ಶುಕ್ರವಾರ, ಫೆಬ್ರವರಿ 26, 2021
31 °C

ಬಸವಸಾಗರ ಜಲಾಶಯ: 52ಸಾವಿರ ಕ್ಯುಸೆಕ್‌ ನೀರು ನದಿಗೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವಸಾಗರ ಜಲಾಶಯ: 52ಸಾವಿರ ಕ್ಯುಸೆಕ್‌ ನೀರು ನದಿಗೆ ಬಿಡುಗಡೆ

ಬೆಂಗಳೂರು:  ಮಹಾರಾಷ್ಟ್ರ ಸೇರಿದಂತೆ ಕೃಷ್ಣಾ ನದಿ ತೀರದಲ್ಲಿ ಮಳೆಯಾಗುತ್ತಿದ್ದು, ಯಾದಗಿರಿ ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಮಂಗಳವಾರ 52 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ. ಸಂಜೆ 59 ಸಾವಿರ ಕ್ಯುಸೆಕ್‌ ನೀರು ಒಳಹರಿವು ಇತ್ತು. ಇದರಿಂದಾಗಿ 8 ಗೇಟ್‌ಗಳ ಮುಖಾಂತರ ನೀರನ್ನು ಬಿಡಲಾಗುತ್ತಿದೆ. ಎಡದಂಡೆ ಮುಖ್ಯ ಕಾಲುವೆಗೆ 5,500 ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ ಎಂದು  ಜಲಾಶಯದ ಮೂಲಗಳು ತಿಳಿಸಿವೆ.ಜಲಾಶಯದ ಗರಿಷ್ಠ ಮಟ್ಟ 492.252. ಸಂಜೆ 491.960 ಇದ್ದು ಒಟ್ಟು 31 ಟಿಎಂಸಿ ಅಡಿ ನೀರು ಸಂಗ್ರಹವಿದೆ. 33 ಟಿಎಂಸಿ ಸಾಮರ್ಥ್ಯದ ಜಲಾಶಯವು 6 ಲಕ್ಷ ಎಕರೆಗಳಿಗೆ ನೀರುಣಿಸಲಿದೆ. ಕರ್ನಾಟಕ ಸೇರಿದಂತೆ ಆಂಧ್ರ ಮತ್ತು ತೆಲಂಗಾಣ ಜನರಿಗೂ ಈ ನೀರು ಬಳಕೆಯಾಗುತ್ತದೆ.ನದಿ ಪಾತ್ರದ ಜನರಿಗೆ ಸೂಚನೆ: ಒಳಹರಿವು ಹೆಚ್ಚಾಗುತ್ತಿರುವುದ ರಿಂದ ನದಿಯಿಂದ ಮತ್ತಷ್ಟು ನೀರು ಹೊರಬಿಡುವ ಸಾಧ್ಯತೆ ಇದೆ. ಆದ್ದರಿಂದ ಎದಲಬಾವಿ, ಗೆದ್ದಲಮರಿ, ಜುಮುಲಾಪುರ, ಶೆಳ್ಳಗಿ, ನೀಲಕಂಠರಾಯನ ಗಡ್ಡಿ ಸೇರಿದಂತೆ ವಿವಿಧ ಗ್ರಾಮಸ್ಥರು ಹಾಗೂ ನದಿ ತೀರದಲ್ಲಿರುವ ಪಂಪ್‌ಸೆಟ್‌ ಹೊಂದಿರುವವರಿಗೆ ಸೂಚನೆ ನೀಡಲಾಗಿದೆ.ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದಂತೆ ಜಿಲ್ಲೆಯ ನೀಲಕಂಠರಾಯನ ಗಡ್ಡಿ ಸೇರಿದಂತೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಕೆಲ ದೊಡ್ಡಿಗಳು ಸಂಪರ್ಕ ಕಳೆದುಕೊಳ್ಳುವ ಭೀತಿ ಇದ್ದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಲಾಗಿದೆ.ಕಣಕುಂಬಿಯಲ್ಲಿ 14 ಸೆಂ. ಮೀ ಮಳೆ: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನಲ್ಲಿ ಮಂಗಳವಾರವೂ ಮಳೆ ಮುಂದುವರಿದಿದೆ. ಬೆಳಿಗ್ಗೆಯಿಂದಲೂ ಖಾನಾಪುರದಲ್ಲಿ ಬಿರುಸಾಗಿ ಸುರಿದಿದ್ದು, ಕಣಕುಂಬಿ ಪ್ರದೇಶದಲ್ಲಿ 14 ಸೆಂ.ಮೀನಷ್ಟು ಮಳೆ ದಾಖಲಾಗಿದೆ. ಜಲಾನಯನ ಪ್ರದೇಶಗಳಲ್ಲಿ ಆಗುತ್ತಿರುವ ಸತತ ಮಳೆಯಿಂದಾಗಿ ಮಲಪ್ರಭಾ ನದಿಗೆ ನೀರಿನ ಹರಿವಿನ ಪ್ರಮಾಣ ಹೆಚ್ಚಾಗಿದೆ. ಬೆಳಗಾವಿ, ಚಿಕ್ಕೋಡಿಯಲ್ಲಿ ತುಂತುರು ಮಳೆಯಾಗಿದೆ.ಮಹಾರಾಷ್ಟ್ರದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಅಲ್ಲಿನ ರಾಜಾಪುರ ಬ್ಯಾರೇಜ್‌ನಿಂದ ಕೃಷ್ಣಾ ನದಿಗೆ 16,459 ಕ್ಯುಸೆಕ್‌ನಷ್ಟು ನೀರು ಬಿಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದ್ದು, ಭಟ್ಕಳದಲ್ಲಿ ತುಂತುರಾಗಿ ಹಾಗೂ ಹಳಿಯಾಳದಲ್ಲಿ ಬಿಟ್ಟು ಬಿಟ್ಟು ಸುರಿದಿದೆ.ಸಾಧಾರಣ ಮಳೆ: ಶಿವಮೊಗ್ಗ ಜಿಲ್ಲೆಯ ಕೆಲವೆಡೆ ಮಂಗಳವಾರ ಸಾಧಾರಣ ಮಳೆಯಾಗಿದೆ. ಸಾಗರ, ಹೊಸನಗರ, ಶಿಕಾರಿಪುರ, ತೀರ್ಥಹಳ್ಳಿ, ಸೊರಬ ಭಾಗಗಳಲ್ಲಿ ಸಾಧಾರಣ ಮಳೆ ಸುರಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.