ಬಸ್ ಟಿಕೆಟ್ ದರ ಏರಿಕೆ

7

ಬಸ್ ಟಿಕೆಟ್ ದರ ಏರಿಕೆ

Published:
Updated:

ಬೆಂಗಳೂರು: ಡೀಸೆಲ್ ಬೆಲೆ ಏರಿಕೆ ಮತ್ತು ಅಡುಗೆ ಅನಿಲ ಸಿಲಿಂಡರ್ ಬಳಕೆಯ ಮೇಲೆ ಮಿತಿ ವಿಧಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದ ಕಂಗಾಲಾಗಿರುವ ಜನರಿಗೆ ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ ಟಿಕೆಟ್ ದರ ಏರಿಸುವ ಮೂಲಕ ಆಘಾತ ನೀಡಿದೆ.

 

ಭಾನುವಾರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ನಗರದಲ್ಲಿ ಬಸ್ ಟಿಕೆಟ್ ದರದಲ್ಲಿ ಶೇಕಡ 14.44ರಷ್ಟು ಹೆಚ್ಚಳ ಮಾಡಲಾಗಿದೆ.ಟಿಕೆಟ್ ದರ ಹೆಚ್ಚಳಕ್ಕೆ ಸ್ಪಷ್ಟನೆ ನೀಡಿರುವ ಬಿಎಂಟಿಸಿ, ಡೀಸೆಲ್ ದರದಲ್ಲಿ ಆದ ಹೆಚ್ಚಳ ಮತ್ತು ನಿಗಮದ ನೌಕರರ ತುಟ್ಟಿಭತ್ಯೆಯಲ್ಲಿ ಆದ ಹೆಚ್ಚಳವೇ ದರ ಏರಿಕೆಗೆ ಮುಖ್ಯ ಕಾರಣ ಎಂದು ತಿಳಿಸಿದೆ. ಈ ಪರಿಷ್ಕರಣೆಯಲ್ಲಿ ವಿದ್ಯಾರ್ಥಿ ಪಾಸುಗಳ ದರಗಳಲ್ಲಿ ಹೆಚ್ಚಳ ಮಾಡಿಲ್ಲ. ಲಗ್ಗೇಜು ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಆದರೆ, ಬಸ್ ಪಾಸ್‌ಗಳ ದರದಲ್ಲಿ ಹೆಚ್ಚಳ ಮಾಡಲಾಗಿದೆ.ಸಾಮಾನ್ಯ ಬಸ್‌ಗಳು, ಕರೋನಾ ಹವಾನಿಯಂತ್ರಿತ ಬಸ್‌ಗಳು, ವೋಲ್ವೊ ಹವಾನಿಯಂತ್ರಿತ ಬಸ್‌ಗಳು ಹಾಗೂ ಮಾರ್ಕೊಪೋಲೋ ಬಸ್‌ಗಳು ಸೇರಿದಂತೆ ನಗರದಲ್ಲಿ 6,000ಕ್ಕೂ ಅಧಿಕ ಬಸ್‌ಗಳು ಓಡಾಡುತ್ತಿವೆ. ಈಚಿನ ದಿನಗಳಲ್ಲಿ ಸಂಸ್ಥೆಯ ನಿರ್ವಹಣಾ ವೆಚ್ಚದಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು, ಇದರಿಂದ ಸಂಸ್ಥೆಯ ಆರ್ಥಿಕ ಸ್ಥಿತಿಯ ಮೇಲೆ ಪರಿಣಾಮ ಉಂಟಾಗಿದೆ. ಹೀಗಾಗಿ ಟಿಕೆಟ್ ದರ ಏರಿಕೆ ಅನಿವಾರ್ಯ ಎಂದು ಬಿಎಂಟಿಸಿ ಸ್ಪಷ್ಟಪಡಿಸಿದೆ.ಹೆಚ್ಚಳಕ್ಕೆ ಕಾರಣಗಳು

ಇತ್ತೀಚೆಗೆ ಡೀಸೆಲ್ ದರ ಪ್ರತಿ ಲೀಟರಿಗೆ 6.13 ರೂಪಾಯಿಯಷ್ಟು ಹೆಚ್ಚಳ ಉಂಟಾಗಿದೆ. ಸಂಸ್ಥೆಯು ವಾರ್ಷಿಕ 1,299 ಲಕ್ಷ ಲೀಟರ್ ಡೀಸೆಲ್ ಬಳಸುತ್ತಿದೆ. ಇದರಿಂದಾಗಿ ಸಂಸ್ಥೆಯ ಮೇಲೆ 79.69 ಕೋಟಿ ರೂಪಾಯಿ ಅಧಿಕ ಹೊರೆಯುಂಟಾಗಲಿದೆ.ಕಳೆದ ವರ್ಷ ಸಂಸ್ಥೆಯ ಸಿಬ್ಬಂದಿಗೆ ಅಂದಾಜು ಶೇ.7, ಶೇ.7.25 ಮತ್ತು ಶೇ.4.25ರಷ್ಟು ತುಟ್ಟಿಭತ್ಯೆ ಬಿಡುಗಡೆ ಾಡಲಾಗಿದೆ. ಇದರಿಂದಾಗಿ ಸಂಸ್ಥೆಗೆ ವಾರ್ಷಿಕ 49.49 ಕೋಟಿ ರೂಪಾಯಿ ಅಧಿಕ ಹೊರೆಯುಂಟಾಗಲಿದೆ.ವೇತನ ಪರಿಷ್ಕರಣೆಗಾಗಿ ಇತ್ತೀಚೆಗೆ ಸಿಬ್ಬಂದಿ ಮುಷ್ಕರ ನಡೆಸಿದ್ದರು. ಮಾತುಕತೆಯ ಸಂದರ್ಭದಲ್ಲಿ ಸಿಬ್ಬಂದಿಯ ಮೂಲವೇತನ ಹೆಚ್ಚಳ, ತುಟ್ಟಿಭತ್ಯೆ ಹಾಗೂ ಮನೆಬಾಡಿಗೆ ಭತ್ಯೆಯಲ್ಲಿಯೂ ಹೆಚ್ಚಳ ಮಾಡಲು ನಿರ್ಧರಿಸಲಾಗಿತ್ತು. ಇದರಿಂದ ವಾರ್ಷಿಕ 96 ಕೋಟಿ ರೂಪಾಯಿ ಅಧಿಕ ಹೊರೆ ಉಂಟಾಗಲಿದೆ.ತರಬೇತಿ ಸಿಬ್ಬಂದಿಯ ಒಟ್ಟಾರೆ ವೇತನವು ಒಂದು ಸಾವಿರ ರೂಪಾಯಿಯಂತೆ ಎರಡು ಬಾರಿ ಹೆಚ್ಚಳ ಮಾಡಲಾಗಿದೆ. ಇದರಿಂದಾಗಿ ವಾರ್ಷಿಕ 13.20 ಕೋಟಿ ರೂಪಾಯಿ ಅಧಿಕ ಹೊರೆಯುಂಟಾಗಲಿದೆ.

ಇತ್ತೀಚೆಗೆ ವಿದ್ಯಾರ್ಥಿಗಳ ಪ್ರತಿ ಪಾಸಿಗೆ 200 ರೂಪಾಯಿಯಂತೆ ದರ ಕಡಿಮೆಗೊಳಿಸಿದ್ದು, ಇದರಿಂದ ಸಂಸ್ಥೆಯ ಆದಾಯದಲ್ಲಿ 5.64 ಕೋಟಿ ರೂಪಾಯಿ ನಷ್ಟ ಉಂಟಾಗಿದೆ.ಈ ಎಲ್ಲ ಕಾರಣಗಳಿಂದಾಗಿ ಸಂಸ್ಥೆಗೆ ವಾರ್ಷಿಕ 244.02 ಕೋಟಿ ರೂಪಾಯಿ ಅಧಿಕ ನಿರ್ವಹಣಾ ವೆಚ್ಚ ಉಂಟಾಗಿದೆ. ದರ ಪರಿಷ್ಕರಣೆಯಿಂದ ಸಂಸ್ಥೆ ವಾರ್ಷಿಕ 185.88 ಕೋಟಿ ರೂಪಾಯಿ ಆದಾಯ ಗಳಿಸಬಹುದು. ಬಳಿಕ ಉಳಿಯುವ ಹೆಚ್ಚುವರಿ ಆರ್ಥಿಕ ಹೊರೆ 58.14 ಕೋಟಿ ರೂಪಾಯಿ ವೆಚ್ಚವನ್ನು ಆಂತರಿಕ ದಕ್ಷತೆಯನ್ನು ಉತ್ತಮಪಡಿಸಿಕೊಂಡು ಸರಿದೂಗಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry