ಮಂಗಳವಾರ, ಮಾರ್ಚ್ 2, 2021
23 °C
ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸ್ಪಷ್ಟನೆ

ಬಸ್‌ ಪ್ರಯಾಣ ದರ ಇಳಿಕೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಸ್‌ ಪ್ರಯಾಣ ದರ ಇಳಿಕೆ ಇಲ್ಲ

ಬೆಂಗಳೂರು: ‘ಕಳೆದ ಸಲ ಬಸ್‌ ಪ್ರಯಾಣ ದರ ಏರಿಕೆ ಮಾಡಿದ ಬಳಿಕ ಡೀಸೆಲ್ ದರ ಗಣನೀಯವಾಗಿ ಕಡಿಮೆ ಆಗಿರುವುದು ನಿಜ. ಆದರೆ, ಬಸ್‌ ಪ್ರಯಾಣ ದರವನ್ನು ಇಳಿಸುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ’ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು.ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಾರಿಗೆ ನಿಗಮಗಳಿಂದ  ಬಸ್‌ ಪ್ರಯಾಣ ದರವನ್ನು ಪರಿಷ್ಕರಿಸುವ ಯಾವುದೇ ಪ್ರಸ್ತಾವ ಬಂದಿಲ್ಲ.  ಕಳೆದ ಬಾರಿ ಪ್ರಯಾಣ ದರ  ಹೆಚ್ಚಿಸಿದ ಬಳಿಕ ಸಾರಿಗೆ ಸಿಬ್ಬಂದಿಯ ವೇತನವನ್ನು ಶೇ 11ರಷ್ಟು ಹೆಚ್ಚಳ ಮಾಡಲಾಗಿದೆ. ಹಾಗಾಗಿ ಡೀಸೆಲ್‌ ಖರೀದಿಯಲ್ಲಿ ಉಳಿತಾಯವಾದರೂ ಆರ್ಥಿಕ ಹೊರೆ ಕಡಿಮೆ ಆಗಿಲ್ಲ. ಆದರೆ, ನಷ್ಟದ ಪ್ರಮಾಣ ಸ್ವಲ್ಪ ಮಟ್ಟಿಗೆ ತಗ್ಗಿದೆ’ ಎಂದು ವಿವರಿಸಿದರು.ಶೇ 42 ರಷ್ಟು ಬಸ್‌ಗಳು ನಷ್ಟದಲ್ಲಿ: ಶೇ 42 ರಷ್ಟು ಬಸ್‌ಗಳು   ನಷ್ಟದಲ್ಲಿ ಸಂಚರಿಸುತ್ತಿವೆ. ಶೇ 40 ರಷ್ಟು ಬಸ್‌ಗಳಿಂದ ಲಾಭವೂ ಇಲ್ಲ ನಷ್ಟವೂ ಇಲ್ಲ. ದೂರದ ಊರುಗಳಿಗೆ ಸಂಚರಿಸುವ ಶೇ 18ರಷ್ಟು ಬಸ್‌ಗಳಿಂದ ಮಾತ್ರ ಲಾಭ ಬರುತ್ತಿದೆ ಎಂದು ಅವರು ತಿಳಿಸಿದರು.2,871 ಬಸ್‌ ಖರೀದಿ:  2015–16ನೇ ಸಾಲಿನಲ್ಲಿ ಒಟ್ಟು 2,871 ಬಸ್‌ ಖರೀದಿಸಲಾಗುವುದು.  ಹೆಚ್ಚು ಕಡಿಮೆ ಇಷ್ಟೇ ಪ್ರಮಾಣದ ಹಳೆ ಬಸ್‌ಗಳನ್ನು ಈ ವರ್ಷ ಸೇವೆಯಿಂದ ಹಿಂಪಡೆಯಲಾಗುತ್ತದೆ ಎಂದರು.‘ಬಸ್‌ ಖರೀದಿಯ ಟೆಂಡರ್‌ ಪ್ರಕ್ರಿಯೆ  ಮುಗಿದಿದೆ. ವಾಯವ್ಯ ರಸ್ತೆ ಸಾರಿಗೆ ನಿಗಮವು ಈಗಾಗಲೇ 215 ಬಸ್‌ಗಳನ್ನು ಖರೀದಿಸಿದೆ.

ಕೆಎಸ್‌ಆರ್‌ಟಿಸಿಗೆ ನರ್ಮ್‌ ಯೋಜನೆ ಅಡಿ ಮಂಜೂರಾದ 800 ಬಸ್‌ಗಳು ಈ ವರ್ಷವೇ ಸೇರ್ಪಡೆ ಆಗಲಿವೆ. ನಿಗದಿಗಿಂತ ಹೆಚ್ಚು ತೂಕ ಇದ್ದುದರಿಂದ ಈ ಬಸ್‌ಗಳ ಮೈಲೇಜ್‌ ಕಡಿಮೆ ಇರುವ ಬಗ್ಗೆ ದೂರು ಬಂದಿತ್ತು. ಈ ಲೋಪವನ್ನು ಸರಿಪಡಿಸಲಾಗಿದೆ’ ಎಂದರು.‘ಬಿಎಂಟಿಸಿಗೆ ಇನ್ನೂ ಒಂದು ವರ್ಷ ವೋಲ್ವೊ ಬಸ್‌ಗಳನ್ನು ಖರೀದಿಸಬೇಕಾಗಿಲ್ಲ. ಅಗತ್ಯವನ್ನು ಪೂರೈಸಲು ಸಾಕಾಗುವಷ್ಟು ಬಸ್‌ಗಳು ಬಿಎಂಟಿಸಿ ಬಳಿ ಇವೆ’ ಎಂದರು.

ವಿದ್ಯಾರ್ಥಿಗಳಿಗೆ ನೀಡುವ ರಿಯಾಯಿತಿಯನ್ನು ಕಡಿತಗೊಳಿಸುವ ಪ್ರಸ್ತಾವ ಇಲ್ಲ ಎಂದು  ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

‘8.5 ಲಕ್ಷ ಕಿ.ಮೀ ದೂರ ಸಂಚರಿಸಿದ ಬಳಿಕ ಬಸ್‌ ಅನ್ನು ಸೇವೆಯಿಂದ ಹಿಂದಕ್ಕೆ ಪಡೆಯುತ್ತೇವೆ. ನಮ್ಮ ರಾಜ್ಯದಲ್ಲಿ ಬಸ್‌  ಸರಾಸರಿ 5.2 ಲಕ್ಷ ಕಿ.ಮೀ ದೂರ ಸಂಚರಿಸುತ್ತದೆ. ಬಸ್‌ನಲ್ಲಿ ತಾಂತ್ರಿಕ ಲೋಪಗಳಿದ್ದರೆ ಅದಕ್ಕಿಂತಲೂ ಮುನ್ನವೇ ಅದನ್ನು ಸೇವೆಯಿಂದ ಹಿಂದಕ್ಕೆ ಪಡೆಯುತ್ತೇವೆ. ಕೆಲವು ರಾಜ್ಯಗಳಲ್ಲಿ 12 ಲಕ್ಷ ಕಿ.ಮೀ  ಕ್ರಮಿಸಿದ ಬಸ್‌ಗಳನ್ನು ಕೂಡಾ ಸೇವೆಯಿಂದ ಹಿಂಪಡೆಯುವುದಿಲ್ಲ’ ಎಂದರು.ನವದೆಹಲಿ ಮಾದರಿ ಜಾರಿ– ಚಿಂತನೆ

‘ನವದೆಹಲಿಯಲ್ಲಿ ಸಮ–ಬೆಸ ನೋಂದಣಿ ಸಂಖ್ಯೆಯ ವಾಹನಗಳನ್ನು ದಿನ ಬಿಟ್ಟು ದಿನ ರಸ್ತೆಗಿಳಿಸುವ ಪ್ರಯೋಗವನ್ನು ನಾವೂ  ಗಮನಿಸುತ್ತಿದ್ದೇವೆ. ಇದರಿಂದ ಆಗುವ ಪ್ರಯೋಜನ ಹಾಗೂ ಇದರ ನ್ಯೂನತೆಗಳನ್ನು  ನೋಡಿಕೊಂಡು ರಾಜ್ಯದಲ್ಲೂ ಈ ಯೋಜನೆಯನ್ನು ಜಾರಿಗೆ ತರುವ ಚಿಂತನೆ ಇದೆ. ಈ ಬಗ್ಗೆ ಗೃಹ ಇಲಾಖೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ’ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.