ಬಸವಣ್ಣ ದೇವರ ರಥೋತ್ಸವ ಇಂದು

7

ಬಸವಣ್ಣ ದೇವರ ರಥೋತ್ಸವ ಇಂದು

Published:
Updated:

ನರಗುಂದ: ಬೇಡಿದ್ದನ್ನು ಕೊಡುವ ಈ ಭಾಗದ ಭಕ್ತರ ಇಷ್ಟದೈವವೆಂದು ಕರೆಯಲ್ಪಡುವ ತಾಲ್ಲೂಕಿನ ಕಲ್ಲಾಪುರದ ಬಸವಣ್ಣದೇವರ ರಥೋತ್ಸವ ಸಹಸ್ರಾರುಭಕ್ತರ ಸಮ್ಮುಖದಲ್ಲಿ ಇದೇ 2ರಂದು ಸಂಜೆ  ನಡೆಯಲಿದೆ.ಮಲಪ್ರಭೆ ಹೊಳೆಯ ದಡದ ಮೇಲೆ ಹೊಲವೊಂದರಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಈ ದೇವಾಲಯ 1200 ವರ್ಷಗಳಷ್ಟು ಹಳೆಯದು ಎಂದು ಕೆಲವು ಹಿರಿಯರು ಹೇಳುತ್ತಾರೆ. ಊರ ಸಮೀಪ ಇರುವ ಹೊಲದಲ್ಲಿ ರೈತನೊಬ್ಬ ನೇಗಿಲು ಹೊಡೆಯುತ್ತಿರುವಾಗ ನೇಗಿಲ ಬಾಯಿಗೆ ಈ ಮೂರ್ತಿ ಉದ್ಭವವಾಗಿತ್ತು. ಆಗ ಅದನ್ನು ಮೇಲೆತ್ತಲು ಪ್ರಯತ್ನಿಸಿದಾಗ   ಅದು  ಸಾಧ್ಯವಾಗಲಿಲ್ಲ. ಆದ್ದರಿಂದ ಅಲ್ಲಿಯೇ  ಈ ಬಸವಣ್ಣದೇವರ ಮೂರ್ತಿಯನ್ನು ಧಾರ್ಮಿಕ ವಿದಿವಿಧಾನಗಳೊಂದಿಗೆ ಪ್ರತಿಷ್ಠಾಪಿಸಲ್ಪಟ್ಟು ಉತ್ತರ ಕರ್ನಾಟಕದಲ್ಲಿಯೇ ಎಲ್ಲರ ಮನೆಯ ದೇವರಂತೆ ಪೂಜಿಸಲ್ಪಟ್ಟಿತು ಎಂಬುದು ಜನರ ನಂಬುಗೆ.ದೂರದ ಊರುಗಳಿಂದ ಭಕ್ತರು ತಮ್ಮ ಜಾನುವಾರುಗಳನ್ನು ಇಲ್ಲಿಗೆ ಕರೆ ತಂದು ದೇವಸ್ಥಾನ ಸುತ್ತ ಪ್ರದಕ್ಷಿಣೆ ಹಾಕಿ  ತಮ್ಮ ಇಷ್ಟಾರ್ಥಗಳನ್ನು ನೆರವೇರಿಸಿಕೊಳ್ಳುತ್ತಾರೆ. ಜಾನುವಾರುಗಳಿಗೆ  ಯಾವ ರೋಗ ಬಂದರೂ ಇಲ್ಲಿಯ ಅಂಗಾರವನ್ನು ಒಯ್ದು ಹಚ್ಚಿದರೆ  ಆ ರೋಗ ವಾಸಿಯಾಗುತ್ತದೆ ಎಂಬ ನಂಬಿಕೆ ಇದೆ. ಅದು ಕೆಲವು ಘಟನೆಗಳಿಂದ  ಸತ್ಯವೂ ಆಗಿದೆ ಎಂದು  ಅದರ ಅನುಭವ ಪಡೆದ  ಭಕ್ತರು ತಮ ಮನದಾಳದ ಮಾತುಗಳನ್ನು ಹೇಳುತ್ತಿರುವುದು ವಿಶೇಷ.ಹಾವು ಕಚ್ಚಿದ ತಕ್ಷಣ  ಇಲ್ಲಿಗೆ ಬಂದು ಭಜನೆ, ಭಕ್ತಿ ಸೇವೆ ಸಲ್ಲಿಸಿ ಅಂಗಾರ ಹಚ್ಚಿಕೊಂಡರೆ ಹಾವು ಕಚ್ಚಿದವರು ಬದುಕಿದ್ದು ದೇವರ ಪವಾಡಕ್ಕೆ  ಸಾಕ್ಷಿಯಾಗಿದೆ. ಇದಲ್ಲದೇ ತೊನ್ನು ರೋಗಕ್ಕೂ ಈ ದೇವರ ಅಂಗಾರ ಮದ್ದಾಗಿರುವುದು ವಿಶೇಷವಾಗಿದೆ.ಇಷ್ಟೆಲ್ಲ ವಿಶೇಷತೆ ಹೊಂದಿರುವ ಬಸವಣ್ಣ ದೇವರ ರಥೋತ್ಸವಕ್ಕೆ ಹೊರ ರಾಜ್ಯಗಳಿಂದ, ಉತ್ತರ ಕರ್ನಾಟಕದ ಸಹಸ್ರಾರು ಜನರು ಆಗಮಿಸುತ್ತಾರೆ.ದೇವಾಲಯವು ಜಿರ್ಣೋದ್ಧಾರಗೊಂಡಿದ್ದು  ಮೇ ತಿಂಗಳಲ್ಲಿ ಪ್ರತಿ ವರ್ಷ ಸಾಮೂಹಿಕ ವಿವಾಹ, ಸಾಂಸ್ಕೃತಿಕ  ಕಾರ್ಯಕ್ರಮ  ನಡೆಯುತ್ತವೆರ. ಪ್ರತಿ ಶ್ರಾವಣ  ಮಾಸದ ಕೊನೆಯ ಸೋಮವಾರ ರಥೋತ್ಸವ ನಡೆಯುತ್ತದೆ. ಈ ಸಲದ ರಥೋತ್ಸವ ಇದೇ 2ರಂದು ಸಂಜೆ 5 ಗಂಟೆಗೆ ಭೈರನಹಟ್ಟಿಯ ಶಾಂತಲಿಂಗ ಸ್ವಾಮೀಜಿಗಳ  ಸಮ್ಮುಖದಲ್ಲಿ ನಡೆಯುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry