ಬಸವಕಲ್ಯಾಣ: ಸೌಕರ್ಯಕ್ಕಾಗಿ ರಸ್ತೆತಡೆ
ಬಸವಕಲ್ಯಾಣ: ಇಲ್ಲಿನ ಬಸ್ ನಿಲ್ದಾಣ ಹತ್ತಿರದ ಆಶ್ರಯ ಕಾಲೊನಿಯಲ್ಲಿ ಮೂಲಭೂತ ಸೌಕರ್ಯಕ್ಕಾಗಿ ಆಗ್ರಹಿಸಿ ಶನಿವಾರ ಇಲ್ಲಿನ ಭಾಲ್ಕಿ ರಸ್ತೆ ಕ್ರಾಸ್ನಲ್ಲಿ ರಸ್ತೆತಡೆ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ರಸ್ತೆತಡೆ ನಡೆಸಿ ನಗರಸಭೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಸಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಭಾಗದಲ್ಲಿ ಒಟ್ಟು 3 ವಾರ್ಡ್ಗಳಿದ್ದು ಎಲ್ಲಿಯೂ ಸಿಮೆಂಟ್ ರಸ್ತೆ ನಿರ್ಮಿಸಲಾಗಿಲ್ಲ. ಕೆಲವೆಡೆ ವಿದ್ಯುತ್ ಸಂಪರ್ಕ ಇಲ್ಲ. ಚರಂಡಿ ಹಾಗೂ ನಳದ ವ್ಯವಸ್ಥೆ ಇಲ್ಲದ್ದರಿಂದ ನಾಗರಿಕರು ತೊಂದರೆ ಅನುಭವಿಸಬೇಕಾಗಿದೆ ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.
ವಿದ್ಯುತ್ ಸೌಕರ್ಯ ಇಲ್ಲದ್ದರಿಂದ ರಾತ್ರಿ ಕತ್ತಲು ಆವರಿಸುತ್ತಿದ್ದು ಕಳ್ಳ ಕಾಕರ ಭಯ ಕಾಡುತ್ತಿದೆ. ಕೇವಲ ಒಂದೆರಡು ಸ್ಥಳಗಳಲ್ಲಿ ಮಾತ್ರ ನೀರಿನ ಟ್ಯಾಂಕ್ ಇರುವುದರಿಂದ ನೀರು ಸಾಕಾಗುತ್ತಿಲ್ಲ. ಆದ್ದರಿಂದ ನೀರು ಖರೀದಿಸುವಂತಹ ಪರಿಸ್ಥಿತಿ ಇದೆ. ಶೌಚಾಲಯ ಇಲ್ಲ. ಬಸ್ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿಲ್ಲ.
ಈ ಸಂಬಂಧ ಅನೇಕ ಸಲ ನಗರಸಭೆಯವರಿಗೆ ಮನವಿ ಸಲ್ಲಿಸಲಾಗಿದೆ. ಎರಡು ಸಲ ಅಧಿಕಾರಿಗಳು ಕಾಲೊನಿಗೆ ಭೇಟಿಕೊಟ್ಟು ಪರಿಶೀಲನೆ ಸಹ ನಡೆಸಿದ್ದಾರೆ. ಆದರೂ ಇದುವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ನಾಗರಿಕರು ಆಕ್ರೋಶ ವ್ಯಕ್ತಪಡಿಸಿದರು.
ಓಣಿಯ ಪ್ರಮುಖರಾದ ದತ್ತಾತ್ರಿ ಮೂಲಗೆ, ಸೂರ್ಯಕಾಂತ ಮದಕಟ್ಟಿ, ವಕೀಲ ಅರ್ಜುನ ಜೋಗಿ, ಅಬ್ದುಲ್ ಸಲೀಮ್, ಹಾಜಿ ಫಕಿರುದ್ದೀನ್, ಖಯ್ಯಾಮ ಹಾಗೂ ಅನೇಕ ಜನ ಮಹಿಳೆಯರು, ಯುವಕರು ಪಾಲ್ಗೊಂಡಿದ್ದರು. ಇಂದಿನಿಂದಲೇ ಕಾಮಗಾರಿ ಆರಂಭಿಸಿದರೆ ಮಾತ್ರ ಚಳವಳಿ ನಿಲ್ಲಿಸಲಾಗುವುದು ಎಂದು ಪಟ್ಟು ಹಿಡಿದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣ ಆಗಿತ್ತು.
ನಗರಸಭೆ ಉಪಾಧ್ಯಕ್ಷ ಪಾಶಾಮಿಯ್ಯಾ ಜರಗಾರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಬಸಪ್ಪ ಪೂಜಾರಿ ಹಾಗೂ ಪೊಲೀಸ್ ಅಧಿಕಾರಿಗಳು ಜನರನ್ನು ಶಾಂತಗೊಳಿಸಿ ಶೀಘ್ರ ಸೌಲಭ್ಯ ಕಲ್ಪಿಸುವ ಭರವಸೆ ಕೊಟ್ಟರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.