ಸೋಮವಾರ, ಜನವರಿ 20, 2020
21 °C
ಕಾಮಗಾರಿಗಳ ಖುದ್ದು ವೀಕ್ಷಿಸಿದ ಮಾಜಿ ಮುಖ್ಯಮಂತ್ರಿ

ಬಸ್‌ನಲ್ಲೇ ಯಡಿಯೂರಪ್ಪ ನಗರ ಪ್ರದಕ್ಷಿಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಮಂಗಳವಾರ ನಗರ ಮತ್ತು ನಗರದ ಹೊರವಲಯದಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ಬಸ್‌ನಲ್ಲಿ ಸುತ್ತಾಡಿ, ವೀಕ್ಷಿಸಿದರು.ಬೆಳಿಗ್ಗೆ 9.30ರ ಸುಮಾರಿಗೆ ಅವರು ವಿನೋಬನಗರದ ಮನೆಯಿಂದ ಮಾಧ್ಯಮಗಳ ಜತೆಗೂಡಿ ಬಸ್‌ ಏರಿದ ಯಡಿಯೂರಪ್ಪ, ಸೀದಾ ತೆರಳಿದ್ದು ಪಶು ವೈದ್ಯಕೀಯ ಕಾಲೇಜಿಗೆ. ಅಲ್ಲಿಯ ಪ್ರಭಾರ ಡೀನ್‌ ವೀರೇಶ್‌ ಮತ್ತು ಸಿಬ್ಬಂದಿ, ಪ್ರೀತಿಯಿಂದ ಯಡಿಯೂರಪ್ಪ ಅವರನ್ನು ಬರಮಾಡಿಕೊಂಡರು. ಕಾಲೇಜಿನ ಪ್ರತಿ ಕೊಠಡಿಯನ್ನೂ ತೋರಿಸಿ, ಅವರೊಂದಿಗೆ ಕಾಲೇಜಿನ ಸಮಸ್ಯೆಗಳನ್ನು ಬಿಚ್ಚಿಟ್ಟರು.ಡೀನ್‌ ಅವರ ಬಳಿ ಪ್ರತಿಯೊಂದು ಮಾಹಿತಿ ಕೇಳಿ, ಬರೆದುಕೊಂಡ ಯಡಿಯೂರಪ್ಪ, ಮುಂದೇನು ಮಾಡಬೇಕು ಎಂಬುದನ್ನೂ ಅವರನ್ನೇ ಕೇಳಿ ತಿಳಿದುಕೊಂಡರು. ಇನ್ನೇನು ತಿರುಗಿ ಬಸ್‌ ಹತ್ತಬೇಕು, ಅಷ್ಟು ಹೊತ್ತಿಗೆ ಕೆಲವರು ಎಲ್ಲಿಂದಲೋ ಅಂಗವಿಕಲರೊಬ್ಬರನ್ನು ಎತ್ತಿಕೊಂಡು ಬಂದರು. ಯಡಿಯೂರಪ್ಪ ಅವರ ಕೈ ಕುಲುಕಿದರು. ಅಷ್ಟಕೇ ಸಮಾಧಾನಗೊಂಡ ಅಂಗವಿಕಲರು ಖುಷಿಯಿಂದ ಎಲ್ಲರಿಗೂ ಕೈ ಬೀಸಿ, ತೆರಳಿದರು.ತದನಂತರ ಅಲ್ಲಿಂದ ಹೊರಟ ಯಡಿಯೂರಪ್ಪರ ಬಸ್‌ ಸವಾರಿ ಹೋಗಿದ್ದು ಉದ್ದೇಶಿತ ಸೋಗಾನೆಯ ವಿಮಾನ ನಿಲ್ದಾಣದತ್ತ. ಈ ಮಧ್ಯೆ ದಾರಿಯಲ್ಲಿ ಕಂಡ, ತಾವೇ ಪುನರ್‌ ನಿರ್ಮಿಸಿದ ಗಾಂಧಿ ಉದ್ಯಾನ, ಕುವೆಂಪು ರಂಗಮಂದಿರದ ಎದುರಿನ ಕುವೆಂಪು ಪ್ರತಿಮೆಯನ್ನು ಕುಳಿತಿದ್ದ ಬಸ್‌ ಕಿಟಕಿ ಯಿಂದಲೇ ಇಣುಕಿ ಯಡಿಯೂರಪ್ಪ ಕಣ್ತುಂಬಿಕೊಂಡರು.ಮುಂದೆ ಸೈರನ್‌ ಬಾರಿಸುತ್ತಾ ಹೊರಟ ಪೊಲೀಸ್‌ ಜೀಪು, ಹಿಂದೆ ಬಸ್‌ ಕಂಡ ನಗರದ ನಾಗರಿಕರು ಕ್ಷಣ ಕಾಲ ನಿಂತು, ಬಸ್‌ ಬಾಗಿಲಲ್ಲಿ ನಿಂತಿದ್ದ ಯಡಿಯೂರಪ್ಪ, ಹಿಂಬಾಲಕರನ್ನು ನೋಡಿ ಮುಂದೆ ಸಾಗುತ್ತಿದ್ದ ದೃಶ್ಯ ಕಂಡು ಬಂತು.ಬಸ್‌ ಸಹ್ಯಾದ್ರಿ ಕಾಲೇಜು ದಾಟಿ ಕುವೆಂಪು ವಿಶ್ವವಿದ್ಯಾಲಯದ ಕಡೆ ಹೊರಡುತ್ತಿದ್ದಂತೆ ಯಡಿಯೂರಪ್ಪ ರಸ್ತೆಯ ಅಕ್ಕ–ಪಕ್ಕದ ಹಸಿರು ತೋಟಗಳನ್ನು ನೋಡಿ ಮನಸ್ಸು ತಣ್ಣಗೆ ಮಾಡಿಕೊಂಡರು. ಬಸ್‌ ಮುಖ್ಯರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಹೋಗುವಾಗ ಅವರನ್ನು ಸ್ವಾಗತಿಸಿದ್ದು ಕಚ್ಚಾರಸ್ತೆಯ ಗುಂಡಿಗಳು. ಅದರಲ್ಲೂ ಸಾಹಸ ಮಾಡಿ ವಿಮಾನ ನಿಲ್ದಾಣದ ಜಾಗಕ್ಕೆ ತಲುಪಬೇಕಾಯಿತು.ಬಸ್‌ನಿಂದ ಇಳಿದು ಕ್ಷಣಕಾಲ ಅವಕ್ಕಾದ ಯಡಿಯೂರಪ್ಪ, ‘ಇಲ್ಲಿದ್ದ ರನ್‌ವೇ ಎಲ್ಲಿ ಹೋಯಿತು?’ ಎಂದು ಅಕ್ಕ–ಪಕ್ಕದವರನ್ನು ಕೇಳಿದರು. ಅವರೂ ಅಲ್ಲಿ–ಇಲ್ಲಿ ಎನ್ನುತ್ತಾ ತಡಕಾಡಿದರು. ಹಾಗೆಯೇ, ಮುಂದೆ ಸಾಗಿದಾಗ, ಮಣ್ಣು ಸಮತಟ್ಟು ಮಾಡಿದ ಸ್ವಲ್ಪ ಜಾಗ ಕಂಡಿತು. ಇದಕ್ಕೆ ಎಷ್ಟು ಖರ್ಚು ಆಗಿದೆ? ಮುಂದಿನ ಕ್ರಮ ಏನು? ಉತ್ತರಿಸುವುದಕ್ಕೆ ಅಲ್ಲಿ ಯಾವ ಅಧಿಕಾರಿಯೂ ಇರಲಿಲ್ಲ. ವಿಮಾನ ಪ್ರಾಧಿಕಾರದ ಅಧಿಕಾರಿ ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದಾರೆಂದು ಯಡಿಯೂರಪ್ಪ ಆಪ್ತಸಹಾಯಕ ಚಂದ್ರಶೇಖರ್‌ ತಿಳಿಸಿದರು.ಈ ಮಧ್ಯೆ ವಿಮಾನ ನಿಲ್ದಾಣಕ್ಕೆ ಜಾಗ ಬಿಟ್ಟುಕೊಟ್ಟ ರೈತರೊಬ್ಬರು ಬಂದು, ‘ನಮಗೆ ಹಣ ಬಂದಿದೆ. ಆದರೆ, ನೀವೇ ವಾಗ್ದಾನ ಮಾಡಿದಂತೆ ನಿವೇಶನ, ಉದ್ಯೋಗ ಎರಡೂ ಸಿಗಲಿಲ್ಲ’ ಎಂದು ಹೇಳಿ ಯಡಿಯೂರಪ್ಪ ಅವರ ಮುಂದೆ  ನಿಂತರು. ‘ಈ ಕಾಮಗಾರಿ ಮುಗಿಯಲಿ’ ಎಂದಷ್ಟೇ ಹೇಳಿ ಅವರು ಬರಿ–ಬರಿನೆ ಬಸ್‌ ಏರಲು ಮುಂದಾದರು.ಅಲ್ಲಿಂದ ಹೊರಟ ಬಸ್‌, ತೆರಳಿದ್ದು ಸೋಗಾನೆಯ ಸಮೀಪದ ನೂತನ ಜೈಲು ಕಟ್ಟಡದ ನಿರ್ಮಾಣದ ಜಾಗಕ್ಕೆ. ಅಲ್ಲಿಯ ಮಹಿಳೆಯ ಸೆಲ್‌ ಒಳಹೊಕ್ಕು ನೋಡಿದ ಅವರು, ಪುರುಷರ ವಿಭಾಗವನ್ನು ದೂರದಿಂದಲೇ ವೀಕ್ಷಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.ತದನಂತರ ಬಸ್ ಹೊರಟಿದ್ದು ಮಾಚೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಶಾಹಿ ಎಕ್ಸ್‌ಪೋರ್ಟ್ ಗಾರ್ಮೆಂಟ್ಸ್‌ಗೆ. ಅಲ್ಲಿನ ಆಡಳಿತ ಕಚೇರಿಯ ಬಾಗಿಲಲ್ಲಿ ಯಡಿಯೂರಪ್ಪ ಅವರಿಗೆ ಸ್ವಾಗತ ಕೋರುವ ಬ್ಯಾನರ್‌ ನೇತಾಡುತ್ತಿತ್ತು. ಅಲ್ಲಿನ ಕೆಲಸಗಾರರ ಬಗ್ಗೆ ಮಾಹಿತಿ ಪಡೆದ ಯಡಿಯೂರಪ್ಪ, ನಂತರ ಬಸ್‌ ಏರಿ ಸಾಗಿದ್ದು ವಿನೋಬನಗರದ ಮನೆಗೆ. ಇಷ್ಟೆಲ್ಲ ಮುಗಿಯುವ ಹೊತ್ತಿಗೆ ಸಮಯ ಮಧ್ಯಾಹ್ನ 1.20 ದಾಟಿತ್ತು.ಯಡಿಯೂರಪ್ಪ ಜತೆ ಬಸ್‌ ಪ್ರವಾಸದಲ್ಲಿ ಜತೆಗೂಡಿದ್ದು ಉದ್ಯಮಿ, ಕೆಜೆಪಿ ಮುಖಂಡರಾದ ಎಸ್.ರುದ್ರೇಗೌಡ, ಎಸ್‌.ಎಸ್‌.ಜ್ಯೋತಿಪ್ರಕಾಶ್, ಬಿಳಕಿ ಕೃಷ್ಣಮೂರ್ತಿ, ಬಳ್ಳೇಕೆರೆ ಸಂತೋಷ್, ರಾಜೇಶ್‌ ಕಾಮತ್‌ ಮತ್ತಿತರರು.

ಪ್ರತಿಕ್ರಿಯಿಸಿ (+)