ಮಂಗಳವಾರ, ಮೇ 17, 2022
27 °C
ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳ ಸೂಚನೆ

ಬಸವಸಾಗರ ಭರ್ತಿ: ನೀರು ಬಿಡುಗಡೆ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಜಿಲ್ಲೆಯ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಗೆ ಇನ್ನೊಂದು ಮೀಟರ್ ಮಾತ್ರ ಬಾಕಿ ಇದ್ದು, ಯಾವುದೇ ಸಂದರ್ಭದಲ್ಲಿ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಈ ನದಿ ತೀರದಲ್ಲಿ ಬರುವ ಜನರು ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಅಧಿಕಾರಿಗಳು ಕೂಡ ಇಂತಹ ಜನರಿಗೆ ತೊಂದರೆ ಆಗದಂತೆ ಎಲ್ಲ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ವಿವಿಧ ಅಧಿಕಾರಿಗಳೊಂದಿಗೆ ನಡೆಸಿದ ತುರ್ತು ಸಭೆಯಲ್ಲಿ ಅವರು ಮಾತನಾಡಿದರು.ಆಲಮಟ್ಟಿ ಜಲಾಶಯದಿಂದ ನಾರಾಯಣಪುರದ ಬಸವಸಾಗರ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ. ಜಲಾಶಯ ಭರ್ತಿಯಾಗುವ ಹಂತದಲ್ಲಿದೆ. ಯಾವುದೇ ಸಂದರ್ಭದಲ್ಲಿ ಬಸವಸಾಗರ ಜಲಾಶಯದಿಂದ ನೀರು ಹರಿ ಬಿಡುವ ಸಂಭವ ಇರುವುದರಿಂದ ಈ ಜಲಾಶಯದ  ನದಿ ತೀರದ ಗ್ರಾಮಗಳ ಸಾರ್ವಜನಿಕರು ಮುನ್ನೆಚ್ಚರಿಕೆ ವಹಿಸಿಕೊಳ್ಳಬೇಕು.ಅಧಿಕಾರಿಗಳು ಕೂಡ ಜನ, ಜಾನುವಾರುಗಳ ರಕ್ಷಣೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚಿಸಿದರು.ತುರ್ತು ಸಂದರ್ಭದಲ್ಲಿ ಪ್ರಕೃತಿ ವಿಕೋಪ ಪರಿಹಾರ ನಿಧಿಯ ಸದ್ಬಳಕೆ ಮಾಡಿಕೊಳ್ಳಬೇಕು. ನದಿ ತೀರದ ಪ್ರದೇಶಗಳ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನಪ್ರತಿನಿಧಿಗಳ ಸಹಕಾರ ಪಡೆದು ಅಧಿಕಾರಿಗಳು ಕಾರ್ಯನಿರ್ವಹಿಸಬೇಕು.ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಕಂದಾಯ ಇಲಾಖೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿ ಕಡ್ಡಾಯವಾಗಿ ಇದ್ದುಕೊಂಡು ತುರ್ತು ಸಂದರ್ಭ ನಿಭಾಯಿಸಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.  ತುರ್ತು ಸಂದರ್ಭ ಬಂದಲ್ಲಿ ಈ ನದಿ ಪಾತ್ರದ ವ್ಯಾಪ್ತಿಯ ಗ್ರಾಮಗಳ ಜನರ ಸ್ಥಳಾಂತರಕ್ಕೂ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕು. ಜನ ಜಾನುವಾರುಗಳ ರಕ್ಷಣೆಗೆ ತಂಡವನ್ನು ಸಿದ್ಧ ಮಾಡಿಟ್ಟುಕೊಂಡಿರಬೇಕು.ಜಿಲ್ಲೆಯ ಜಿಲ್ಲಾ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಹಾಯಕ ಆರೋಗ್ಯ ಕೇಂದ್ರಗಳು, ಪಶು ಆಸ್ಪತ್ರೆಗಳು ಕಡ್ಡಾಯವಾಗಿ ಔಷಧಿಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು, ಆಹಾರ ಧಾನ್ಯಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ತುರ್ತು ಸಂದರ್ಭದಲ್ಲಿ ಶಾಲೆಗಳಲ್ಲಿ ಗಂಜಿ ಕೇಂದ್ರ ಶಾಲೆಗಳಲ್ಲಿ ಆರಂಭಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆಯಾ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಶಾಲೆಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು.ನುರಿತ ಈಜುಗಾರರನ್ನು ಸನ್ನದ್ಧವಾಗಿ ಇಟ್ಟುಕೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳು ವಿದ್ಯುತ್ ಸಮಸ್ಯೆಗಳನ್ನು ತುರ್ತು ಸಂದರ್ಭದಲ್ಲಿ ಬಗೆಹರಿಸಬೇಕು. ಉಪವಿಭಾಗದ ಅಧಿಕಾರಿಗಳು ಜನರ ಸಂರಕ್ಷಣೆಗೆ ಸೂಕ್ತ ಯೋಜನೆ ರೂಪಿಸಿಕೊಳ್ಳಬೇಕು. ಪಂಚಾಯತ್‌ರಾಜ್ ಎಂಜಿನಿಯರಿಂಗ್ ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ಕೆರೆ ಮತ್ತು ಇತರೆ ನೀರು ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಬೇಕು.ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಎಲ್ಲ ಚರಂಡಿ ಸ್ವಚ್ಫಗೊಳಿಸಿ, ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಕೂಡ ಚರಂಡಿಗಳಲ್ಲಿ ಕಸ ಎಸೆದು ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.ಕಂಟ್ರೋಲ್ ರೂಂ ಸ್ಥಾಪನೆ: ತುರ್ತು ಸಂದರ್ಭ ನಿಭಾಯಿಸಲು ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಸಾರ್ವಜನಿಕರ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಕಂಟ್ರೋಲ್ ರೂಂ. ದೂರವಾಣಿ ಸಂಖ್ಯೆ 08473-253772 ಇಲ್ಲಿ ಕರೆ ಮಾಡಬಹುದು. ಇದು ದಿನದ 24 ಗಂಟೆ ಕಾರ್ಯನಿರ್ವಹಿಸಬೇಕು.ಸಂಬಂಧಪಟ್ಟ ಎಲ್ಲ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಜನಪ್ರತಿನಿಧಿಗಳ ಸಹಕಾರ ಪಡೆದು ಈ ಜಲಾಶಯದಿಂದ ಬಿಡುಗಡೆಯಾಗುವ ನೀರಿನಿಂದ ಪ್ರಭಾವಿತರಾಗುವ ಜನ, ಜಾನುವಾರುಗಳ ಮತ್ತು ಆಸ್ತಿಪಾಸ್ತಿಗಳ ರಕ್ಷಣೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಜಲಾಶಯದಿಂದ ಬಿಡುಗಡೆಯಾಗುವ ನೀರಿನಿಂದ ಉಂಟಾಗುವ ಸಂದರ್ಭಗಳ ಬಗ್ಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಹೆಚ್ಚುವರಿ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗ ಅಧಿಕಾರಿಗಳ ಜೊತೆ ತುರ್ತು ಸಂಪರ್ಕ ಸಾಧಿಸುವಂತೆ ಪೋಲಿಸ್ ಅಧಿಕಾರಿಗಳು ಮತ್ತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.ಜನರ ಸಂರಕ್ಷಣೆಗಾಗಿ ರಾಯಚೂರು ಮತ್ತು ಗುಲ್ಬರ್ಗ ಜಿಲ್ಲೆಯಿಂದ ಎರಡು ದೋಣಿಗಳನ್ನು ತರಿಸಲಾಗುವುದು. ಈ ಕುರಿತು ಪ್ರಾದೇಶಿಕ ಆಯುಕ್ತರೊಂದಿಗೂ ಸಹ ಸಂಪರ್ಕಿಸಲಾಗುವುದು ಎಂದು ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿಕೃಷ್ಣ ಹಾಗೂ ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.ನಾರಾಯಣಪುರ ಜಲಾಶಯ ಭರ್ತಿ

ಹುಣಸಗಿ: ಸಮೀಪದ ನಾರಾಯಣಪುರದ ಬಸವಸಾಗರ ಜಲಾಶಯ ಭರ್ತಿಯಾಗಲು ಇನ್ನೂ ಕೆಲವೆ ಟಿಎಂಸಿ ಬಾಕಿ ಇದ್ದು ಯಾವುದೇ ಸಂದರ್ಭದಲ್ಲಿ ಕೃಷ್ಣಾ ನದಿಗೆ ನೀರು ಹರಿಬಿಡಲಾಗುವದು. ನದಿ ಪಾತ್ರದ ಜನರು ತಮ್ಮ ಜಾನುವಾರುಗಳೊಂದಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಜಲಾಶಯದ ವಿಭಾಗೀಯ ಕಾರ್ಯನಿರ್ವಾಕ ಎಂಜಿನಿಯರ್ ಎಸ್.ಬಿ. ಪಾಟೀಲ ತಿಳಿಸಿದ್ದಾರೆ.

ಎಡದಂಡೆ ಮತ್ತು ಬಲದಂಡೆ ಕಾಲುವೆಗೆ ಒಟ್ಟು 2,036 ಕ್ಯೂಸೆಕ್ ನೀರು ಹರಿಬಿಡಲಾಗಿದ್ದು, ಮಂಗಳವಾರ ಸಂಜೆ ಒಳಹರಿವು 20ಸಾವಿರ ಕ್ಯೂಸೆಕ್ ದಾಖಲಾಗಿದೆ. ರಾತ್ರಿ ಇನ್ನೂ ಹೆಚ್ಚಿನ ಪ್ರಮಾಣದ ನೀರು ಹರಿದು ಬರುವ ನಿರೀಕ್ಷೆ ಇದೆ ಎಂದು ತಿಳಿಸಿದ್ದಾರೆ.ಬಸವಸಾಗರ ಜಲಾಶಯದಲ್ಲಿ ಒಟ್ಟು 33 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯವಿದ್ದು, ಮಂಗಳವಾರ ಸಂಜೆ 29 ಟಿಎಂಸಿ ನೀರು ಸಂಗ್ರಹವಾಗಿದೆ. ಒಟ್ಟು 492.25 ಮೀಟರ್ ಸಾಮರ್ಥ್ಯವಿದ್ದು, ಅದರಲ್ಲಿ 491.55 ಮೀಟರ್ ನೀರು ಸಂಗ್ರಹವಾಗಿದೆ ಎಂದು ಹೇಳಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.