ಬಸ್‌ನಲ್ಲಿ ಕಲಾಯಾನ

7

ಬಸ್‌ನಲ್ಲಿ ಕಲಾಯಾನ

Published:
Updated:

 ಎಂಬತ್ತರ ದಶಕವದು. ಲಲಿತಕಲಾ ಅಕಾಡೆಮಿಯ ಮುಂಬಾಗಿಲಲ್ಲಿ ಬಸ್ಸೊಂದು ಬಂದು ನಿಂತಿತು. ರಾಜಸ್ತಾನದ ದೂರದೂರಿನಿಂದ ಉದ್ಯಾನನಗರಿಗೆ ಬಸ್ಸು ಬಂದದ್ದು ಕಲೆಯ ಪ್ರಚಾರಕ್ಕಾಗಿ. `ಜನರ ಬಳಿಗೆ ನಮ್ಮ ಕಲೆ~ ಎಂಬ ಅಭಿಯಾನವದು.ಅದರಲ್ಲಿ ಗಣ್ಯ ಕಲಾವಿದರ ಕಲಾಕೃತಿಗಳನ್ನು ಒಪ್ಪ ಓರಣವಾಗಿ ಜೋಡಿಸಲಾಗಿತ್ತು. ಅವುಗಳನ್ನು ವೀಕ್ಷಿಸಲು ಅನುವಾಗುವಂತೆ ಬಸ್ ರೂಪುತಳೆದಿತ್ತು. ಬಸ್ ಹೊರಾಂಗಣ, ಒಳಾಂಗಣ ಸರ್ವಾಲಂಕೃತ ಭೂಷಿತ ಮದುವಣಗಿತ್ತಿಯಂತೆ ಕಾಣುತ್ತಿತ್ತು. ದೇಶದ ಪ್ರಮುಖ ನಗರಗಳಲ್ಲಿ ತನ್ನ ಪ್ರಭೆಯನ್ನು ಬೀರಲು ಸಜ್ಜಾಗಿ ನಿಂತಂತಿತ್ತು.  ಇದನ್ನು ಕಂಡ ಆಗಿನ ಲಲಿತ ಕಲಾ ಅಕಾಡೆಮಿ ಅಧ್ಯಕ್ಷ ಸೋಮಶೇಖರ ಸಾಲಿ ಅವರಿಗೆ ನಮ್ಮಲ್ಲೂ ಇಂಥದ್ದೊಂದು ಪ್ರಯತ್ನ ಏಕಾಗಬಾರದು. ನಮ್ಮ ನಾಡಿನ ಕಲೆಗಳನ್ನು ನಮ್ಮ ಜನರತ್ತ ಕೊಂಡೊಯ್ಯುವ ಪ್ರಯತ್ನಕ್ಕೆ  ಮುಂದಾಗಬೇಕು ಎಂಬ ಕನಸು ಮೂಡಿತು.ಹಲವು ಬಾರಿ ಸರ್ಕಾರಕ್ಕೆ ಎಡತಾಕಿದ ನಂತರ ಕನಸಿನ ಯೋಜನೆ  ಸಾಕಾರಗೊಂಡಿತು (1985-86ರಲ್ಲಿ). ಜೀವರಾಜ ಆಳ್ವ ಸಂಸ್ಕೃತಿ ಸಚಿವರಾಗಿದ್ದ ಸಮಯದಲ್ಲಿ  `ಕರ್ನಾಟಕ ಸರ್ಕಾರ ಲಲಿತಕಲಾ ಅಕಾಡೆಮಿ ಸಂಚಾರಿ ಕಲಾ ಪ್ರದರ್ಶನ~ ಎಂಬ ಹೆಸರಿನಲ್ಲಿ ಬಸ್ಸೊಂದು ರಸ್ತೆಗಿಳಿಯಿತು.ಅಷ್ಟು ಹೊತ್ತಿಗಾಗಲೇ ಸಂಚಾರಿ ಪುಸ್ತಕ ವಾಹನಗಳು ರಸ್ತೆಗಿಳಿದು ಸಾಹಿತ್ಯ ಒಂದಷ್ಟು ಜನರ ಮನೆ ಬಾಗಿಲನ್ನು ತಟ್ಟಿತ್ತು. ಅದೇ ಮಾದರಿಯಲ್ಲಿ ಸಂಚಾರಿ ಕಲಾ ಬಸ್ ತಯಾರಾಯಿತು. ಇದನ್ನು  ನೋಡುವ ಕಣ್ಣುಗಳು ದಿನೇದಿನೇ ಹೆಚ್ಚಾಗತೊಡಗಿದವು. ಅಷ್ಟೇ ಆದರದಿಂದ ಸ್ವಾಗತವಿತ್ತವು.ಮಕ್ಕಳಿಗೆ ಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕೆಂಬ ಉದ್ದೇಶದಿಂದ ವಿವಿಧ ಶಾಲೆಗಳಿಗೆ ಭೇಟಿನೀಡುವ ಪರಿಪಾಠ ರೂಢಿಯಾಯಿತು. ಉದ್ಯಾನನಗರಿಯ ತುಂಬಾ ಕಲಾ ಸಂಚಾರ ಸುಗಮವಾಯಿತು.1995ರಲ್ಲಿ `ಕರ್ನಾಟಕ ಚಿತ್ರಯಾತ್ರೆ~ ಸಂದರ್ಭದಲ್ಲಿ ನಾಡಿನಾದ್ಯಂತ ಅಡ್ಡಾಡಿ ತನ್ನ ಛಾಪು ಮೂಡಿಸಿತು.ಆದರೆ ಆನಂತರ ಸಂಚಾರಿ ಬಸ್ ರಸ್ತೆಗಿಳಿಯಲಿಲ್ಲ. ನಿರ್ಲಕ್ಷ್ಯಕ್ಕೆ ಒಳಗಾಯಿತು.  12 ವರ್ಷಗಳ ವನವಾಸಕ್ಕೆ ಒಳಗಾದಂತೆ  ಮೂಲೆಗುಂಪಾಯಿತು. ಆದರೆ ಈಚೆಗೆ ಮತ್ತೆ ದೂಳು ಕೊಡವಿಕೊಂಡು, ಹೊಸ ಬಣ್ಣದೊಂದಿಗೆ ಮಿಂಚುತ್ತಿದೆ. ಬಸ್‌ಗೆ  ಕಾಯಕಲ್ಪ ದೊರೆತದ್ದು ಪ್ರಸ್ತುತ ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿರುವ ಚಿ. ಸು. ಕೃಷ್ಣಸೆಟ್ಟಿ ಅವರಿಂದ.`ನಾನು ಅಕಾಡೆಮಿಯ ಸದಸ್ಯನಾಗ್ದ್ದಿದಾಗ ಸಂಚಾರಿ ಕಲಾ ಬಸ್ ಕಾರ್ಯರೂಪಕ್ಕಾಗಿ ಸಾಕಷ್ಟು ಶ್ರಮಪಟ್ಟಿದ್ದೆ. ಕಾರಣಾಂತರಗಳಿಂದ ಬಸ್ ಮೂಲೆಗುಂಪಾಗಿತ್ತು. ಮತ್ತೆ ಇದಕ್ಕೆ ಮರುಜೀವ ನೀಡಬೇಕೆಂದು ಅದೇ ಬಸ್ ರಿಪೇರಿ ಮಾಡಿಸಿದ್ದೇವೆ. ಈಗಾಗಲೇ ನಗರದ ಎರಡು ಮೂರು ಶಾಲೆಗಳಿಗೆ ಸುತ್ತು ಹಾಕಿಬಂದಿದೆ~  ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಕೃಷ್ಣಸೆಟ್ಟಿ.`2014ನ್ನು ಲಲಿತಕಲಾ ಅಕಾಡೆಮಿಯ ಸುವರ್ಣ ಮಹೋತ್ಸವ ವರ್ಷವನ್ನಾಗಿ ಆಚರಿಸಲಾಗುತ್ತಿದೆ. ಆಗ ಈ ಬಸ್ಸನ್ನು ಬಳಸಿಕೊಳ್ಳಲಾಗುತ್ತದೆ. ರಾಜ್ಯದಾದ್ಯಂತ ಕಲಾಕೃತಿಗಳನ್ನು ಹೊತ್ತು ಸುವರ್ಣ ಮಹೋತ್ಸವದ ಪ್ರಚಾರಕ್ಕೆ ಮುಂದಾಗುತ್ತದೆ ನಮ್ಮ ಸಂಚಾರಿ ಬಸ್.ರಾಜ್ಯದ ಯಾವ ಶಾಲೆ, ಸಂಘ-ಸಂಸ್ಥೆಗಳಾದರೂ ಈ ಬಸ್ ಸೌಲಭ್ಯವನ್ನು ಪಡೆದುಕೊಳ್ಳಬಹುದು. ನಿರ್ದಿಷ್ಟ ಸಮಯ, ಸ್ಥಳಕ್ಕಾಗಿ ನಮ್ಮನ್ನು ಸಂಪರ್ಕಿಸಿ ನೋಂದಾವಣೆ ಮಾಡಿಕೊಂಡರೆ ಬೇಕೆಂದಾಗ ನಮ್ಮ ಬಸ್ ಹೊರಟು ನಿಲ್ಲುತ್ತದೆ. ಅಗತ್ಯ ಬಿದ್ದಲ್ಲಿ ಕಲಾಕೃತಿಗಳ ವಿಶ್ಲೇಷಣೆಗೂ ಒಂದಿಬ್ಬರನ್ನು ಕಳುಹಿಸಲಾಗುತ್ತದೆ~ ಎಂದು ಬಸ್ ಕಾರ್ಯಸೂಚಿಯನ್ನು ವಿವರಿಸಿದರು.`ಕಲಾಕೃತಿಗಳು ಜನರ ಮನ ಮುಟ್ಟಬೇಕು, ಹೆಚ್ಚು ಜನರನ್ನು ತಲುಪಬೇಕು. ಆಧುನಿಕ ಕಲೆ ಜನರನ್ನು ಆಕರ್ಷಿಸುತ್ತಿಲ್ಲ ಎಂಬ ಮಾತಿದೆ. ಅದಕ್ಕೆ ತದ್ವಿರುದ್ಧವಾಗಿ, ಕಲೆ ಎಲ್ಲವನ್ನೂ ಮೀರಿದ್ದು ಎಂಬುದನ್ನು ನಿರೂಪಿಸಲು ಈ ಕಾರ್ಯಕ್ಕೆ ಮುಂದಾಗಿದ್ದೇವೆ.ಒಟ್ಟಿನಲ್ಲಿ ಕಲಾಕೃತಿಗಳತ್ತ ಜನರನ್ನು ಸೆಳೆಯುವುದಷ್ಟೇ ನಮ್ಮ ಉದ್ದೇಶ. ಆದ್ದರಿಂದ ನಾವೇ ಜನರ ಬಳಿಗೆ ಹೋಗುವ ಪ್ರಯತ್ನದ ಒಂದು ಭಾಗವಿದು. ಬಸ್ ನಿಲ್ಲಲಿಕ್ಕೊಂದು ಜಾಗ ಕೊಟ್ಟರೆ ಸಾಕು. ಬಸ್ಸಿನಲ್ಲಿ ಪುಸ್ತಕಗಳ ಮಾರಾಟವೂ ಇರುತ್ತದೆ.ಪ್ರತಿಕ್ರಿಯೆಯನ್ನು ಗಮನಿಸಿ, ಬಸ್‌ನಲ್ಲಿಯೇ ಕಲಾಕೃತಿಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ~ ಎಂದು ಕಲಾಯಾನದ ಬಗ್ಗೆ ಮಾಹಿತಿ ನೀಡಿದರು ಕೃಷ್ಣಸೆಟ್ಟಿ.

ಸಂಚರಿಸುವ ಕಲಾಕೃತಿಗಳನ್ನು ನೀವೂ ಕಣ್ತುಂಬಿಕೊಳ್ಳಬೇಕಾದರೆ 2248 0297 ಸಂಪರ್ಕಿಸಬಹುದು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry