ಸೋಮವಾರ, ಜೂಲೈ 6, 2020
24 °C

ಬಸವ ರಾಜ್ಯ ಉದಯವಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸವ ರಾಜ್ಯ ಉದಯವಾಗಲಿ

ಜಮಖಂಡಿ: ‘ವಿಶ್ವಗುರು ಬಸವಣ್ಣನವರು ತಮ್ಮ ವಚನಗಳ ಮೂಲಕ ತಿಳಿಸಿಕೊಟ್ಟ ಕಾಯಕ ಮತ್ತು ದಾಸೋಹ ತತ್ವಗಳಿಗೆ ನಮ್ಮ ಹೃದಯದಲ್ಲಿ ಸ್ಥಾನ ಕೊಟ್ಟಿದ್ದೇವೆಯೇ  ಎಂದು ಪ್ರತಿಯೊಬ್ಬರು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಅಗತ್ಯವಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಹೇಳಿದರು. ನಗರದ ವಿಜಾಪುರ- ಮುಧೋಳ ಬೈಪಾಸ್ ರಸ್ತೆಯ ವಿಜಾಪುರ ನಾಕಾ ಹತ್ತಿರ ಸ್ಥಾಪಿಸಲಾಗಿರುವ ಮಹಾಮಾನವತಾವಾದಿ ಬಸವಣ್ಣನವರ ಕಂಚಿನ ಪುತ್ಥಳಿಯನ್ನು ಭಾನುವಾರ ಅನಾವರಣಗೊಳಿಸಿದ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.‘ವರ್ಗ ರಹಿತ ಸಮಾಜ ನಿರ್ಮಾಣ ಆಗಬೇಕು. ಜಾತಿ ವ್ಯವಸ್ಥೆ ಅಳಿಯಬೇಕು. ಲಿಂಗಭೇದ ಹೋಗಬೇಕು. ಸಮಾನತೆ ಮೂಡಬೇಕು. ಹೆಣ್ಣು ಮಕ್ಕಳ ಶೋಷಣೆ ನಿಲ್ಲಬೇಕು. ಹುಟ್ಟುವ ಮಕ್ಕಳನ್ನು ಬಸವಣ್ಣನವರ ಸೇನಾನಿಗಳಂತೆ ಬೆಳೆಸಬೇಕು. ಅಂದಾಗ ಮಾತ್ರ ಬಸವ ರಾಜ್ಯ ಉದಯವಾಗುತ್ತದೆ’ ಎಂದರು. ಹೊಸಪೇಟೆಯ ಕೊಟ್ಟೂರೇಶ್ವರ ಮಠದ ಸಂಗನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಉಚಿತ ಶಿಕ್ಷಣ ನೀಡುವ ಮತ್ತು ಉಚಿತ ಪ್ರಸಾದ ನಿಲಯ ತೆರೆಯುವ ಮೂಲಕ ಮಠಮಾನ್ಯಗಳು ಬಸವಣ್ಣನವರ ನಿಜವಾದ ವಾರಸುದಾರರಾಗಬೇಕು ಎಂದರು.ಇಳಕಲ್‌ನ ವಿಜಯ ಮಹಾಂತೇಶ್ವರ ಸಂಸ್ಥಾನ ಮಠದ ಡಾ.ಮಹಾಂತಪ್ಪ ಶ್ರೀಗಳು ಸಾನಿಧ್ಯ ವಹಿಸಿ ಮಾತನಾಡಿ, ತನ್ನ ತಾನು ಅರಿತರೆ ತಾನೇ ದೇವರು ಎಂಬ ಪ್ರಜ್ಞೆ ಮೂಡುವವರೆಗೆ ಬಸವಣ್ಣನವರ ಕೃಪೆ ಆಗುವುದಿಲ್ಲ ಎಂದರು. ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಮಾತನಾಡಿ, ಜಮಖಂಡಿಯನ್ನು ಜಿಲ್ಲಾ ಕೇಂದ್ರವನ್ನಾಗಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು. ಶಾಸಕ ಶ್ರೀಕಾಂತ ಕುಲಕರ್ಣಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಜಯಮೃತ್ಯುಂಜಯ ಶ್ರೀಗಳು ಸಮ್ಮುಖ ವಹಿಸಿದ್ದರು. ಜಮಖಂಡಿಯ ಓಲೆಮಠದ ಡಾ.ಚನ್ನಬಸವ ಶ್ರೀಗಳು ನೇತೃತ್ವ ವಹಿಸಿದ್ದರು. ಇಳಕಲ್ ಸಂಸ್ಥಾನ ಮಠದ ಗುರುಮಹಾಂತ ಶ್ರೀಗಳು, ಚಿಮ್ಮಡ ವಿರಕ್ತಮಠದ ಪ್ರಭು ಶ್ರೀಗಳು, ರಬಕವಿಯ ವಿರಕ್ತ ಮಠದ ಸಿದ್ಧರಾಮ ಶ್ರೀಗಳು, ಜಮಖಂಡಿಯ ಕಲ್ಯಾಣ ಮಠದ ಗೌರಿಶಂಕರ ಶ್ರೀಗಳು, ಶಿರೂರಿನ ಶ್ರೀಗಳು, ಜಮಖಂಡಿಯ ರುದ್ರಾವಧೂತ ಮಠದ ಸಹಜಾನಂದ ಶ್ರೀಗಳು, ಜಗದಾಳದ ಕಕ್ಕಯ್ಯ ಮಠದ ಮಾತೆ ನಂದಾತಾಯಿ ಸಮ್ಮುಖ ವಹಿಸಿದ್ದರು.ಸಂಸದ ಪಿ.ಸಿ.ಗದ್ದಿಗೌಡರ, ಜವಳಿ ನಿಗಮದ ಅಧ್ಯಕ್ಷ, ಶಾಸಕ ಸಿದ್ದು ಸವದಿ, ಎಂಎಲ್‌ಸಿ ಜಿ.ಎಸ್.ನ್ಯಾಮಗೌಡ, ಮಾಜಿ ಕೇಂದ್ರ ಸಚಿವ ಸಿದ್ದು ನ್ಯಾಮಗೌಡ, ಮಾಜಿ ಶಾಸಕ ಆರ್.ಎಂ.ಕಲೂತಿ, ಮಾಜಿ ಶಾಸಕ ಜಯವಂತ ಕಾಳೆ, ಮಾಜಿ ಶಾಸಕ ಬಾಬುರಡ್ಡಿ ತುಂಗಳ, ವಕೀಲ ಎನ್.ಎಸ್.ದೇವರವರ, ನಗರಸಭೆ ಅಧ್ಯಕ್ಷ ಶ್ರೀಶೈಲ ರಾಂಬಳ್ಳಿ, ತಾ.ಪಂ.ಅಧ್ಯಕ್ಷೆ ಮಹಾದೇವಿ ಹುಕ್ಕೇರಿ ವೇದಿಕೆಯಲ್ಲಿದ್ದರು.ಸರಸ್ವತಿ ಸಬರದ ವಚನ ಪ್ರಾರ್ಥನೆ ಮಾಡಿದರು. ಉಮಾ ಮನಗೊಂಡ ಹಾಗೂ ಸಂಗಡಿಗರು ಪ್ರಾರ್ಥನೆ ಗೀತೆ ಹಾಡಿದರು. ಬೈಲೂರಿನ ನಿಜಗುಣಾನಂದ ಶ್ರೀಗಳು ಸಾಮೂಹಿಕ ಪ್ರಾರ್ಥನೆ ಹೇಳಿದರು. ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಜಗದೀಶ ಗುಡಗುಂಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್.ಸಿ. ಘಟ್ನಟ್ಟಿ ನಿರೂಪಿಸಿದರು. ಪುತ್ಥಳಿ ಅನಾವರಣ ಸಮಿತಿ ಉಪಾಧ್ಯಕ್ಷ ಎಂ.ಸಿ. ಗೊಂದಿ ವಂದಿಸಿದರು. ಗೈರು ಹಾಜರಿ: ಬಸವಣ್ಣನವರ ಕಂಚಿನ ಪುತ್ಥಳಿ ಅನಾವರಣಗೊಳಿಸಲು ಆಗಮಿಸಬೇಕಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗೈರು ಹಾಜರಾದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.