ಬಸವ ವಸತಿ ಯೋಜನೆ: ಷರತ್ತು ಸಡಿಲಿಕೆ ಭರವಸೆ

7

ಬಸವ ವಸತಿ ಯೋಜನೆ: ಷರತ್ತು ಸಡಿಲಿಕೆ ಭರವಸೆ

Published:
Updated:

ಬೆಂಗಳೂರು: ಬಸವ ವಸತಿ ಯೋಜನೆ ಫಲಾನುಭವಿಗಳು ಕಡ್ಡಾಯವಾಗಿ ನಿವೇಶನದ ಹಕ್ಕುಪತ್ರ ಹೊಂದಿರಬೇಕೆಂಬ ಷರತ್ತು ಸಡಿಲಿಸುವ ಸಂಬಂಧ ಶೀಘ್ರದಲ್ಲಿ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದೆಂದು ಸರ್ಕಾರ ಭರವಸೆ ನೀಡಿದೆ. ಗುರುವಾರ ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಸೊರಬ ಶಾಸಕ ಎಚ್.ಹಾಲಪ್ಪ ಅವರ ಪ್ರಶ್ನೆಗೆ ವಸತಿ ಸಚಿವರ ಪರ ಉತ್ತರ ನೀಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಈ ಭರವಸೆ ನೀಡಿದರು. ಮಲೆನಾಡು ಪ್ರದೇಶದಲ್ಲಿ ಹೆಚ್ಚಿನ ಕುಟುಂಬಗಳು ನಿವೇಶನ ಹಕ್ಕುಪತ್ರ ಹೊಂದಿಲ್ಲದ ಹಿನ್ನೆಲೆಯಲ್ಲಿ ಬಸವ ವಸತಿ ಯೋಜನೆಯ ಪ್ರಗತಿ ಕುಂಠಿತವಾಗಿದೆ. ಈ ಕಾರಣದಿಂದ ಮನೆಗಳ ನಿವೇಶನವನ್ನು ನೋಂದಣಿ ಮಾಡಿಸಿ, ಬ್ಯಾಂಕ್‌ನಿಂದ 10 ಸಾವಿರ ರೂಪಾಯಿ ಸಾಲ ಪಡೆಯಬೇಕೆಂಬ ಷರತ್ತನ್ನು ಸಡಿಲಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದರು.ಸರ್ಕಾರ ವಿಧಿಸಿರುವ ಷರತ್ತಿನಿಂದ ಆಗಿರುವ ಸಮಸ್ಯೆ ಕುರಿತು ಪ್ರಸ್ತಾಪಿಸಿದ ಹಾಲಪ್ಪ, `ಮಲೆನಾಡು ಭಾಗದಲ್ಲಿ ಬಹುತೇಕ ಕುಟುಂಬಗಳು ಹಲವು ತಲೆಮಾರುಗಳಿಂದ ಒಂದೇ ಜಾಗದಲ್ಲಿ ವಾಸಿಸುತ್ತಿವೆ. ಅವರ ಬಳಿ ಮನೆ ತೆರಿಗೆ ನೋಂದಣಿ ದಾಖಲೆಗಳಿವೆ. ಅವರು ನಿವೇಶನದ ಹಕ್ಕುಪತ್ರ ಪಡೆಯಲು ಅರಣ್ಯ ಇಲಾಖೆಯ ಕೆಲ ಕಾನೂನುಗಳು ಸೇರಿದಂತೆ ಹಲವು ಅಡ್ಡಿಗಳಿವೆ. ಆದರೆ, ಸರ್ಕಾರ ಬಸವ ವಸತಿ ಯೋಜನೆಯ ಫಲಾನುಭವಿಗಳು ಕಡ್ಡಾಯವಾಗಿ ಹಕ್ಕುಪತ್ರ ಹೊಂದಿದ್ದು, ಅದರ ಆಧಾರದಲ್ಲಿ ಸಾಲ ಪಡೆಯಬೇಕೆಂಬ ಷರತ್ತು ವಿಧಿಸಿದೆ. ಪ್ರತಿ ತಾಲ್ಲೂಕಿಗೆ 2,000 ಮನೆಗಳು ಮಂಜೂರಾಗಿದ್ದರೂ 200 ಮನೆ ನಿರ್ಮಿಸಲೂ ಸಾಧ್ಯವಾಗಿಲ್ಲ. ತಕ್ಷಣವೇ ಈ ಷರತ್ತನ್ನು ಸಡಿಲಿಸಬೇಕು~ ಎಂದು ಒತ್ತಾಯಿಸಿದರು. ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್, ಕಾರ್ಕಳ ಶಾಸಕ ಗೋಪಾಲ ಭಂಡಾರಿ, ಸಕಲೇಶಪುರ ಶಾಸಕ ಎಚ್.ಕೆ.ಕುಮಾರಸ್ವಾಮಿ ಮತ್ತಿತರರು ಹಾಲಪ್ಪ ಅವರ ಬೇಡಿಕೆಗೆ ದನಿಗೂಡಿಸಿದರು. ಸ್ಪೀಕರ್ ಕೆ.ಜಿ.ಬೋಪಯ್ಯ ಅವರೂ ಈ ಶಾಸಕರನ್ನು ಬೆಂಬಲಿಸಿದರು. ಸರ್ಕಾರ ಷರತ್ತು ಸಡಿಲಿಸದೇ ಇದ್ದರೆ ಯೋಜನೆಯೇ ವಿಫಲವಾಗುತ್ತದೆ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry