ಬಸ್ ನಿಲ್ದಾಣದೆದುರು ವಾಹನ ನಿಲುಗಡೆಗೆ ಪರದಾಟ

7

ಬಸ್ ನಿಲ್ದಾಣದೆದುರು ವಾಹನ ನಿಲುಗಡೆಗೆ ಪರದಾಟ

Published:
Updated:

ಮೈಸೂರು: ರಾಜ್ಯದ ವಿವಿಧ ಮೂಲೆಗಳಿಗೆ ತೆರಳುವವರು ನಗರದ ಸಬರ್ಬ್‌ನ್ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ಆದರೆ ತಮ್ಮ ಕುಟುಂಬದವರು, ಸ್ನೇಹಿತರನ್ನು ಬಸ್ ನಿಲ್ದಾಣಕ್ಕೆ ಬಿಟ್ಟು ಬರಲು, ಇಲ್ಲ ಕರೆತರಲು ವಾಹನದಲ್ಲಿ ಬಂದರೆ ಇಲ್ಲಿ ನಿಲುಗಡೆಗೆ ಸ್ಥಳಾವಕಾಶವೇ ಇಲ್ಲ. ಹಾಗಾಗಿ ವಾಹನ ನಿಲುಗಡೆಗೆ ಸಾರ್ವಜನಿಕರು ನಿತ್ಯ ಪರದಾಡುವಂತಾಗಿದೆ.ಸಬರ್ಬನ್ ಬಸ್ ನಿಲ್ದಾಣದ ಎದುರು ಮೊದಲು ವಾಹನ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಆದರೆ ಟ್ಯಾಕ್ಸಿ ನಿಲ್ದಾಣ ಸೇರಿದಂತೆ ಖಾಸಗಿ ವಾಹನಗಳನ್ನು ನಿಲುಗಡೆ ಮಾಡುವುದನ್ನು ನಗರ ಸಂಚಾರ ಪೊಲೀಸರು ನಿಷೇಧ ಮಾಡುವ ಮೂಲಕ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.ನೂರಾರು ಮಂದಿ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತಾರೆ. ಆದರೆ ತಮ್ಮ ಕುಟುಂಬದವರನ್ನು ನಿಲ್ದಾಣಕ್ಕೆ ಬಂದು ಬಿಡಲು ಇಲ್ಲವೆ ಬೇರೆ ಊರುಗಳಿಂದ ಬಂದವರನ್ನು ಕರೆದೊಯ್ಯಲು ಯಾರಾದರೂ ಕಾರಿನಲ್ಲಿ ಹೋದರೆ ನಿಲುಗಡೆಗೆ ಇಲ್ಲಿ ಸ್ಥಳಾವಕಾಶ ಇಲ್ಲ. ಒಂದು ವೇಳೆ ನಿಲ್ಲಿಸಬೇಕೆಂದರೆ ಶ್ರೀಹರ್ಷ ರಸ್ತೆ, ಅಶೋಕ ರಸ್ತೆಯಲ್ಲಿ ನಿಲ್ಲಿಸಿ ಬಸ್ ನಿಲ್ದಾಣಕ್ಕೆ ನಡೆದು ಹೋಗಬೇಕು.ಕಾರ್ ವೀಲ್ ಲಾಕ್: ಬಸ್ ನಿಲ್ದಾಣದ ಎದುರಿನ ಸ್ಥಳದಲ್ಲಿ ‘ನೋ ಪಾರ್ಕಿಂಗ್’ ಎಂದು ನಾಮಫಲಕ ಇದೆ. ಆದರೆ ಆತುರದಲ್ಲಿ ವಾಹನ ನಿಲ್ಲಿಸಿ ಒಳ ಹೋಗಿದ್ದೇ ಆದಲ್ಲಿ ಸಂಚಾರ ಪೊಲೀಸರು ವೀಲ್ ಲಾಕ್ ಹಾಕುತ್ತಾರೆ.ನಿಲ್ದಾಣದ ಒಳಗೆ ಹೋಗಿ ಬಂದು ಕಾರಿಗೆ ವೀಲ್ ಲಾಕ್ ಹಾಕಿದ್ದನ್ನು ನೋಡಿ ನಂತರವೇ ಇದು ನಿಲುಗಡೆ ಸ್ಥಳವಲ್ಲ ಎಂಬುದು ಬಹುತೇಕ ಮಂದಿಗೆ ತಿಳಿದುಬರುತ್ತದೆ. ಕೂಡಲೇ ನಿಮ್ಮೆದುರು ಪ್ರತ್ಯಕ್ಷನಾಗುವ ಸಂಚಾರ ಪೊಲೀಸ್ ದಂಡ ಕಟ್ಟುವಂತೆ ನಿಮ್ಮ ಕೈಗೆ ನೋಟಿಸ್ ನೀಡುತ್ತಾನೆ. ಆದರೆ ವಾಹನ ನಿಲುಗಡೆ ಮಾಡುವುದಾದರೂ ಎಲ್ಲಿ? ಎಂದು ವಾಹನ ಮಾಲೀಕರು ಪ್ರಶ್ನೆ ಮಾಡಿದರೆ ಅದಕ್ಕೆ ಸಂಚಾರ ಪೊಲೀಸರ ಬಳಿ ಉತ್ತರ ಇಲ್ಲ. ‘ಇಲ್ಲಿ ಪಾರ್ಕಿಂಗ್ ಇಲ್ಲ’ ಬೇರೆ ಕಡೆ ನಿಲ್ಲಿಸಿಕೊಳ್ಳಿ ಎಂದು ಮೂಗು ಮುರಿಯುತ್ತಾರೆ.ಬಸ್ ನಿಲ್ದಾಣ ಕಟ್ಟಡದ ನೆಲಮಹಡಿಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ ವಾಹನ ನಿಲುಗಡೆಗೆ ಟೆಂಡರ್ ಈಗಾಗಲೇ ನೀಡಲಾಗಿದ್ದು, ಅದಕ್ಕೆ ಇನ್ನೂ ಚಾಲನೆ ನೀಡಲಾಗಿಲ್ಲ.ಬ್ಯಾಟರಿಗಳು ಮಾಯ: ಸೆಲ್ಲಾರ್‌ನಲ್ಲಿ ದ್ವಿಚಕ್ರ ವಾಹನಗಳನ್ನು ನೋಡಿಕೊಳ್ಳುವವರು ಯಾರೂ ಇಲ್ಲದ ಕಾರಣ ಮಾಲೀಕರು ತಮ್ಮ ಜವಾಬ್ದಾರಿಯ ಮೇಲೆ ವಾಹನವನ್ನು ನಿಲ್ಲಿಸಿ ಹೋಗುತ್ತಾರೆ. ಆದರೆ ಇದು ವಾಹನಗಳ್ಳರಿಗೆ ವರದಾನವಾಗಿದೆ. ವಾಹನ ಮಾಲೀಕ ಬೇರೊಂದು ಊರಿಗೆ ಹೋಗಿ ಮತ್ತೆ ಬಂದು ವಾಹನ ತೆಗೆಯಲು ಮುಂದಾದಾಗ ಬ್ಯಾಟರಿ, ಮಿರರ್ ಇಲ್ಲವೆ ಯಾವುದಾದರೊಂದು ವಸ್ತು ನಾಪತ್ತೆಯಾಗಿರುತ್ತವೆ.ಈ ಬಗ್ಗೆ ಸಂಬಂಧಪಟ್ಟ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಪೊಲೀಸರು ವಾಹನ ನಿಲುಗಡೆಗೆ ರಸೀದಿ ಪಡೆದಿದ್ದೀರಾ? ಎಂದು ಅಲ್ಲಿ ಅಧಿಕೃತವಾಗಿ ವಾಹನ ನಿಲುಗಡೆ ಮಾಡಲು ಟೆಂಡರ್ ಅನ್ನು ಯಾರಿಗೂ ನೀಡಿಲ್ಲ ಎಂದು ಉತ್ತರ ನೀಡುತ್ತಾರೆ. ಹೀಗಾಗಿ ವಾಹನ ಸವಾರರು ನಿತ್ಯ ವಾಹನ ನಿಲುಗಡೆಗೆ ಪರದಾಡುವಂತಾಗಿದೆ.ನೂರಾರು ಮಂದಿ ಬಸ್ ನಿಲ್ದಾಣಕ್ಕೆ ಬಂದು ಹೋಗುವ ಪ್ರಯಾಣಿಕರಿಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಬೇಕೆಂದು ಕನಿಷ್ಠ ಜ್ಞಾನವೂ ಸಂಚಾರ ಪೊಲೀಸರಿಗೆ ಇಲ್ಲವೆ ಎಂದು ಸಾರ್ವಜನಿಕರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.ರಸ್ತೆ ಸುರಕ್ಷತಾ ಸಪ್ತಾಹವನ್ನು ವಾರಗಟ್ಟಲೆ ಆಚರಿಸಿದ ಸಂಚಾರ ಪೊಲೀಸರು ಜನರಲ್ಲಿ ಅರಿವನ್ನು ಮೂಡಿಸಿದರು. ಆದರೆ ನಿತ್ಯ ಬಸ್ ನಿಲ್ದಾಣದ ಎದುರು ವಾಹನ ನಿಲಗಡೆಗೆ ಅವಕಾಶ ಇಲ್ಲದೆ ಬವಣೆ ಪಡುತ್ತಿದ್ದರೂ ಸಂಚಾರ ಪೊಲೀಸರು ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ. ಸೆಲ್ಲಾರ್‌ನಲ್ಲಿ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿದ್ದೇ ಆದಲ್ಲಿ ಈ ಸಮಸ್ಯೆಗಳಿಗೆ ಬ್ರೇಕ್ ಬೀಳುತ್ತದೆ. ಇನ್ನಾದರೂ ಸಮಸ್ಯೆ ಪರಿಹರಿಸಲು ಪೊಲೀಸರು ಮುಂದಾಗುತ್ತಾರೆಯೆ? ಎಂಬುದು ಸಾರ್ವಜನಿಕರ ಪ್ರಶ್ನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry