ಗುರುವಾರ , ಮೇ 6, 2021
27 °C

ಬಸ್ ಪ್ರಯಾಣ ದರ ಹೆಚ್ಚಳಕ್ಕೆ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: ಬಸ್ ಪ್ರಯಾಣ ದರ ಹೆಚ್ಚಳ ವಿರೋಧಿಸಿ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಸಿ) ಸಂಘಟನೆಯವರು ಇಲ್ಲಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಭಾನುವಾರ ಪ್ರತಿಭಟನೆ ನಡೆಸಿದರು.`ಬಡವರ-ಕಾರ್ಮಿಕರ ಪರವಾದ ನೀತಿಗಳನ್ನು ಜಾರಿಗೆ ತರುತ್ತೇವೆ ಎಂದು ಹೇಳುತ್ತಿರುವ ರಾಜ್ಯ ಸರ್ಕಾರ ಏಕಾಏಕಿ ಬಸ್ ಪ್ರಯಾಣ ದರ ಹೆಚ್ಚಿಸಿದೆ. ಬಡವರಿಗೆ ಒಂದು ರೂಪಾಯಿ ದರದಲ್ಲಿ ಅಕ್ಕಿ ಕೊಡುತ್ತೇವೆ ಎಂದು ಹೇಳಿ, ಅದೇ ಬಡವರ ಜೇಬಿನಿಂದ ಹಣ ಕೀಳುತ್ತಿದೆ' ಎಂದು ಸಂಘಟನೆಯ ಜಿಲ್ಲಾ ಘಟಕದ ಕಾರ್ಯದರ್ಶಿ ಬಿ. ಭಗವಾನ ರೆಡ್ಡಿ ದೂರಿದರು.`ಡೀಸೆಲ್ ದರ ಹೆಚ್ಚಳ ಮತ್ತು ನಿರ್ವಹಣಾ ವೆಚ್ಚದ ನೆಪವೊಡ್ಡಿ ಪ್ರಯಾಣ ದರ ಹೆಚ್ಚಿಸುವ ಮೂಲಕ ಸರ್ಕಾರ ಜನಸಾಮಾನ್ಯರ ಬೆನ್ನಿಗೆ ಚೂರಿ ಇರಿದಿದೆ. ಸಾರಿಗೆ ಸಂಸ್ಥೆಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ ನಿಯಂತ್ರಿಸುವುದನ್ನು ಬಿಟ್ಟು ದರ ಹೆಚ್ಚಳ ಮಾಡಿರುವ ಈ ಕ್ರಮದ ವಿರುದ್ಧ ಜನ ಬಂಡೇಳಬೇಕು' ಎಂದರು.`ಈಗಾಗಲೇ ದಿನಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಜೀವನವೇ ಭಾರವಾಗಿದೆ. ಅಗತ್ಯ ವಸ್ತುಗಳು, ತರಕಾರಿಯ ಬೆಲೆ ನಿತ್ಯವೂ ಹೆಚ್ಚಳವಾಗುತ್ತಿದೆ. ಅದನ್ನು ನಿಯಂತ್ರಿಸುವ ಬದಲು ಈಗ ಬಸ್ ಪ್ರಾಯಾಣ ದರ ಹೆಚ್ಚಳ ಮಾಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ' ಎಂದು ಸಿದ್ಧಲಿಂಗ ಬಾಗೇವಾಡಿ ಆಕ್ರೋಶ ವ್ಯಕ್ತಪಡಿಸಿದರು.`ಹೊಸ ಸರ್ಕಾರ ಬಂದು ಕೆಲವೇ ದಿನಗಳಾಗಿದ್ದರೂ ಇಂತಹ ಜನವಿರೋಧಿ ನೀತಿ ಕೈಗೊಂಡಿದೆ. ಇದು ಖಂಡನೀಯ. ತಮಗೆ ಹೊರೆಯಾಗುವ ನೀತಿಗಳ ವಿರುದ್ಧ ಜನ ಒಟ್ಟಾಗಿ ಹೋರಾಟಕ್ಕೆ ಮುಂದಾಗಬೇಕು' ಎಂದು ಮಲ್ಲಿಕಾರ್ಜುನ ಮನವಿ ಮಾಡಿದರು.ಉಮೇಶ ಹೆಗಡೆ, ಬಾಳು ಜೇವೂರ, ಎಚ್.ಟಿ. ಭರತಕುಮಾರ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.