ಬುಧವಾರ, ಮೇ 25, 2022
24 °C

ಬಸವಕಲ್ಯಾಣದಲ್ಲಿ 9ರಿಂದ ಕಲ್ಯಾಣ ಪರ್ವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಬೀದರ ಜಿಲ್ಲೆಯ ಬಸವಕಲ್ಯಾಣದಲ್ಲಿ ಅ. 9ರಿಂದ 11ರವರೆಗೆ ಬಸವಧರ್ಮ ಪೀಠ   ಟ್ರಸ್ಟ್ ವತಿಯಿಂದ ಲಿಂಗಾಯತ ಸಮಾಜದ `ಕಲ್ಯಾಣ ಪರ್ವ~ ಸಮಾವೇಶವನ್ನು ಸಂಘಟಿಸಲಾಗಿದೆ.ಕಲ್ಯಾಣ ಪರ್ವ ಉತ್ಸವ ಸಮಿತಿ ಕಾರ್ಯಾಧ್ಯಕ್ಷೆ ಮಾತೆ ಮಹಾದೇವಿ ಪತ್ರಿಕಾ ಗೋಷ್ಠಿಯಲ್ಲಿ ಗುರುವಾರ ಈ ವಿಷಯ ತಿಳಿಸಿದರು. ಬಸವಧರ್ಮ ಪೀಠದಿಂದ ಆಯೋಜಿಸುತ್ತಿರುವ ಹತ್ತನೇ ಸಮಾವೇಶ ಇದಾಗಿದ್ದು, ಹಲವು ಧಾರ್ಮಿಕ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸಮಾವೇಶದಲ್ಲಿ ಆಯೋಜಿಸಲಾಗಿದೆ ಎಂದು ಹೇಳಿದರು.ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಧರ್ಮಸಿಂಗ್ ಅ. 9ರಂದು ಬೆಳಿಗ್ಗೆ 10.30ಕ್ಕೆ ಸಮಾವೇಶ ಉದ್ಘಾಟನೆ ಮಾಡಲಿದ್ದಾರೆ. ಜಹಿರಾಬಾದ್ ಸಂಸದ ಸುರೇಶ ಶೇಟ್ಕರ್, ಶಾಸಕರಾದ ಶರಣಬಸಪ್ಪ ದರ್ಶನಾಪುರ, ಮಾಲಿಕಯ್ಯ ಗುತ್ತೇದಾರ್, ರಹೀಂ ಖಾನ್ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.ಸಂಜೆ 4ಕ್ಕೆ ಬಸವ ದಳದ ರಾಷ್ಟ್ರೀಯ ಸಮಾವೇಶ ನಡೆಯಲಿದೆ. ಕರ್ನಾಟಕ ರಾಜ್ಯ ಲಿಂಗಾಯತ ಧರ್ಮ ಮಹಾಸಭಾದ ಅಧ್ಯಕ್ಷ ಕೆ.ಬಸವರಾಜು ಈ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ. ಲಿಂಗಾಯತ ಸಮಾಜದಲ್ಲಿ ಒಗ್ಗಟ್ಟನ್ನು ಕಾಯ್ದುಕೊಳ್ಳುವುದು ಹಾಗೂ ಸಮುದಾಯ ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಸಮಾವೇಶದಲ್ಲಿ ಚರ್ಚೆಗೆ ಬರಲಿರುವ ಪ್ರಧಾನ ವಿಷಯಗಳಾಗಿವೆ ಎಂದು ಮಾಹಿತಿ ನೀಡಿದರು.ಸಂಜೆ 6.30ಕ್ಕೆ ಮಹಿಳಾ ಸಮಾವೇಶ ನಡೆಯಲಿದ್ದು, ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಅಧ್ಯಕ್ಷೆ ಮಂಜುಳಾ ನಾಯ್ಡು ಉದ್ಘಾಟಿಸಲಿದ್ದಾರೆ. ಶಾಸಕಿ ಅರುಣಾದೇವಿ ಪಾಟೀಲ ರೇವೂರ, ಮೀನಾಕ್ಷಿ ಸಂಗಮ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.ಅ. 10ರಂದು ಬೆಳಿಗ್ಗೆ 7.30ಕ್ಕೆ ಶರಣು ವಂದನೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಮಾತೆ ಮಹಾದೇವಿ, ಸಿದ್ಧರಾಮೇಶ್ವರ ಸ್ವಾಮೀಜಿ, ಚನ್ನಬಸವಾನಂದ ಸ್ವಾಮೀಜಿ, ಸಿದ್ಧೇಶ್ವರಾನಂದ ಸ್ವಾಮೀಜಿ, ಬಸವಪ್ರಭು ಸ್ವಾಮೀಜಿ, ಮಾತೆ ಜ್ಞಾನೇಶ್ವರಿ, ಮಾತೆ ಸತ್ಯದೇವಿ ಭಾಗವಹಿಸಲಿದ್ದಾರೆ. ಮಧ್ಯಾಹ್ನ 12ಕ್ಕೆ ಲಿಂಗಾಯತ ಧರ್ಮದ ಕುರಿತು ವಿಚಾರಗೋಷ್ಠಿ ನಡೆಯಲಿದೆ. ಬೀದರ ಜಿಲ್ಲಾ ಉಸ್ತುವಾರಿ ಸಚಿವ ರೇವೂ ನಾಯಕ ಬೆಳಮಗಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು.ಅ. 11ರಂದು ಶೂನ್ಯಪೀಠದ ಪೀಠಾರೋಹಣ ಮಹೋತ್ಸವ ನಡೆಯಲಿದೆ. ಸಿದ್ಧರಾಮೇಶ್ವರ ಸ್ವಾಮೀಜಿ ಪೀಠಾಧಿಪತಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ನಂತರ ಸಂದೇಶ ನೀಡಲಿದ್ದಾರೆ. ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಕರ್ನಾಟಕದ ಸಾವಿರಾರು ಜನ ಅನುಯಾಯಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಅವರು ಹೇಳಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.