ಭಾನುವಾರ, ನವೆಂಬರ್ 17, 2019
24 °C

ಬಸವಳಿದು ಬಾಯ್ಬಿಟ್ಟ ಜನ.

Published:
Updated:

ರಾಯಚೂರು: ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಮಂಗಳವಾರ ಸಿಂಧನೂರಿನಲ್ಲಿ ಕೆಪಿಸಿಸಿ ಆಯೋಜಿಸಿದ್ದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಸುಮಾರು 4 ತಾಸು ತಡವಾಗಿ ಬಂದರು. ರಾಹುಲ್ ಅವರನ್ನು ನೋಡಿ ಭಾಷಣ ಆಲಿಸಲು ಮುಂಜಾನೆ 9 ಗಂಟೆಯಿಂದಲೇ ಬಂದ ಜನ ಬಿಸಿಲಿನ ತಾಪಕ್ಕೆ ಸುಸ್ತಾದರು.ಬೃಹತ್ ಪೆಂಡಾಲ್ ಹಾಕಿದ್ದರೂ ಜನಸ್ತೋಮಕ್ಕೆ ಪೆಂಡಾಲ್ ನೆರಳು ಸಾಲಲಿಲ್ಲ. ಪೆಂಡಾಲ್‌ನಲ್ಲಿ ಕುಳಿತಿದ್ದವರೂ ಕುಡಿವ ನೀರಿಗಾಗಿ ಬಾಯ್ಬಿಡುತ್ತಿದ್ದರು. ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದರು. ಇನ್ನು ಪೆಂಡಾಲ್ ಹೊರಗಡೆ ಇದ್ದ ಜನ ಸುಡು ಬಿಸಿಲಿನಲ್ಲಿಯೇ ತಲೆ ಮೇಲೆ `ಟವೆಲ್', ಛೇರ್‌ಗಳನ್ನು ಹೊದ್ದು ಸಮಯ ಕಳೆದರು.ನೀರಿನ ಹಾಹಾಕಾರದಿಂದ ಜನ ಕಿರಿ ಕಿರಿ ಅನುಭವಿಸಿದರು. ನೆರೆದ ಜನಸ್ತೋಮದಲ್ಲಿ ಯಾರಾದರೂ ಹತ್ತಿರ ಒಂದು ಕುಡಿವ ನೀರಿನ ಪೌಚ್ ಇದ್ದದ್ದು ಕಂಡರೆ ಮರುಭೂಮಿಯಲ್ಲಿ ಒಯಾಸಿಸ್ ಕಂಡಂತೆ ಭಾಸವಾಗಿ ತಡ ಮಾಡದೇ ಕಿತ್ತುಕೊಂಡು ಗಂಟಲಿಗೆ ನೀರು ಇಳಿಸಿ ತೃಪ್ತಿ ಹೊಂದುತ್ತಿದ್ದುದು ಕಂಡು ಬಂದಿತು.

ನೆರೆದ ಜನಸ್ತೋಮ ನೀರಿಗಾಗಿ ಪಡುತ್ತಿದ್ದ ಈ ಬವಣೆ ಕಂಡ ಎಐಸಿಸಿ ಕಾರ್ಯದರ್ಶಿ ಹನುಮಂತರಾವ್ ಹಾಗೂ ಇತರಮುಖಂಡರೂ ಮೈಕ್‌ನಲ್ಲಿಯೇ ಹೇಳಿ ಕಾರ್ಯಕರ್ತರ ಮೂಲಕ ನೀರಿನ ಪ್ಯಾಕೇಟ್ ವಿತರಣೆ ವ್ಯವಸ್ಥೆ ಮಾಡಿದರೂ ನೆರೆದ ಜನಸ್ತೋಮದ ಬಾಯಾರಿಕೆ ಹಿಂಗಿಸಲಾಗಲಿಲ್ಲ. ಅನೇಕ ಜನ ಪೆಂಡಾಲ್‌ನಿಂದ, ಹೊರ ನಡೆದು, ಪೊಲೀಸರ ಜತೆ ಕಿತ್ತಾಡಿಕೊಂಡು ಹೋಗಿ ನೀರಿನ ಬಾಟಲ್, ಪೌಚ್ ತಂದು ಬಾಯಾರಿಕೆ ನೀಗಿಸಿಕೊಂಡರು.ಶಾಸಕ ಹಂಪನಗೌಡ ಬಾದರ್ಲಿ, ಅಮರೇಗೌಡ ಬಯ್ಯಾಪುರ, ಸಯ್ಯದ್ ಯಾಸಿನ್, ಪ್ರತಾಪಗೌಡ ಪಾಟೀಲ್, ಶಿವರಾಜ ತಂಗಡಗಿ ಹೀಗೆ ಅನೇಕರು ಮಾತನಾಡಿ ಬಿಜೆಪಿ ಸರ್ಕಾರದ ದುರಾಡಳಿತ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಆಗುವ ಪ್ರಯೋಜನಗಳ ಬಗ್ಗೆ ವಿವರಿಸಿ ಕಾಲ ಕಳೆದರು. 10 ಗಂಟೆಗೆ ಬರಬೇಕಾದ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಬಂದಿದ್ದು 2 ಗಂಟೆಗೆ! ಬಂದು ವೇದಿಕೆ ಏರಿದ ಯುವರಾಜ ಮೊದಲು ನುಡಿದಿದ್ದು ತಾವು ತಡವಾಗಿ ಬಂದಿದ್ದಕ್ಕೆ ಕ್ಷಮಿಸಿ ಎಂದು ಹೇಳುವ ಮೂಲಕ ಬಿಸಿಲಿನ ತಾಪಕ್ಕೆ ಸುಸ್ತಾದ ಜನರ ಕೋಪ ತಣ್ಣಗೆ ಮಾಡಿ ಮಾತಿಗಿಳಿದರು.ರಾಹುಲ್ ಬರುವ ಮುನ್ನ ವೇದಿಯ ಎಡಭಾಗದಲ್ಲಿ ಇಟ್ಟಿದ್ದ ಮೈಕ್‌ನಲ್ಲಿ ಗಾಳಿ ಸುಳಿದ ಸೌಂಡ್ ಹೆಲಿಕಾಪ್ಟರ್ ಸದ್ದು ಹೋಲುವಂತಿತ್ತು. ಇದನ್ನ ಕಂಡ ಜನ ಹೊಯ್ ಎಂದು ಕೇ ಕೇ ಹಾಕಿ ಆಕಾಶದತ್ತ ಕಣ್ಣು ಹಾಯಿಸುತ್ತಿದ್ದರು.

ಹೀಗೆ ಆಕಾಶದತ್ತ ಕಣ್ಣು ಹಾಯಿಸಿದ ಜನಕ್ಕೆ ಆಕಾಶದಲ್ಲಿ ಕಂಡಿದ್ದು ಸುಂಟರಗಾಳಿಯಲ್ಲಿ ಎಲ್ಲಿಂದಲೋ ಬಂದ ಹರಕು ಬಟ್ಟೆ ಆಕಾಶದಲ್ಲಿ ತೇಲುತ್ತ ವೇದಿಕೆಯ ಸುತ್ತ ಗಿರಕಿ ಹೊಡೆಯುತ್ತಿದ್ದುದು ಸುಡುಬಿಸಿಲಿನಲ್ಲೂ ಜನರಿಗೆ ಮೋಜು ತಂದಿತು.

ಪ್ರತಿಕ್ರಿಯಿಸಿ (+)