ಬಸವ ವಸತಿ ಯೋಜನೆ ಅಕ್ರಮ: ಆರೋಪ

ಮಂಗಳವಾರ, ಜೂಲೈ 23, 2019
20 °C

ಬಸವ ವಸತಿ ಯೋಜನೆ ಅಕ್ರಮ: ಆರೋಪ

Published:
Updated:

ಗುಳೇದಗುಡ್ಡ: ಕರ್ನಾಟಕ ಸರ್ಕಾರದ ಬಸವ ವಸತಿ ಯೋಜನೆ ಹೆಸರಿನಲ್ಲಿ ಬಡವರಿಗೆ ಸೂರು ಕಲ್ಪಿಸುವುದಾಗಿ ನಂಬಿಸಿ 71 ಜನ ಅಮಾಯಕ ಗ್ರಾಮೀಣ ಜನರನ್ನು ವಂಚಿಸಿ ಅವ್ಯವಹಾರ, ಭ್ರಷ್ಟಾಚಾರ ಮಾಡಿರುವ ಪ್ರಕರಣವೊಂದು ಜಿಲ್ಲೆಯ ಗುಳೇದಗುಡ್ಡ ಕಂದಾಯ ವ್ಯಾಪ್ತಿಯಲ್ಲಿ ಬರುವ ಹಿರೇಬೂದಿಹಾಳ ಗ್ರಾಮದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷ ಕೃಷ್ಣಾ ಓಗೆನ್ನವರ ಹಾಗೂ ಜಮ್ಮನಕಟ್ಟಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಕಮಲವ್ವ ಬಂದಕೇರಿ ಅವರ ಊರಿದು. ಅಲ್ಲದೆ ಬಾದಾಮಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರ ತಾಯಿಯ ತವರೂರು ಕೂಡಾ ಇದೇ. ಇಷ್ಟೊಂದು ರಾಜಕೀಯ ಪ್ರಭಾವ ಹೊಂದಿರುವ ಊರಲ್ಲೇ 71 ಬಡಜನರಿಗೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಸೇರಿಕೊಂಡು ಹಾಡುಹಗಲೇ ಟೋಪಿ ಹಾಕಿದ್ದಾರೆ ಎಂದು ಗ್ರಾಮಸ್ಥರು ವಸತಿ ಸಚಿವರಿಗೆ ಬರೆದ ಪತ್ರದಲ್ಲಿ ದೂರಿದ್ದಾರೆ.ಬಸವ ವಸತಿ ಯೋಜನೆಡಿಯಲ್ಲಿ ತಮಗೆ ಮನೆ ಮಂಜೂರಾಗಿದೆ. ನಿಮ್ಮ ಸಹಭಾಗಿತ್ವದ ಹಣದಲ್ಲಿ ಮನೆಯ ಬುನಾದಿ ಹಾಕಿಕೊಳ್ಳಿ ಎಂದು ಹೇಳಿದ್ದರಿಂದ 71 ಫಲಾನುಭವಿಗಳು ನಂಬಿ ಮನೆಯ ಬುನಾದಿ, ತಲೆ ಬಾಗಿಲು, ಕಿಟಕಿ, ಮೇಲ್ಛಾವಣಿ ಮುಗಿದರೂ ಕೂಡಾ ಸಂಬಂಧಪಟ್ಟ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ, ಇದ್ದಕ್ಕಿದ್ದಂತೆ ನಿಮಗೆ ಮನೆ ಕೊಡಲು ಸಾಧ್ಯವಿಲ್ಲ ಎಂದು, ಸರ್ಕಾರ ಕೊಡುವ ರೂ 75 ಸಾವಿರ ಸಹಾಯಧನ ನೀಡುವ ಬದಲು ಯೋಜನೆಯ ಮಂಜೂರಾತಿಯನ್ನೇ ರದ್ದು ಪಡಿಸಿದ್ದಾರೆ.ಹೀಗಾಗಿ ಫಲಾನುಭವಿಗಳು ತೊಂದರೆಯಲ್ಲಿ ಸಿಲುಕಿದ್ದಾರೆ. ಬಡವರು ಮನೆಯ ಬುನಾದಿಯನ್ನು ಸಾಲ-ಸೂಲ ಮಾಡಿ ಕಟ್ಟಿಕೊಂಡಿದ್ದಾರೆ. ಈಗ ಏಕಾಏಕಿ ಮನೆ ಇಲ್ಲ. ಸಹಾಯಧನ ನೀಡುವ ಬದಲು ಯೋಜನೆಯ ಮಂಜೂರಾತಿಯನ್ನೇ ರದ್ದು ಮಾಡಿದ್ದರಿಂದ ಬಡ ಫಲಾನುಭವಿಗಳು ಸಂಕಷ್ಟಕ್ಕೆ ಸಿಲುಕಿದ್ದಲ್ಲದೇ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬುಡ್ಡಪ್ಪ  ಉಡಚಂಚಿ ದೂರಿದ್ದಾರೆ.ಸರ್ಕಾರದ ಆದೇಶ ನಂಬಿ 71 ಜನರು ಸಾಲ-ಸೂಲ ಮಾಡಿ ಮನೆ ಕಟ್ಟಿಕೊಂಡಿರುವ ಈ ಬಡವರು ಈಗ ಸಾಲ ತೀರಿಸಲಾಗದೆ ತೊಂದರೆ ಪಡುವಂತಾಗಿದೆ. ಸತತ ಎರಡು ವರ್ಷಗಳ ಬರಗಾಲದಿಂದ ಕಂಗಾಲಾಗಿದ್ದ ಈ ಬಡವರಿಗೆ ಸರ್ಕಾರದ ಮತ್ತು ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳ ಈ ಧೋರಣೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ನಾಗಪ್ಪ ಬಂದಕೇರಿ ತಮ್ಮ ಅಳಲನ್ನು ತೋಡಿಕೊಂಡರು.ಅಧಿಕಾರಿಗಳು ಶಾಮೀಲು: ಜಮ್ಮನಕಟ್ಟಿ ಗ್ರಾ.ಪಂ. ವ್ಯಾಪ್ತಿಯ ಜಮ್ಮನಕಟ್ಟಿ, ಲಕ್ಕಸಕೋಪ್ಪ, ಹಿರೇಬೂದಿಹಾಳ ಹಾಗೂ ಹುಲಸಗೇರಿ ಗ್ರಾಮ ಸೇರಿದಂತೆ 2010-11ರಲ್ಲಿ ಒಟ್ಟು-262 ಮನೆಗಳು ಮಂಜೂರಾಗಿದ್ದವು. ಈಗ ಕೇವಲ 33 ಜನರಿಗೆ ಮಾತ್ರ ಸಹಾಯಧನ ಬಿಡುಗಡೆಯಾಗಿದೆ. ಫಲಾನುಭವಿಗಳಿಗೆ ಕಾಮಗಾರಿ ಆದೇಶ ತಲುಪಿದ 90 ದಿನಗಳಲ್ಲಿ ಕಟ್ಟಡ ಕಾಮಗಾರಿ ಆರಂಭಿಸಬೇಕು ಎನ್ನುವುದು ನಿಯಮ, ನಂತರ ಬಂದ ಬಿಲ್‌ಅನ್ನು ಕಂಪ್ಯೂಟರ್ ಸ್ವೀಕರಿಸುವುದಿಲ್ಲ.ಇದೇ ಅಸ್ತ್ರ ಮುಂದಿಟ್ಟು ಅಧಿಕಾರಿಗಳು ಮಧ್ಯವರ್ತಿಗಳನ್ನು ಛೂ ಬಿಟ್ಟು ಫಲಾನುಭವಿಗಳಿಂದ ರೂ.15ರಿಂದ 25 ಸಾವಿರ ಲಂಚ ಸಂಗ್ರಹಿಸುತ್ತಾರೆ. ಇದರಲ್ಲಿ ತುಸು ಹೆಚ್ಚು ಕಡಿಮೆ ಆದರೆ ಬೇರೆ ಮಧ್ಯವರ್ತಿ ಹೆಚ್ಚಿಗೆ ಲಂಚ ಕೊಡಿಸಿದರೆ ಅವಧಿಗೆ ಮುನ್ನವೇ ಕಂಪ್ಯೂಟರ್ ಲಾಕ್ ಮಾಡಿ ಮೊದಲು ಮಂಜೂರಾದ ನಿವೇಶನ ಪಟ್ಟಿಯನ್ನು ರದ್ದು ಪಡಿಸುವ ಪರಿಪಾಟಲು ಬೆಳೆಸಿಕೊಂಡಿದ್ದಾರೆ.ಹಿರೇಬೂದಿಹಾಳದಲ್ಲಿ ಆಗಿರುವುದು ಕೂಡ ಇದೇ ಮಾದರಿಯ ವಂಚನೆ. ಇತ್ತ ದುಬಾರಿ ಬೆಲೆಗೆ ನಿವೇಶನ ಖರೀದಿಸಿದ ಸಾಲ ಮತ್ತು ಸರ್ಕಾರದ ಭರವಸೆ ನಂಬಿ ಕಟ್ಟಡಕ್ಕಾಗಿ ಮಾಡಿದ ಸಾಲದಲ್ಲೇ ಕೊಳೆಯುವ ಪರಿಸ್ಥಿತಿ ಈ ಬಡ ಫಲಾನುಭವಿಗಳಿಗೆ ನುಂಗಲಾರದ ತುತ್ತಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry