ಮಂಗಳವಾರ, ಮೇ 18, 2021
28 °C

ಬಸ್ ಪಾಸ್‌ಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ

ಪ್ರಜಾವಾಣಿವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಶೈಕ್ಷಣಿಕ ವರ್ಷದ ಆರಂಭದಲ್ಲೇ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದ ಬಸ್ ಪಾಸ್ ವಿತರಿಸಬೇಕು. ಹೆಚ್ಚಿರುವ ಪಾಸ್ ದರವನ್ನು ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ವಿವಿಧ ಕಾಲೇಜುಗಳ ಪಿಯುಸಿ ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಓ)ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ಸ್ಥಳೀಯ ಕನಕ ದುರ್ಗಮ್ಮ ದೇವಸ್ಥಾನದ ಬಳಿಯಿಂದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ಕಚೇರಿವರೆಗೆ ಪ್ರತಿಭಟನಾ ರ‌್ಯಾಲಿ ನಡೆಸಿದ ವಿದ್ಯಾರ್ಥಿಗಳು, ಈ ಕುರಿತ ಮನವಿಯನ್ನು ಕಚೇರಿಯಲ್ಲಿ ಸಲ್ಲಿಸಿದರು.

ಪಿಯುಸಿ ಶೈಕ್ಷಣಿಕ ಚಟುವಟಿಕೆಗಳು ಜೂನ್ ಮೊದಲ ವಾರವೇ ಆರಂಭವಾಗಿದ್ದು,  ನಿತ್ಯವೂ ತರಗತಿಗಳು ನಡೆಯುತ್ತಿವೆ. ಗ್ರಾಮೀಣ ಪ್ರದೇಶದಿಂದ ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ಬರುವ ಜಿಲ್ಲೆಯ ಬಡ ವಿದ್ಯಾರ್ಥಿಗಳು ಇದುವರೆಗೆ ಬಸ್ ಪಾಸ್ ದೊರೆಯದೆ ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದಲೇ ಸರ್ಕಾರ ರಿಯಾಯಿತಿ ದರದ ಬಸ್ ಪಾಸ್ ನೀಡುತ್ತಿದ್ದು, ಸೂಕ್ತ ವೇಳೆಗೆ ಪಾಸ್ ದೊರೆಯದಿದ್ದರೆ ಬಡ ವಿದ್ಯಾರ್ಥಿಗಳು ನಿತ್ಯವು ಅಧಿಕ ಪ್ರಮಣದ ಪ್ರಯಾಣ ದರ ನೀಡಿ, ಕಾಲೇಜಿಗೆ ಬರುವುದು ಅಸಾಧ್ಯವಾಗಿದೆ. ವಿದ್ಯಾರ್ಥಿಗಳು ಮತ್ತು ಪಾಲಕರ ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಸಾರಿಗೆ ಸಂಸ್ಥೆಯು ಕೂಡಲೇ ಪಾಸ್ ವಿತರಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಲಾಯಿತು.ಬಡ ವಿದ್ಯಾರ್ಥಿಗಳ ಕೈಗೆಟುಕುವ ದರದಲ್ಲಿ ಬಸ್ ಪಾಸ್ ನೀಡಬೇಕು. ಹೆಚ್ಚಿರುವ ದರವನ್ನು ಕಡಿಮೆ ಮಾಡಿ, ಪ್ರತಿ ವರ್ಷವೂ ಶಾಲೆ- ಕಾಲೇಜು ಆರಂಭವಾದ ಕೂಡಲೇ ಪಾಸ್ ವಿತರಿಸಬೇಕು ಎಂದು ಸಂಘಟನೆ ಮನವಿ ಮಾಡಿತು.ಎಐಡಿಎಸ್‌ಓ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಉಮೇಶ್, ಕಾರ್ಯದರ್ಶಿ ಗೋವಿಂದ್, ಸಹ ಕಾರ್ಯದರ್ಶಿ ಎರಿಸ್ವಾಮಿ, ರಮೇಶ್, ಅಶೋಕ್, ರಾಜ್‌ಗೌಡ, ಮಲ್ಲಿಕಾರ್ಜುನ, ಲಿಂಗಮೂರ್ತಿ, ವೀರೇಂದ್ರ ಮತ್ತಿತರರು ಉಪಸ್ಥಿತರಿದ್ದರು.ಮನವಿ ಸ್ವೀಕರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ದುರ್ಗಪ್ಪ, ಜೂನ್ 20ರಿಂದ ನಗರದ ಬಸ್ ನಿಲ್ದಾಣದಲ್ಲಿ ಹೆಚ್ಚು ಕೌಂಟರ್ ತೆರೆಯುವ ಮೂಲಕ ಎಲ್ಲ ವಿದ್ಯಾರ್ಥಿಗಳಿಗೂ ಪಾಸ್ ವಿತರಿಸಲಾಗುವುದು. ಅಲ್ಲದೆ, ಇನ್ನುಳಿದ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.