದ ಎದುರೇ ನಿಲುಗಡೆಯಾಗುತ್ತಿವೆ. ಇದರಿಂದ ಸಾರಿಗೆ ಸಂಸ್ಥೆಯ ಬಸ್‌ಗಳ ಸರಾಗ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ಅಲ್ಲದೆ, ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೂ ತೊಂದರೆಯಾಗಿದೆ. ಇತ್ತೀಚೆಗಷ್ಟೇ ಬಸ್ ನಿಲ್ದಾಣ ಪ್ರವೇಶಿಸಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಮೂವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಆದರೂ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂಬುದು ಅವರ ಅಳಲು.ಅತಿವೇಗ, ನಿಯಮಬಾಹಿರ ವಾಹನ ಚಾಲನೆ ಮತ್ತಿತರ ಅಕ್ರಮವನ್ನು ಪತ್ತೆ ಮಾಡಲೆಂದೇ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಇಂಟರ್‌ಸೆಪ್ಟರ್ ವಾಹನ ಖರೀದಿಸಲಾಗಿದ್ದರೂ, ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ. ಈ ವಾಹನವನ್ನು ಎಲ್ಲೆಡೆ ಕಳುಹಿಸಿ, ನಿಯಮಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂಬುದು ದ್ವಿಚಕ್ರ ವಾಹನ ಸವಾರ ಮಲ್ಲಿಕಾರ್ಜುನ ಎಂಬುವವರ ಮನವಿ.ನಗರದಲ್ಲಿ ಆಟೊ ರಿಕ್ಷಾ ಚಾಲಕರು ಅಡ್ಡಾದಿಡ್ಡಿ ವಾಹನ ನಿಲುಗಡೆ ಮಾಡುತ್ತ ಅಡಚಣೆಗೆ ಕಾರಣರಾಗಿದ್ದಾರೆ. ಅಲ್ಲದೆ, ನಗರದ ಬೆಂಗಳೂರು ರಸ್ತೆಯಲ್ಲಿರುವ ಮಾರುಕಟ್ಟೆ ಪ್ರದೇಶದಲ್ಲಿ ಕಾರ್, ಜೀಪ್ ಮತ್ತಿತರ ನಾಲ್ಕುಚಕ್ರಗಳ ವಾಹನಗಳನ್ನು ನಿಲುಗಡೆ ಮಾಡುತ್ತ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡಲಾಗುತ್ತಿದೆ. ಈ ಬಗ್ಗೆ ಸಂಚಾರಿ ಠಾಣೆ ಪೊಲೀಸರು ಗಮನಿಸಬೇಕಿದೆ ಎಂದು ಎಂ.ವಿರೂಪಾಕ್ಷಪ್ಪ, ಸೈಯ್ಯದ್ ಸಲೀಂ ಅಹಮದ್ ಮತ್ತಿತರರು ಆಗ್ರಹಿಸುತ್ತಾರೆ.ನಗರದ ಹೊರ ವಲಯದಲ್ಲಿರುವ ಕಣೇಕಲ್ ಬಸ್ ನಿಲ್ದಾಣ, ಎಪಿಎಂಸಿ ವೃತ್ತ ಮತ್ತಿತರ ಕಡೆಗಳಲ್ಲಿ ಕಂಡುಬರುವ ಲಾರಿ, ಟ್ರ್ಯಾಕ್ಟರ್, ಟಂಟಂ ಮತ್ತಿತರ ಸರಕು ಸಾಗಣೆ ವಾಹನಗಳ ಚಾಲಕರಿಗಂತೂ ಸಂಚಾರ ನಿಯಮಗಳೇ ಇಲ್ಲ ಎಂಬಂತಹ ಸ್ಥಿತಿ ಇದೆ.ಬೆಳಿಗ್ಗೆ ಮತ್ತು ಸಂಜೆಯ ವೇಳೆ ಸಂಚಾರದಟ್ಟಣೆ ವೇಳೆ ವಾಹನಗಳು ಎಲ್ಲೆಂದರಲ್ಲಿ ನಿಲುಗಡೆ ಆಗುವುದರಿಂದ ಸಂಚಾರ ವ್ಯವಸ್ಥೆ ಹದಗೆಟ್ಟು, ಸಾರ್ವಜನಿಕರ ಸುಗಮ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಿವೆ.ಸಂಬಂಧಿಸಿದವರು ಈ ಕುರಿತು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂಬುದು ಅನೇಕರ ಕೋರಿಕೆಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry