ಶುಕ್ರವಾರ, ಜನವರಿ 17, 2020
20 °C

ಬಸವ ತತ್ವ ಮೇಲೆ ಮಾನವ ಹಕ್ಕು ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಜಾತಿ ಪದ್ಧತಿ, ಮೂಢನಂಬಿಕೆ ಇತರ ಅನಿಷ್ಟ ಪದ್ಧತಿಗಳ ನಿರ್ಮೂಲನೆಗೆ, ಮಾನವೀಯ ಮೌಲ್ಯಗಳ ಉಳಿವಿಗಾಗಿ ಹೋರಾಟ ನಡೆಸಿದ ಬಸವಣ್ಣನವರ ತತ್ವಗಳ ಆಧಾರದ ಮೇಲೆ ಮಾನವ ಹಕ್ಕುಗಳ ರಚನೆಯಾಗಿದೆ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಡಾ. ಎಸ್. ಆರ್. ನಾಯಕ್ ಹೇಳಿದರು.ಇಲ್ಲಿನ ಪ್ರಭು ಕಲಾ, ವಿಜ್ಞಾನ ಮತ್ತು ಜೆ.ಎಂ. ಬೋಹರಾ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಾನವ ಹಕ್ಕುಗಳ ಜಾಗೃತಿ ಬಗ್ಗೆ ಶುಕ್ರವಾರ ಏರ್ಪಡಿಸಿದ್ದ ರಾಷ್ಟ್ರಮಟ್ಟದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.ಸ್ವಾತಂತ್ರ್ಯ ದೊರೆತು ಆರು ದಶಕಗಳೆ ಸಂದರೂ ಗ್ರಾಮೀಣ ರಸ್ತೆಗಳು ಸುಧಾರಣೆ ಕಂಡಿಲ್ಲ. ಶೈಕ್ಷಣಿಕ ಮಟ್ಟ ಸುಧಾರಿಸಿಲ್ಲ. ಜನರಲ್ಲಿ ಮೂಡದ ಜಾಗೃತಿ, ರಾಜಕೀಯ ಇಚ್ಛಾಶಕ್ತಿ ಕೊರತೆ ಇದಕ್ಕೆ ಕಾರಣ ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ಎಚ್.ಕೆ.ಇ. ಸಂಸ್ಥೆ ಅಧ್ಯಕ್ಷ ಶಶೀಲ್ ನಮೋಶಿ ಮಾತನಾಡಿ, ಹೈದರಾಬಾದ್ ಕರ್ನಾಟಕ ಪ್ರದೇಶ ಹಿಂದುಳಿಯುವಿಕೆಗೆ ಈ ಭಾಗದ ಜನರ ಮುಗ್ಧತೆಯೆ ಕಾರಣ. ಸರ್ಕಾರದ ಉನ್ನತ ಅಧಿಕಾರಿಗಳಾಗಿರುವ ಮೈಸೂರು ಕರ್ನಾಟಕ ಪ್ರದೇಶದ ಜನರು ಇಲ್ಲಿನ ಜನರ ಮುಗ್ಧತೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ದೂರಿದರು.ಸಣ್ಣ ಕೈಗಾರಿಕೆ ಸಚಿವ ರಾಜೂಗೌಡ, ಎಚ್.ಕೆ.ಇ. ಸಂಸ್ಥೆ ನಿರ್ದೇಶಕ ಮಂಡಳಿ ಸದಸ್ಯ ರಾಜಶೇಖರ ಕಣಕಿ, ವಿಶ್ವನಾಥರೆಡ್ಡಿ ಇಟಗಿ ಇದ್ದರು. ಪ್ರಾಚಾರ್ಯ ಡಾ. ಬಿ.ಜಿ. ಬಾವಿ ಮಾತನಾಡಿದರು. ಪ್ರೊ. ಎಸ್. ಬಿ. ಠಾಣಾಗುಂದಿ ಸ್ವಾಗತಿಸಿದರು. ಡಾ. ಈಶ್ವರಯ್ಯ ಮಠ ನಿರೂಪಿಸಿದರು. ಪ್ರೊ.ಎಲ್.ಬಿ. ಕುಲಕರ್ಣಿ ವಂದಿಸಿದರು.

 

ಪ್ರತಿಕ್ರಿಯಿಸಿ (+)