ಬಸವನಬೆಟ್ಟ ಟೆಂಪೊ ದುರಂತ

7

ಬಸವನಬೆಟ್ಟ ಟೆಂಪೊ ದುರಂತ

Published:
Updated:

ಹಲಗೂರು: ಸಮೀಪದ ಬಸವನಬೆಟ್ಟದಲ್ಲಿ ಗುರುವಾರ ಸಂಭವಿಸಿದ ಟೆಂಪೊ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ  ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸುವ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚೆ ನಡೆಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆರ್.ಅಶೋಕ್ ಭರವಸೆ ನೀಡಿದರು.ಟೆಂಪೊ ದುರಂತದಲ್ಲಿ ಮೃತಪಟ್ಟ ಕುಟುಂಬದವರ ಮನೆಗೆ ಶುಕ್ರವಾರ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಮಂಡ್ಯ ಜಿಲ್ಲೆಯಲ್ಲಿ ಖಾಸಗಿ ವಾಹನ ಅಪಘಾತಗಳು ಹೆಚ್ಚು ಸಂಭವಿಸುತ್ತಿವೆ. ಸರ್ಕಾರಿ ಬಸ್ ಸೇವೆಯಿದ್ದರೂ ಹೆಚ್ಚು ಜನರು ಟೆಂಪೊ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ನಂಥ ಖಾಸಗಿ ವಾಹನಗಳಲ್ಲೇ ಸಂಚರಿಸುತ್ತಾರೆ ಎಂದು ವಿಷಾದಿಸಿದರು. ಬಿಜೆಪಿ ಮುಖಂಡ ಮುನಿರಾಜು ವೈಯಕ್ತಿಕವಾಗಿ ಮೃತರ ಕುಟುಂಬದವರಿಗೆ ಆರ್ಥಿಕ ಸಹಾಯ ನೀಡಿದರು.

ವಿಧಾನಪರಿಷತ್ ಸದಸ್ಯ ಅಶ್ವಥ್‌ನಾರಾಯಣ, ಬಿ.ಜೆ.ಪಿ ಮುಖಂಡ ಮುನಿರಾಜು, ಜಿಲ್ಲಾಧಿಕಾರಿ ಪಿ.ಸಿ.ಜಾಫರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್, ತಹಶೀಲ್ದಾರ್ ಬಿ.ವಾಣಿ, ಡಿ.ವೈ.ಎಸ್.ಪಿ ಉತ್ತಪ್ಪ, ಉಪತಹಶೀಲ್ದಾರ್ ಕಾಡಯ್ಯ, ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷ ಎಚ್.ಆರ್.ಅಶೋಕ್‌ಕುಮಾರ್, ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕಪನೀಗೌಡ, ನಿಟ್ಟೂರು ಗ್ರಾಮಪಂಚಾಯಿತಿ ಮಾಜಿ ಅಧ್ಯಕ್ಷ ಬುಯ್ಯನದೊಡ್ಡಿ ಕೃಷ್ಣೇಗೌಡ, ಸಮಾಜ ಸೇವಕ ಬಾಳೆಹೊನ್ನಿಗ ಕೃಷ್ಣಪ್ಪ, ಲಾರಿ ಮಾಲೀಕರ ಸಂಘದ ಸಿ.ಎಂ.ಇಬ್ರಾಹಿಂ ಇದ್ದರು.ಸರ್ಕಾರ ನೀಡದಿದ್ದರೆ ಜೆಡಿಎಸ್ ವತಿಯಿಂದ ಪರಿಹಾರ: ಎಚ್‌ಡಿಕೆ

ಬಸವನಬೆಟ್ಟದಲ್ಲಿ ಗುರುವಾರ ಸಂಭವಿಸಿದ ಟೆಂಪೊ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ತಲಾ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಮುಖ್ಯಮಂತ್ರಿ ಅವರ ಬಳಿ ಮನವಿ ಮಾಡಲಾಗುವುದು. ಒಂದು ವೇಳೆ ಸರ್ಕಾರ ಪರಿಹಾರ ನೀಡದಿದ್ದರೆ ಪಕ್ಷದ ವತಿಯಿಂದ ರೂ. 50ಸಾವಿರ ನೀಡುವುದಾಗಿ ಮಾಜಿ ಮುಖ್ಯಮಂತ್ರಿ, ಸಂಸದ ಎಚ್.ಡಿ.ಕುಮಾರಸ್ವಾಮಿ ಹೇಳಿದರು.ಟೆಂಪೊ ದುರಂತದಲ್ಲಿ ಮೃತಪಟ್ಟ ಕುಟುಂಬದವರ ಮನೆಗೆ ಶುಕ್ರವಾರ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಜಕೀಯ ಪದಾರ್ಪಣೆ ಮಾಡಿದ ಕ್ಷೇತ್ರದಲ್ಲಿ ನಡೆದಿರುವ ದುರಂತದಿಂದ ನೋವಾಗಿದೆ ಎಂದರು.ದೂರು: ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೆ ಸಾಂತ್ವನ ಹೇಳಲು ಬಂದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಸಾರಾಯಿ ನಿಷೇಧ ಮಾಡಿದ್ದರಿಂದ ಹಲವು ಕುಟುಂಬಗಳು ಬೀದಿಗೆ ಬಂದಿವೆ, ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಕೆಲವರು ಪ್ರಶ್ನಿಸಿದರು.  ಕುಡಿದ ಪತಿಯಿಂದ ಹೆಣ್ಣು ಮಕ್ಕಳಿಗೆ ಆಗುತ್ತಿದ್ದ ತೊಂದರೆ ನಿವಾರಣೆಗೆ ಸಾರಾಯಿ ನಿಷೇಧ ಮಾಡಲಾಯಿತು. ಇದರಿಂದ ಆರ್ಥಿಕ ತೊಂದರೆಗೆ ಸಿಲುಕಿದವರಿಗೆ ಬೇರೆ ವ್ಯವಸ್ಥೆ ಕಲ್ಪಿಸುವಷ್ಟರಲ್ಲಿ ಅಧಿಕಾರ ಇರಲಿಲ್ಲ ಎಂದರು.ಅಧಿಕಾರಕ್ಕೆ ಬಂದರೆ ಮತ್ತೆ ಸಾರಾಯಿ ಜಾರಿಗೆ ತರುತ್ತೀರಾ ಎಂಬ ಪ್ರಶ್ನೆಗೆ ಯಾವುದೇ ಕಾರಣಕ್ಕೂ ಸಾರಾಯಿ ಜಾರಿ ಮಾಡುವುದಿಲ್ಲ. ಸಾರಾಯಿ ಮತ್ತು ಲಾಟರಿ ಉದ್ಯೋಗದಲ್ಲಿ ತೊಡಗಿದವರಿಗೆ ಬ್ಯಾಂಕಿನಿಂದ ಕಡಿಮೆ ಬಡ್ಡಿ ದರದಲ್ಲಿ ಸಾಲದ ಸವಲತ್ತು ನೀಡಿ ಬೇರೆ ಉದ್ಯಮದಲ್ಲಿ ತೊಡಗುವಂತೆ ಮಾಡಲಾಗುವುದು.

 

ಅಲ್ಲದೆ ಹಳ್ಳಿಗಳಲ್ಲಿ ಮಾರಾಟವಾಗುತ್ತಿರುವ ಕಡಿಮೆ ದರ್ಜೆ ಮದ್ಯ ಮಾರಾಟದ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದರು.ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಜಯಲಕ್ಷ್ಮಮ್ಮ, ಎ.ಪಿ.ಎಂ.ಸಿ ನಿರ್ದೇಶಕ ಬೆನಮನಹಳ್ಳಿ ಬಸವರಾಜು, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎನ್. ರಾಮಚಂದ್ರ, ಮಾಜಿ ಅಧ್ಯಕ್ಷ ಪಟೇಲ್ ರಾಜಣ್ಣ ಜತೆಯಲ್ಲಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry