ಬಸವಣ್ಣ ಕ್ರಾಂತಿಕಾರಿ ಮಹಾಚೇತನ: ಮುನಿಯಪ್ಪ

7

ಬಸವಣ್ಣ ಕ್ರಾಂತಿಕಾರಿ ಮಹಾಚೇತನ: ಮುನಿಯಪ್ಪ

Published:
Updated:
ಬಸವಣ್ಣ ಕ್ರಾಂತಿಕಾರಿ ಮಹಾಚೇತನ: ಮುನಿಯಪ್ಪ

ಕಡೂರು:  ಶತಮಾನಗಳ ಹಿಂದೆಯೇ ಸಮಾಜ ವನ್ನು ಸರಿದಾರಿಯಲ್ಲಿ ಕೊಂಡೊಯ್ಯುವ ಪ್ರಯತ್ನ ನಡೆಸಿದ ಬಸವಣ್ಣ ಕ್ರಾಂತಿಕಾರಿ ಮಹಾಚೇತನ ಎಂದು  ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಕೊಂಡಾಡಿದರು. ಕಡೂರಿನ ಎಪಿಎಂಸಿ ಪ್ರಾಂಗಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅವರು ಮಾತನಾಡಿದರು. ಬಸವಣ್ಣನವರ ಮೇಲ್ಪಂಕ್ತಿಯನ್ನು ಅನುಸರಿಸಿ ಮಹಾತ್ಮ ಗಾಂಧೀಜಿ ಮತ್ತು ಬಿ.ಆರ್.ಅಂಬೇಡ್ಕರ್ ಸಮಾಜವನ್ನು ಸುಧಾರಣೆ ಮಾಡುವ ಪ್ರಯತ್ನ ಮಾಡಿದರು.ಸಾಕಷ್ಟು ಬದಲಾವಣೆಗಳು ಆಗಿವೆ,ಅಂತೆಯೇ ಆಗಬೇಕಿರುವುದೂ ಸಾಕಷ್ಟಿದೆ ಎಂದು ಅಭಿಪ್ರಾಯಪಟ್ಟರು. ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ತರಳಬಾಳು ಹುಣ್ಣಿಮೆ ಸಮಾಜಕ್ಕೆ ವಿಶೇಷ ಸಂದೇಶ ನೀಡುವ ದಿಕ್ಸೂಚಿಯಾಗಿದ್ದು, ಸಮಾಜವನ್ನು ಸರಿದಾರಿಯತ್ತ ಒಯ್ಯುವ ಪ್ರಯತ್ನದ ಧಾರ್ಮಿಕ ಅಧಿವೇಶನವಾಗಿದೆ. ಸಮಾಜದ ಒಳಗೂ ಮತ್ತು ಹೊರಗೂ ಭ್ರಷ್ಟಾಚಾರ ತುಂಬಿದ್ದು, ಅದರ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. ಈ ಹೋರಾಟದ ನೇತೃತ್ವವನ್ನು ಪ್ರಶ್ನಾತೀತ ವ್ಯಕ್ತಿತ್ವಗಳು ವಹಿಸಬೇಕು ಎಂದು ಅವರು ತಿಳಿಸಿದರು. ಸಮಾಜಕ್ಕೆ ಪೂರಕವಲ್ಲದ ಮತ್ತು ನಮ್ಮದಲ್ಲದ ಅನೇಕ ಸಂಸ್ಕೃತಿ ಮತ್ತು ಆಚರಣೆಗಳು ಕೂಡ ಭ್ರಷ್ಟ ಎನಿಸುತ್ತದೆ.ಸಮಾಜ ಮತ್ತು ವೃತ್ತಿಯಲ್ಲಿರುವ ಭ್ರಷ್ಟಾಚಾರವನ್ನು ಹೋಗಲಾಡಿಸ ಬೇಕು. ನಮ್ಮ ಮನದ ಬಾಗಿಲನ್ನು ನಾವು ತೆರೆದು ನೋಡಿಕೊಳ್ಳಬೇಕಿದೆ. ವೃತ್ತಿಯಲ್ಲದ ಪ್ರವೃತ್ತಿಯೂ, ಭ್ರಷ್ಟಾಚಾರವೂ ತೊಲಗಿ ಸದಾಚಾರ ಎಲ್ಲೆಡೆ ಹರಡಲಿ ಎಂದು ಅವರು ಆಶಿಸಿದರು. ಕಾರ್ಯಕ್ರಮದ ಸಾನ್ನಿಧ್ಯವನ್ನು ಸಿರಿಗೆರೆ ಶ್ರೀಗಳು ವಹಿಸಿದ್ದರು.

ಪೇಜಾವರ ಶ್ರೀ, ಸಾಣೇಹಳ್ಳಿ ಶ್ರೀ,  ಪರಿಸರ ತಜ್ಞ ಚಂದ್ರಶೇಖರ್ ಹರಿಹರನ್, `ಸುಧಾ~ ವಾರಪತ್ರಿಕೆ ಸಹಾಯಕ ಸಂಪಾದಕ ಬಿ.ಎಂ.ಹನೀಫ್, ಕೇಂದ್ರ ಸಚಿವ ಮುನಿಯಪ್ಪ,  ,ಮಾಜಿ ಸಚಿವ ಎಸ್.ಎಸ್.ಪಾಟೀಲ್, ಶಾಮನೂರು ಮಲ್ಲಿಕಾರ್ಜುನ್, ಶಾಸಕರಾದ ಸುರೇಶ್, ಸಂಗಮೇಶ್, ಹರೀಶ್ ಮುಂತಾದವರು ಇದ್ದರು.ಬಸವಣ್ಣನ ಚಿಂತನೆ ಇಂದಿನ ಅಗತ್ಯ: ಪರಮೇಶ್ವರ್

ಕಡೂರು: ಆಧುನಿಕ ಜಗತ್ತು ಬಸವಣ್ಣನವರ ಚಿಂತನೆ ತತ್ವಗಳನ್ನು ಪರಿಪಾಲಿಸಿದರೆ ವಿಶ್ವದಲ್ಲಿ ಭಾರತಕ್ಕೆ ಇನ್ನೂ ಹೆಚ್ಚಿನ ಗೌರವ ಸಿಗುತ್ತಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅಭಿಪ್ರಾಯಪಟ್ಟರು.ಕಡೂರು ಪಟ್ಟಣದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಅವರು ಮಾತನಾಡಿದರು.

ದೇಶ ಮುಂದುವರೆದಿದ್ದರೂ ವರ್ಗ ಸಂಘರ್ಷ ಇನ್ನೂ ತಾಂಡವವಾಡುತ್ತಿದೆ. ಮಡೆಸ್ನಾನ, ತಲೆ ಮೇಲೆ ಮಲ ಹೊರುವಂತಹ ಕೀಳು ಪದ್ಧತಿ ಇನ್ನೂ ಜೀವಂತವಾಗಿರುವುದು ನಾಗರಿಕ ಸಮಾಜಕ್ಕೆ ನಾಚಿಕೆ ಗೇಡಿನ ಸಂಗತಿಯಾಗಿದೆ ಎಂದು ವಿಷಾದಿಸಿದರು. ರಾಜಕೀಯದಲ್ಲಿ ಭ್ರಷ್ಟತೆ ಇರುವ ಬಗ್ಗೆ ಒಪ್ಪಿಕೊಂಡ ಅವರು ಸಮಾಜದಲ್ಲಿ ಎಲ್ಲರೂ ಈ ಕುರಿತು ಚಿಂತನೆ ನಡೆಸಿ,ಎಳವೆಯಿಂದಲೇ ಮಕ್ಕಳಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿ ತಿದ್ದುವ ಕೆಲಸವಾಗಬೇಕು. ಗುರುಮಠಗಳು ಭ್ರಷ್ಟಾಚಾರ ಎಂಬ ಪಿಡುಗನ್ನು ತೊಲಗಿಸಲು ಮತ್ತು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತುವ ಕೆಲಸ ಮಾಡಬೇಕು ಎಂದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಹುಣ್ಣಿಮೆ ಮಹೋತ್ಸವಗಳು ಅನೇಕ ಸಾಮಾಜಿಕ ಚಿಂತನೆಯ ವಿಚಾರಗಳನ್ನು ಬಿತ್ತುವ ಕೆಲಸ ಮಾಡುತ್ತಿದ್ದು ಅದರ ಪ್ರೇರಣೆಯಿಂದ ತಮ್ಮ ಅಧಿಕಾರಾವಧಿಯಲ್ಲಿ ಸಾರಾಯಿ ನಿಷೇಧ ಮಾಡುವ ದಿಟ್ಟ ನಿರ್ಧಾರ ಕೈಗೊಳ್ಳುವ ಹುರುಪು ಬಂದಿತು ಎಂದರು. ಗ್ರಾಮೀಣ ಪ್ರದೇಶಗಳ ರೈತರ ಸಂಕಷ್ಟ ಹೆಚ್ಚುತ್ತಿದ್ದು ಅವರನ್ನು ಒಕ್ಕಲೆಬ್ಬಿಸುವ ಅರಣ್ಯ ಕಾಯ್ದೆಗಳು ಸಮಾಜಕ್ಕೆ ಮಾರಕವಾಗಿದ್ದು ರೈತರು ತಮ್ಮ ಬೆಳೆಗೆ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಸರ್ಕಾರ ಸೂಕ್ತವಾಗಿ ಸ್ಪಂದಿಸಲಿ ಎಂದರು.       

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry