ಭಾನುವಾರ, ಮೇ 22, 2022
21 °C

ಬಸವ ಧರ್ಮ ನಿಜವಾದ ಹಿಂದೂ ಧರ್ಮ: ದೇಜಗೌ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ‘ಜಾತಿಯತೆ ಮಾಡು ವುದನ್ನು ಇನ್ನಾದರು ಬಿಟ್ಟು ಬಸವ ಧರ್ಮವನ್ನು ಅನುಸರಿಸಬೇಕು. ‘ಬಸವ ಧರ್ಮ’ ನಿಜವಾದ ಹಿಂದೂ ಧರ್ಮ’ ಎಂದು ನಾಡೋಜ ಡಾ.ದೇ.ಜವರೇಗೌಡ ಇಲ್ಲಿ ತಿಳಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಾಮಂದಿರದ ಮನೆಯಂಗಳದಲ್ಲಿ ಸೋಮವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರ ‘ವಚನ ವೀಕ್ಷಣ’ ಹಾಗೂ ಮೂರು ಜೈನ ಪುರಾಣಗಳು ಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.‘ಬಸವಣ್ಣನಿಗೆ ಸಮನಾದ ವ್ಯಕ್ತಿ ಈ ಜಗತ್ತಿನಲ್ಲಿ ಇಲ್ಲ. ಬಸವಣ್ಣ ಕ್ರಾಂತಿಯನ್ನೇ ಮಾಡಿದರು. ಜಾತಿಯನ್ನು ಅನುಸರಿಸುವಂತೆ ಬಸವಣ್ಣ ಎಂದೂ ಹೇಳಿಲ್ಲ. ಆದರೆ ಬಸವಣ್ಣನನ್ನೇ ತಬ್ಬಲಿ ಮಾಡಲಾಗುತ್ತಿದೆ. ಬಸವ ಧರ್ಮ ಜಂಗಮ ಧರ್ಮ. ಸಂಕುಚಿತ ಮನೋಭಾವ ಇರುವವರು ವಚನ ಸಾಹಿತ್ಯ ಓದಬೇಕು. ವಚನ ಸಾಹಿತ್ಯ ಎಲ್ಲರ ಮನೆ-ಮನಗಳನ್ನು ಬೆಳಗಬೇಕು’ ಎಂದು ತಿಳಿಸಿದರು.‘2050ನೇ ಸಾಲಿಗೆ ಹಿಂದೂಗಳು ಅಲ್ಪಸಂಖ್ಯಾತರು ಆಗುತ್ತಾರೆ ಎಂದು ಹೇಳಲಾಗುತ್ತಿದೆ. ಆದರೆ ಹಿಂದೂ ಗಳು ಅಲ್ಪಸಂಖ್ಯಾತರಾಗುತ್ತಾರೆ. ಬೇರೆ ಧರ್ಮದವರು ಬಹು            ಸಂಖ್ಯಾತರಾಗುತ್ತಾರೆ ಎಂಬುದು ಮುಖ್ಯವಲ್ಲ. ಒಂದು ಧರ್ಮಕ್ಕೆ ಮಾತ್ರ ಮಹತ್ವ ಇದೆ, ಮತ್ತೊಂದಕ್ಕೆ ಮಹತ್ವ ಇಲ್ಲ ಎಂಬುದನ್ನು ಒಪ್ಪಲಾರೆ. ಎಲ್ಲ ಧರ್ಮಗಳು ಸರಿಸಮಾನ’ ಎಂದು ತಿಳಿಸಿದರು.ಸಿಪಿಕೆ ಆಲ್‌ರೌಂಡರ್: ‘ಸಿಪಿಕೆ ಅವರು ಸಾಹಿತ್ಯದ ಎಲ್ಲ ಕ್ಷೇತ್ರಗಳಲ್ಲಿ ದುಡಿದಿದ್ದು ಅವರು ಆಲ್‌ರೌಂಡರ್ ಇದ್ದಂತೆ. ಅವರು ಕವಿ, ಸಂಶೋಧಕ ಹಾಗೂ ಉತ್ತಮ ವಿಮರ್ಶಕರು. ಕನ್ನಡ ಸಾಹಿತ್ಯದಲ್ಲಿ ಅವರಂತಹ ವಿಮರ್ಶಕರು ಬೇರೊಬ್ಬರಿಲ್ಲ. ಕನ್ನಡ ವಿಮರ್ಶಾ ಕ್ಷೇತ್ರದ ‘ಗೌರಿಶಂಕರ’ ಸಿಪಿಕೆ. ಆದರೆ ಒಂದೆರಡು ಪುಸ್ತಕಗಳನ್ನು ವಿಮರ್ಶೆ ಮಾಡಿದವರನ್ನು ದೊಡ್ಡ ವಿಮರ್ಶಕರೆಂದು ಕರೆಯಲಾಗುತ್ತದೆ. ಆದರೆ ವಿಮರ್ಶಾ ಕ್ಷೇತ್ರದಲ್ಲಿ ಸಾಕಷ್ಟು ದುಡಿದ ಸಿಪಿಕೆ ಅವರನ್ನು ಜನರು ಗುರುತಿಸುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.ಸಾಹಿತಿ ಡಾ.ಸಿಪಿಕೆ ಅವರು ಮಾತನಾಡಿ, ‘ಪಂಪ, ಜನ್ನ, ನಾಗವರ್ಮ, ವಚನ ಸಾಹಿತ್ಯ ಸೇರಿದಂತೆ ವಿವಿಧ ಕ್ಷೇತ್ರಗಳ ಬಗ್ಗೆ ಸಂಕುಚಿತ ಭಾವನೆ ಇಟ್ಟುಕೊಳ್ಳದೆ, ಉದಾರ ಮನಸ್ಸಿನಿಂದ ಬರೆದಿದ್ದೇನೆ. ನನ್ನ ಪದ್ಯಗಳಲ್ಲಿ ‘ಬ್ರಾಕೆಟ್’ ಹೆಚ್ಚು ಹಾಕುತ್ತೇನೆ ಎಂಬ ಮಾತಿದೆ. ಆದರೆ ಸುಮ್ಮನೆ ನಾನು ಬ್ರಾಕೆಟ್ ಬಳುಸುವುದಿಲ್ಲ. ಅದರಲ್ಲಿ ವಿಶೇಷ ಅರ್ಥ ಇದೆ. ‘ಸಿಪಿಕೆ ಬ್ರಾಕೆಟ್ ಬರವಣಿಗೆ-ಒಂದು ಅಧ್ಯಯನ’ ಎಂಬ ವಿಷಯ ಕುರಿತು ಆಸಕ್ತರು ಸಂಶೋಧನೆ ನಡೆಸಬಹುದು’ ಎಂದು ಹಾಸ್ಯ ಚಟಾಕಿ ಹಾರಿಸಿದರು.ಸಾಹಿತಿ ಡಾ.ಮಳಲಿ ವಸಂತಕುಮಾರ್ ಅವರು ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು. ಸಾಹಿತಿ ಮಲೆಯೂರು ಗುರುಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಎನ್.ಅಣ್ಣೇಗೌಡ, ಕನ್ನಡ ಸಾಹಿತ್ಯ ಪರಿಷತ್‌ನ ವಿದ್ಯಾಸಾಗರ್ ಕದಂಬ, ಚಂದ್ರಶೇಖರ್ ಉಪಸ್ಥಿತರಿದ್ದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡೀಕೆರೆ ಗೋಪಾಲ್ ಪ್ರಾಸ್ತಾವಿಕ ಭಾಷಣ ಮಾಡಿದರು. ಮಮತಾ ರವೀಂದ್ರ ಪ್ರಾರ್ಥಿಸಿದರು. ಪ್ರೊ.ಎಸ್.ಮಲ್ಲಣ್ಣ ಅವರು ಭಾವಗೀತೆ ಹಾಡಿದರು. ಪ್ರೊ.ಕೆ.ಆರ್. ಪ್ರೇಮಲೀಲಾ ನಿರೂಪಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.