ಬಸ್ ಡಿಕ್ಕಿ: ಮಹಿಳೆ ಸಾವು

7

ಬಸ್ ಡಿಕ್ಕಿ: ಮಹಿಳೆ ಸಾವು

Published:
Updated:

ಬೆಂಗಳೂರು: ಬೈಕ್‌ನಲ್ಲಿ ಹೋಗುತ್ತಿದ್ದ ದಂಪತಿಗೆ ಬಿಎಂಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸಾವನ್ನಪ್ಪಿರುವ ಘಟನೆ ಮೆಜೆಸ್ಟಿಕ್ ಸಮೀಪದ  ಲೋಕಮಾನ್ಯ ತಿಲಕ್ ಪಾರ್ಕ್ ರಸ್ತೆಯಲ್ಲಿ ಗುರುವಾರ ನಡೆದಿದೆ.ಚಿಕ್ಕಪೇಟೆ ನಿವಾಸಿ ಜಗದೀಶ್ ಎಂಬುವರ ಪತ್ನಿ ವಿಜಯಕುಮಾರಿ (27) ಮೃತಪಟ್ಟವರು. ಮಲ್ಲೇಶ್ವರದ ಹೋಟೆಲ್ ಒಂದರಲ್ಲಿ ಸ್ವಾಗತಕಾರರಾಗಿದ್ದ ಅವರು ಪತಿಯ ಜತೆ ಬೆಳಿಗ್ಗೆ ಕೆಲಸಕ್ಕೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಬಸ್ ಚಾಲಕ ನಿಯಂತ್ರಣ ತಪ್ಪಿ ಜಗದೀಶ್ ಅವರ ಬೈಕ್‌ಗೆ ಹಿಂದಿನಿಂದ ವಾಹನ ಗುದ್ದಿಸಿದ. ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡ ವಿಜಯಕುಮಾರಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟರು.

ಘಟನೆಯಲ್ಲಿ ಜಗದೀಶ್ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಪ್ಪಾರಪೇಟೆ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.ಬಂಧನ

ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಹಣ ದೋಚುತ್ತಿದ್ದ ಆರೋಪಿಗಳನ್ನು ಬಂಧಿಸಿರುವ ಸುಬ್ರಹ್ಮಣ್ಯಪುರ ಪೊಲೀಸರು ಮೂರು ಲಕ್ಷ ನಗದು ಹಾಗೂ ನಾಲ್ಕು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.ಆಂಧ್ರಪ್ರದೇಶ ಮೂಲದ ರಾಜೇಶ್ (27), ಸುಬ್ರಮಣಿ (20), ವೆಂಕಟೇಶ (20), ಉತ್ತಮ್ (40), ನರೇಶ (24) ಮತ್ತು ಶರವಣ (24) ಬಂಧಿತರು. ಆರೋಪಿಗಳು ದೊಡ್ಡಕಲ್ಲಸಂದ್ರದಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಶಾಖೆಗೆ ಜ.10ರಂದು ಹಣ ಕಟ್ಟಲು ಬಂದಿದ್ದ ರಾಜಗೋಪಾಲನ್ ಎಂಬುವರ ಗಮನ ಬೇರೆಡೆ ಸೆಳೆದು 2.50 ಲಕ್ಷ ರೂಪಾಯಿ ದೋಚಿದ್ದರು. ಅವರು ಇದೇ ರೀತಿ ಮುಂಬೈ, ತಮಿಳುನಾಡು, ಆಂಧ್ರಪ್ರದೇಶದಲ್ಲೂ ಹಣ ದೋಚಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ತಮಿಳುನಾಡಿನ ಹೊಸೂರಿನಲ್ಲಿ ವಾಸವಾಗಿದ್ದ ಆರೋಪಿಗಳು ಆಗಾಗ್ಗೆ ನಗರಕ್ಕೆ ಬಂದು ಅಪರಾಧ ಕೃತ್ಯಗಳನ್ನು ಎಸಗಿ ವಾಪಸ್ ಹೋಗುತ್ತಿದ್ದರು.ಸುಬ್ರಹ್ಮಣ್ಯಪುರ, ಜಯನಗರ, ಬಸವನಗುಡಿ, ಬನಶಂಕರಿ, ಜೆ.ಪಿ.ನಗರ, ತಿಲಕ್‌ನಗರ ಠಾಣೆಗಳ ವ್ಯಾಪ್ತಿಯಲ್ಲಿ ಹಣ ದೋಚಿದ್ದರು. ಅವರ ಬಂಧನದಿಂದ 12 ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.ದಕ್ಷಿಣ ವಿಭಾಗದ ಡಿಸಿಪಿ ಸೋನಿಯಾ ನಾರಂಗ್ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಬಾಳೇಗೌಡ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry