ಬಸವಯ್ಯನ ಉಚಿತ ಉಳುಕು ಸೇವೆ!

7

ಬಸವಯ್ಯನ ಉಚಿತ ಉಳುಕು ಸೇವೆ!

Published:
Updated:

ಶ್ರೀರಂಗಪಟ್ಟಣ: ತಾಲ್ಲೂಕಿನ ಅಲ್ಲಾಪಟ್ಣದ ಬಸವಯ್ಯ ಉಳುಕು ತೆಗೆಯೋದ್ರಲ್ಲಿ ನಿಸ್ಸೀಮ. ಕೈ, ಕಾಲು, ಸೊಂಟ ಉಳುಕಿದರೆ ಕೆಲವೇ ನಿಮಿಷದಲ್ಲಿ ಸರಿ ಮಾಡುವ ಬಸವಯ್ಯನಿಗೆ ‘ಉಳುಕು ಬಸವಯ್ಯ’ ಎಂದೇ ಹೆಸರು.ಬಸವಯ್ಯ ಅವರದ್ದು ಗುರುವಿಲ್ಲದ ವಿದ್ಯೆ. ಪಾಂಡವಪುರ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಸತತ 20 ವರ್ಷ ಜೀತ ಮಾಡಿ, ಕಡು ಕಷ್ಟದಲ್ಲಿ ಬೆಳೆದ 70ರ ಹರೆಯದ ಬಸವಯ್ಯ ಧಣಿಗಳ ಮನೆಯಲ್ಲಿ ಕಸ, ಮುಸುರೆ ಬಳಿಯುತ್ತಲೇ ಉಳುಕು ತೆಗೆಯುವ ಕಲೆಯನ್ನು ಕರಗತ ಮಾಡಿ ಕೊಂಡಿದ್ದಾರೆ. ಮುಂಗೈ ಮೂಳೆ, ಸೊಂಟದ ಕೀಲು, ಪಾದದ ಗಿಟುಕು ಜಾರಿದರೆ ಅದನ್ನು ನಿಮಿಷ ಮಾತ್ರದಲ್ಲಿ ಕೂರಿಸಿಬಲ್ಲರು. ಸರಿ ಇರುವ ಮನುಷ್ಯನ ಕೀಲುಗಳನ್ನು ಒಂದೊಂದಾಗಿ ಕಳಚಿ ಮತ್ತೆ ಸ್ವಸ್ಥಾನಕ್ಕೆ ಕೂರಿಸುವಷ್ಟರ ಮಟ್ಟಿಗೆ ಪರಿಣತಿ ಪಡೆದಿದ್ದಾರೆ. ಬಸವಯ್ಯ ಅವರಿಂದ ಉಳುಕು ತೆಗೆಸಿಕೊಂಡ ವರು ನೂರಾರು ಮಂದಿ. ಮಂಡ್ಯ, ಮೈಸೂರು, ಚಾಮರಾಜನಗರ, ಚನ್ನಪಟ್ಟಣ ಇತರ ಕಡೆಗಳಿಂದ ಜನ ಬಸವಯ್ಯ ಅವರನ್ನು ಹುಡುಕಿ ಕೊಂಡು ಬರುತ್ತಾರೆ. ಹಾಗೆ ಬರುವವರ ಬಳಿ ಹಣಕ್ಕೆ ಒತ್ತಾಯಿಸು ವುದಿಲ್ಲ. ಪ್ರೀತಿಯಿಂದ ಕೊಟ್ಟರೆ ಅಷ್ಟಿಷ್ಟು ಪಡೆಯುತ್ತಾರೆ, ಕೆಲವೊಮ್ಮೆ ತಾವೇ ಕಾಫಿ ಕುಡಿಸಿ ಕಳುಹಿಸುತ್ತಾರೆ.ಜನರಿಗೆ ಅಷ್ಟೇ ಅಲ್ಲ; ರಾಸುಗಳಿಗೆ ಚಪ್ಪೆ ಜಾರಿದರೂ ಬಸವಯ್ಯ ಅದನ್ನು ಸಲೀಸು ಕೂರಿಸುತ್ತಾರೆ. ದನ, ಎಮ್ಮೆ, ಕುರಿ, ಮೇಕೆಗಳಿಗೆ ಕಾಯಿಲೆಯಾದರೆ ನಾಟಿ ಔಷಧಿ ಕೊಡುತ್ತಾರೆ. ಹರಿಸ್ತಿ, ನಾಗೇರು, ಬೆನ್ನುಪಣಿ, ಪಿಂಜಿ (ಸಗಣಿಯಲ್ಲಿ ರಕ್ತ ಒಸರುವುದು) ಇತರ ಬೇನೆಗಳಿಗೆ ಗಿಡಮೂಲಿಕೆ ಚಿಕಿತ್ಸೆ ನೀಡುತ್ತಾರೆ. ಉಳುಕು ಸರಿಪಡಿಸಲು ಇವರಿಗೆ ಎಣ್ಣೆ, ತುಪ್ಪ ಇತರ ಯಾವುದೇ ವಸ್ತುಗಳು ಬೇಕಿಲ್ಲ. ಕೇವಲ ಒಂದು ಲೋಟ ನೀರು ಕೊಟ್ಟರೆ ಸಾಕು; ಉಳುಕಿರುವ ಭಾಗ ಸರಿ ಮಾಡುತ್ತಾರೆ.  ಓದು, ಬರಹ ಗೊತ್ತಿಲ್ಲದ ಬಸವಯ್ಯ ಉಳುಕು ತೆಗೆಯುವ ಕುರಿತು ಹೇಳುವುದು ಹೀಗೆ: ‘ಜೀತ ಮಾಡ್ತಿದ್ನಲ್ಲ ಅಲ್ಲಿ ನಮ್ಮ ಗೌಡ್ರು ಮನೆ ಎತ್ತು, ಎಮ್ಮೆ ಚಪ್ಪೆ ಜಾರಿದ್ರೆ- ನಾಗೇರು, ಹರಸ್ತಿ ಆದ್ರೆ ಅದನ್ನ ಸರಿ ಮಾಡೋಕೆ ಅಂತ ಯಾರ್ಯಾರೋ ಬರ್ತಿದ್ರು. ಅದನ್ನು ನೋಡಿ ಕಣ್ಣಲ್ಲೇ ತಿಳ್ಕಂಡೆ. ನಾಟಿ ಅವಸ್ದಿ ಮಾಡೋದೂ ಕಲ್ತ್‌ಕೊಂಡೆ. ಆಮೇಲಾಮೇಲೆ ಜನ್ರಿಗೆ ಉಳುಕು ತೆಗೆಯೋದು ಗೊತ್ತಾತು. 10 ಜನ್ರ ಕೈಲಿ ಆಗದಿದ್ರೂ ಜಾರಿರೋ ಮೂಳೇನ್ನ ನಾನು ಕೂರಿಸ್ತೀನಿ. ಕತ್ತು, ತೋಳು, ಸೊಂಟ, ಮಂಡಿ, ಪಾದ ಉಳುಕಿದ್ರೆ ಒಂದು ಬೊಗ್ಸೆ ನೀರು ತಗಂಡು ಸರಿ ಮಾಡ್ತೀನಿ’ ಎಂದು ತಮ್ಮ ಗುರುವಿಲ್ಲದ ವಿದ್ಯೆಯ ಬಗ್ಗೆ ಅಭಿಮಾನದಿಂದ ಹೇಳುತ್ತಾರೆ.  ಅಂದಹಾಗೆ ಬಸವಯ್ಯ ಅವರ ಸೇವೆ ಅಗತ್ಯವಿದ್ದರೆ ಅವರನ್ನು ಮೊ:98443 25593 ಮೂಲಕ ಸಂಪರ್ಕಿಸಬಹುದು. ‘ಇದು ಉಳುಕು ತೆಗೆಸಿಕೊಂಡ ಪುಣ್ಯಾತ್ಮರು ಕೊಟ್ಟಿರೋ ಮೊಬೈಲ್ ಕನಣ್ಣ’ ಅಂತಾರೆ ಹಳ್ಳಿಯ ‘ಮೂಳೆ ಡಾಕ್ಟ್ರು’ ಕಂ ‘ನಾಟಿವೈದ್ಯ’ ಬಸವಯ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry