ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವುದು ಸುಲಭ

7

ಬಸವಣ್ಣನವರನ್ನು ಅರ್ಥ ಮಾಡಿಕೊಳ್ಳುವುದು ಸುಲಭ

Published:
Updated:

ಬಸವಣ್ಣನವರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಮತ್ತೊಂದು ಚರ್ಚೆ ನಡೆಯುತ್ತಿರುವುದನ್ನು ಓದುಗರೊಬ್ಬರು ನನ್ನ ಗಮನಕ್ಕೆ ತಂದರು. ಬಸವಣ್ಣನವರು ಬೋಧಿಸಿದ್ದು ವೀರಶೈವ ಧರ್ಮವನ್ನೋ, ಲಿಂಗಾಯಿತ ಧರ್ಮವನ್ನೋ, ಎಂಬುದು ಈ ಚರ್ಚೆಯ ಕೇಂದ್ರ ಬಿಂದುವಾಗಿತ್ತು. ಪ್ರೊ. ಚಿದಾನಂದದಮೂರ್ತಿಯವರು ವೀರಶೈವ ಧರ್ಮ ಬಸವಪೂರ್ವ ಯುಗದಲ್ಲಿ ಇತ್ತು. ಈ ತತ್ವವನ್ನು ಚಲಾವಣೆಗೆ ತಂದ (ಬಸವ) ಒಬ್ಬ ಅನ್ವಯಿಕ ವಿಜ್ಞಾನಿ ಎಂದು ತಮ್ಮ ಆಧಾರಪೂರ್ವಕವಾಗಿ ವಾದಿಸಿದ್ದರು. ಇಷ್ಟೇ ಆಧಾರಪೂರ್ವಕವಾಗಿ ಪ್ರೊ. ಚಿದಾನಂದಮೂರ್ತಿಯವರ ವಾದವನ್ನು ಅಲ್ಲಗಳೆಯುತ್ತ `ಬಸವಣ್ಣ ಸ್ಥಾಪಿಸಿದ್ದ ಧರ್ಮ ವೀರಶೈವವಲ್ಲದೇ ಲಿಂಗಾಯತ ಧರ್ಮ ಎಂಬ ವಾದವನ್ನು ಡಾ. ಕಲಬುರ್ಗಿಯವರು ಮಂಡಿಸಿದ್ದರು~ ಎಂದು ನನ್ನ ಸ್ನೇಹಿತರಾದ ಎಚ್. ಎಸ್. ಶಿವಪ್ರಕಾಶ್‌ರವರು ಪ್ರಜಾವಾಣಿ ಪತ್ರಿಕೆಯ ಸೆಪ್ಟೆಂಬರ್ 16ನೇ ದಿನಾಂಕದಂದು `ಪ್ರತಿ ಸ್ಪಂದನ~ ಅಂಕಣದಲ್ಲಿ ಬರೆದಿದ್ದಾರೆ.ಎಚ್. ಎಸ್. ಶಿವಪ್ರಕಾಶ್‌ರಂಥವರಿಗೆ ಬಸವಣ್ಣನವರನ್ನು ಹೇಗೆ ಅರ್ಥಮಾಡಿಕೊಳ್ಳುವುದೆಂಬ ಪ್ರಶ್ನೆಯೇ ಉದ್ಭವಿಸಬಾರದಿತ್ತು. ಯಾಕೆಂದರೆ, ಬಸವಣ್ಣನದು ಪ್ರಜಾಧರ್ಮ, ವೀರಶೈವ ಸನಾತನ ಧರ್ಮ, ಸನಾತನವಾದ ವೀರಶೈವ ಧರ್ಮದಲ್ಲಿ ಮೇಲು, ಕೀಳು ಎಂಬ ತಾರ - ತಮ್ಯವಿದೆ, ವರ್ಣಾಶ್ರಮ ಧರ್ಮದ ವಾಸನೆಯಿದೆ. ಇಂಥ ಧರ್ಮವನ್ನು ಶಿವಪ್ರಕಾಶ್‌ರು ಖಂಡಿತ ಪುರಸ್ಕರಿಸಲು ಸಾಧ್ಯವಿಲ್ಲ. ಮೇಲಾಗಿ ಬಸವಪೂರ್ವ ಯುಗದಲ್ಲಿತ್ತು ಎಂದು ಹೇಳುವ ಈ ವೀರಶೈವ ಧರ್ಮದ ಉಲ್ಲೇಖ ಯಾವ ಶಿಲಾಲಿಪಿಯಲ್ಲಿಯೂ ಇಲ್ಲ. ಇದ್ದದ್ದು ಕೇವಲ ಲಿಂಗಾಯಿತರ ಕೀಳರಿಮೆ ಮಾತ್ರ.`ವೀರಶೈವ~ ಎಂದೆನ್ನುವ ಪಂಚಾಚಾರ್ಯರು ವೇದಗಳನ್ನು ಅಭ್ಯಾಸ ಮಾಡುತ್ತಾರೆ. ತಮ್ಮ ಎಲ್ಲ ಕಾರ್ಯಕ್ರಮಗಳ ಪೂರ್ವದಲ್ಲಿ ವಟುಗಳಿಂದ ವೇದಘೋಷ ಮಾಡಿಸುತ್ತಾರೆ. ಅವರು ವೇದಪ್ರಮಾಣವನ್ನು ಮನ್ನಿಸುತ್ತಾರೆ. ಅದೇ ಲಿಂಗಾಯತ ಧರ್ಮವನ್ನು ಬೋಧಿಸಿದ ಬಸವಣ್ಣನವರು.`ವೇದಕ್ಕೆ ಒರೆಯ ಕಟ್ಟುವೆ,

ಶಾಸ್ತ್ರಕ್ಕೆ ನಿಗಳನಿಕ್ಕುವೆ,

ತರ್ಕದ ಬೆನ್ನಭಾರನೆತ್ತುವೆ,

ಆಗಮದ ಮೂಗ ಕೊಯ್ಯುವೆ ನೋಡಯ್ಯಾ~

`ವೇದದಂತುಟ್ಟಲ್ಲ, ಶಾಸ್ತ್ರದಂತುಟಟ್ಟಲ್ಲ,

ಗೀತ ಮಾತಿನಂತುಟ್ಟಲ್ಲ ಕೇಳಯ್ಯಾ~ಹೀಗೆ ವೇದ ಶಾಸ್ತ್ರ, ಪುರಾಣಗಳನ್ನು ಸಾರಾಸಗಟಾಗಿ ನಿಂದಿಸುವ ವಚನಗಳ ಲಿಂಗಾಯತ ಧರ್ಮ ಬೇರೆ, ವೇದಗಳ ಪ್ರಮಾಣ್ಯ ಮಾನ್ಯ ಮಾಡುವ ವೀರಶೈವ ಧರ್ಮ ಬೇರೆ.ಡಾ. ಚಿದಾನಂದಮೂರ್ತಿಗಳು `ವೀರಶೈವ~ ವೆಂದರೂ ಒಂದೇ, ಲಿಂಗಾಯತರೆಂದರೂ ಒಂದೇ ಎಂಬ ವಿಚಾರವನ್ನು ಹರಿಬಿಟ್ಟಿದ್ದಾರೆ. `ತೋಳ ಹಾಗೂ ಕುರಿ~, ಎರಡೂ ಪ್ರಾಣಿ ಸೂಚಕ ಪದಗಳೇ, ಆದರೆ `ತೋಳ~ ಮತ್ತು `ಕುರಿ~ ಎಂದರೆ ಒಂದೇ ಎನ್ನಲಿಕ್ಕಾದೀತೆ? ನೀಲಗಂಗಯ್ಯಾ ಪೂಜಾರ ವಕೀಲರು ಹೇಳುವಂತೆ `ಬಸವಣ್ಣನವರ ಲಿಂಗಾಯತವು ಜಾತ್ಯಾತೀತತೆಯ ಪ್ರಯೋಗ ಶಾಲೆಯಾಗಿತ್ತು~.ಡಾ. ಚಿದಾನಂದಮೂರ್ತಿಗಳಿಗೆ ಇತ್ತೀಚೆಗೆ ಹಿಂದೂ ಧರ್ಮದ ಭೂತ ಹಿಡಿದಿದೆ. ಒಂದು ವೇಳೆ ಲಿಂಗಾಯತರು `ಹಿಂದೂ~ ಗಳಲ್ಲವೆಂದರೆ, ಈ ದೇಶದಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗುತ್ತಾರೆ. ಆ ಹಿಂದೂಗಳ ಕೈಗೆ ಈ ದೇಶದ ಆಡಳಿತ ಹೋಗುತ್ತದೆ ಎನ್ನುವ ಆತಂಕ ಇವರನ್ನು ಕಾಡುತ್ತಿದೆ. ಲಿಂಗಾಯತರು ಈ ದೇಶದಲ್ಲಿಯೇ ಹುಟ್ಟಿಬೆಳೆದವರು ಈ ದೇಶದಲ್ಲಿಯೇ ಹುಟ್ಟಿ ಬೆಳೆದ ಜೈನ, ಬೌದ್ಧ ಧರ್ಮಿಯರೂ ಹಿಂದೂಗಳಲ್ಲ. ಅವರೇನು ಈ ದೇಶಕ್ಕೆ ನಿಷ್ಠರಾಗಿಲ್ಲವೆ? `ಲಿಂಗಾಯತ~ರು ಹಿಂದೂಗಳಲ್ಲ ಎಂದಾಕ್ಷಣ ಅವರೇನು ರಾಷ್ಟ್ರವಿರೋಧಿಗಳಾಗುತ್ತಾರೆಯೇ?ಶ್ರೀಲಂಕಾ, ಜಪಾನ್, ಚೈನಾದಲ್ಲಿರುವ ಬಹುಸಂಖ್ಯಾತರು ಬೌದ್ಧ ಧರ್ಮೀಯರು, ಅವರೆಲ್ಲ ತಮ್ಮ ತಮ್ಮ ದೇಶಗಳಿಗೆ ನಿಷ್ಠರಾಗಿಲ್ಲವೇ? ಇಲ್ಲವೇ ತಮ್ಮ ಧರ್ಮದ ಮೂಲವಾದ ಭಾರತಕ್ಕೆ ನಿಷ್ಠರಾಗಿದ್ದಾರೆಯೋ?ವೀರಶೈವ ಧರ್ಮದ ಹೆಸರನ್ನು ಬದಲಾಯಿಸುವುದೇ ಜನವಿರೋಧಿಯಾದರೆ `ಲಿಂಗಾಯಿತ~ ಧರ್ಮದ ಹೆಸರನ್ನು ಬದಲಾಯಿಸುವುದೇ ಜನವಿರೋಧಿ. ವೀರಶೈವ ಎನ್ನುವುದು ಒಂದು ಮತದ ಹೆಸರಲ್ಲ. ಒಂದು ವ್ರತದ ಹೆಸರು. ಚೆನ್ನಬಸವಣ್ಣನವರ ಷಟಸ್ಥಳ ವಚನದಲ್ಲಿ `ದೇವ ನಾಮ ಸೊಗಸದು ಲಿಂಗಾಯತಂಗೆ~ ಎನ್ನುವ ವಾಕ್ಯ ಏನನ್ನು ಹೇಳುತ್ತದೆ? ಕೆರೆಯ ಪದ್ಮರಸನ `ದೀಕ್ಷಾಬೋಧೆ~ಯಲ್ಲಿ `ನೋಯದಂತಿರಿಸು ಲಿಂಗಾಯತದೊಳಗೆ~ ಎಂದು ಬಂದಿದೆ. `ನಾನು ಸಣ್ಣವನಿದ್ದಾಗ ನಮ್ಮ ಪ್ರದೇಶದಲ್ಲಿ (ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ) ವೀರಶೈವರೆಂದರೆ ಕೆಲವರಿಗೆ ಮಾತ್ರ ತಿಳಿಯುತ್ತಿತ್ತು. ಲಿಂಗಾಯತರೆಂದರೆ ಎಲ್ಲರಿಗೂ ತಿಳಿಯುತ್ತಿತ್ತು~ ಎಂದು ಡಾ. ಚಿದಾನಂದಮೂರ್ತಿಗಳು ತಮ್ಮ ಆತ್ಮಕಥೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ 1904 ರಲ್ಲಿ ಧಾರವಾಡದಲ್ಲಿ `ಶ್ರೀಮಧ್ವೀರಶೈವ ಮಹಾ ಸಭೆ~ (ಅದು ಮುಂದೆ ಅಖಿಲ ಭಾರತ ವೀರಶೈವ ಮಹಾಸಭೆಯಾಯಿತು ಆ ಮಾತು ಬೇರೆ) ಈ ವೀರಶೈವ ಪದ ಸುಶಿಕ್ಷಿತರಲ್ಲಿ ಬಳಕೆಗೆ ಬಂತು.ಹೀಗೆ ಕಾಲದ ದೃಷ್ಟಿಯಿಂದ ಪ್ರಾಚೀನವೂ, ಬಳಕೆಯ ದೃಷ್ಟಿಯಿಂದ ಸಾರ್ವತ್ರಿಕವೂ, ತತ್ವದ ದೃಷ್ಟಿಯಿಂದ ಅರ್ಥಪೂರ್ಣವೂ ಆದ `ಲಿಂಗಾಯತ~ ಪದವೇ ಜನಪರವೂ ಆಗಿರುವುದು. ಹೋಮ, ಹವನ, ದೇವಾಲಯ, ಅರ್ಚಕ ಇತ್ಯಾದಿ ವೈದಿಕ ಗೋಜಲುಗಳಿಂದ ಪುರೋಹಿತಶಾಹಿ ವ್ಯವಸ್ಥೆಯ `ವೀರಶೈವ~ ಪದವು ಮತ್ತೆ ನಮ್ಮನ್ನು ಚಾತುರ್ವರ್ಣ ವ್ಯವಸ್ಥೆಗೆ ಕೊಂಡೊಯ್ಯುತ್ತದೆ. ವೈದಿಕ ಧರ್ಮದ ಪರಂಪರೆಗೆ ಒಯ್ಯುತ್ತದೆ.ಪಂಚಾಚಾರ್ಯರ ವಿಚಾರಕ್ಕೆ ಚಂದಾದಾರರಾಗಿರುವ ಬಿ.ಜೆ.ಪಿ. ವಿಚಾರಧಾರೆಗೆ ಪಕ್ಕಾಗಿರುವ ಡಾ. ಚಿದಾನಂದಮೂರ್ತಿಗಳ ವಿಚಾರಕ್ಕೆ ಮನಸೋಲದೆ ಎಚ್. ಎಸ್. ಶಿವಪ್ರಕಾಶ್‌ ರವರು ಬಸವಣ್ಣನವರನ್ನು ಅರ್ಥೈಸಬೇಕು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry