ಬಸವಕಲ್ಯಾಣ: ಸೌಕರ್ಯವಿಲ್ಲದ ಮಾಂಗಗಾರುಡಿ ಓಣಿ

7

ಬಸವಕಲ್ಯಾಣ: ಸೌಕರ್ಯವಿಲ್ಲದ ಮಾಂಗಗಾರುಡಿ ಓಣಿ

Published:
Updated:

ಬಸವಕಲ್ಯಾಣ:  ಇಲ್ಲಿನ ಈಶ್ವರ ನಗರದ ಮಾಂಗ ಗಾರುಡಿಗಳ ವಸತಿ ಪ್ರದೇಶದಲ್ಲಿ ಯಾವುದೇ ಸೌಲಭ್ಯಗಳಿಲ್ಲದೆ ಜನರು ತೊಂದರೆ ಅನುಭವಿಸಬೇಕಾಗಿದೆ.ಪರಿಶಿಷ್ಟ ಜಾತಿಯ ಈ ಜನರು ಜೋಪಡಿಗಳಲ್ಲಿ ವಾಸಿಸುತ್ತಾರೆ. ಈ ಪ್ರದೇಶವನ್ನು ಹಳೆಯ ದನದ ಅಂಗಡಿ ಪ್ರದೇಶ ಎಂದೂ ಕರೆಯಲಾಗುತ್ತದೆ. ಇಲ್ಲಿ ವಾಸಿಸುವ ಜನರ ಸ್ಥಿತಿಯೂ ಪಶುಗಳಿಗಿಂತ ಕಡೆಯಾಗಿದೆ ಎಂದು ನಾಗರಿಕರು ಹೇಳುತ್ತಾರೆ.ಈ ಸ್ಥಳ ಇಳಿಜಾರು ಪ್ರದೇಶದಲ್ಲಿ ಇರುವುದರಿಂದ ನಗರದಲ್ಲಿನ ಬೇರೆ ಓಣಿಗಳ ಚರಂಡಿ ನೀರು ಇಲ್ಲಿಗೆ ಬಂದು ನಿಲ್ಲುತ್ತದೆ. ಇಲ್ಲಿಂದ ಬಸ್ ನಿಲ್ದಾಣ ರಸ್ತೆಯ ಚರಂಡಿಗೆ ಕೂಡುವ ಚರಂಡಿಯನ್ನು ಸ್ವಚ್ಛಗೊಳಿಸುತ್ತಿಲ್ಲ.ಚರಂಡಿಯಲ್ಲಿ ಕಲ್ಲು, ಮಣ್ಣು ತುಂಬಿದ್ದರಿಂದ ನೀರು ಮುಂದಕ್ಕೆ ಹೋಗದೆ ಇಲ್ಲಿಯೇ ನಿಲ್ಲುತ್ತಿದೆ. ಹೀಗಾಗಿ ಇಲ್ಲಿ ಯಾವಾಗಲೂ ದುರ್ಗಂಧ ಸೂಸುತ್ತದೆ. ಮನೆಯಲ್ಲಿ ಕೂಡಬೇಕು ಅನ್ನಿಸುವುದಿಲ್ಲ. ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಜನರು ರೋಗರುಜಿನಗಳಿಂದ ಬಳಲುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.ಇಲ್ಲಿನವರಿಗೆ ಕುಡಿಯುವ ನೀರಿನ ಸೌಲಭ್ಯವೂ ಇಲ್ಲ. ಈ ಜನರು ಸಮೀಪದಲ್ಲಿನ ಸೇದುವ ಬಾವಿಯ ನೀರು ಕುಡಿಯುತ್ತಿದ್ದರು. ಈಚೆಗೆ ಈ ಬಾವಿಯ ಸುತ್ತ ಹೊಲಸು ನೀರು ನಿಂತು ಅದೇ ನೀರು ಬಾವಿಯೊಳಗೆ ಜಿನುಗುತ್ತಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಅನಿವಾರ್ಯವಾಗಿ ಕೆಲವರು ಇಂಥದ್ದೇ ನೀರನ್ನು ಕುಡಿಯುವಂತಾಗಿದೆ.ಈ ಓಣಿಗೆ ಬೇರೆ ಸೌಲಭ್ಯಗಳನ್ನು ನೀಡಬೇಕು. ಅಲ್ಲದೆ ಚರಂಡಿ ನೀರು ಇಲ್ಲಿ ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಅನೇಕ ಸಲ ಸಂಬಂಧಿತರಿಗೆ ವಿನಂತಿಸಲಾಗಿದೆ. ಆದರೂ ಯಾರೂ ಈ ಕಡೆ ಗಮನ ಕೊಡುತ್ತಿಲ್ಲ ಎಂದು ಇಲ್ಲಿನವರು ದೂರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry