ಬಸ್ ಬಂದರೆ ತಾನೆ!

ಭಾನುವಾರ, ಜೂಲೈ 21, 2019
26 °C

ಬಸ್ ಬಂದರೆ ತಾನೆ!

Published:
Updated:

ಜೂನ್ 11 ರಂದು ಜಯನಗರ `ಟಿ~ ಬ್ಲಾಕ್ ಕಡೆ ಹೋಗಲು ಇಸ್ರೋ ಬಡಾವಣೆಯ ಬಸ್ ನಿಲ್ದಾಣದಲ್ಲಿ ಬೆಳಿಗ್ಗೆ 11 ಗಂಟೆಯಿಂದ ಕಾದ್ದಿದೆ. ಆದರೆ 11.50ಕ್ಕೆ 210 ಜಿ ಬಸ್ ಬಂತು. ಅಲ್ಲಿಯ ತನಕ ಬೇರಾವುದೇ ಬಸ್ ಅಲ್ಲಿ ಬರಲೇ ಇಲ್ಲ. ನಿಯಮಿತವಾಗಿ ಸಂಚರಿಸಬೇಕಾದ 412ನೇ ಬಸ್ ಕೂಡ ನಾಪತ್ತೆಯಾಗಿತ್ತು.ಇದರರ್ಥ ಈ ಬಡಾವಣೆಯಿಂದ ವೇಳೆಗೆ ಸರಿಯಾಗಿ ಬಸ್ ಇಲ್ಲ. ಕದಿರೇನಹಳ್ಳಿ ಕ್ರಾಸ್ ಮತ್ತು ಕುಮಾರಸ್ವಾಮಿ ಲೇ ಔಟ್‌ನಿಂದ ಇಸ್ರೋ ಬಡಾವಣೆಗೆ ಹೋಗಲು ಕೆಲವು ವೇಳೆ ಅದರಲ್ಲೂ ಸಂಜೆಯ ನಂತರ ಎಷ್ಟು ಕಾದರೂ ಬಸ್ ಬರುವುದಿಲ್ಲ. ಕಾಯುವುದಕ್ಕೇ ಸಾಕಷ್ಟು ಸಮಯ ವ್ಯರ್ಥವಾಗುತ್ತದೆ.ಹೀಗಾಗಿ ಬನಶಂಕರಿಯಿಂದ ಕದಿರೇನಹಳ್ಳಿ ಕ್ರಾಸ್ - ಕುಮಾರಸ್ವಾಮಿ ಲೇಔಟ್ - ಇಸ್ರೊ ಬಡಾವಣೆ - ವಸಂತಪುರ, ಕೊಣನಕುಂಟೆ ಕ್ರಾಸ್ - ಬನಶಂಕರಿ ಮಾರ್ಗದಲ್ಲಿ ಅರ್ಧ ಗಂಟೆಗೊಮ್ಮೆ ಒಂದು ಮಿನಿ ಬಸ್ ಓಡಿಸಿದರೆ ಸಾಕು. ಇಸ್ರೊ ಬಡಾವಣೆಯ ನಿವಾಸಿಗಳಿಗೆ ಬಹಳ ಅನುಕೂಲವಾಗುತ್ತದೆ.ಇಸ್ರೊ ಬಡಾವಣೆಯಲ್ಲಿ ಎಲ್ಲವೂ ಸರಿಯಿದೆ; ಆದರೆ ಬಸ್‌ಗಳಿಗೆ ಮಾತ್ರ ಬರ ಬಂದಿದೆ. `ಕಾರು, ಸ್ಕೂಟರ್ ಏತಕ್ಕೆ? ಬಸ್‌ನಲ್ಲೇ ಪ್ರಯಾಣಿಸಿ~ ಎಂದು ಸಾರಿಗೆ ಸಂಸ್ಥೆ ಹೇಳುತ್ತದೆ. ಬಸ್ ಬಂದರೆ ತಾನೆ ಪ್ರಯಾಣಿಸುವುದು. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಲು ಕೋರಿಕೆ.

- ಪಿ. ಎ. ಸುಧೀಂದ್ರಫುಟ್‌ಪಾತ್‌ನಲ್ಲಿ ಹಳ್ಳ

ಮೈಸೂರು ಬ್ಯಾಂಕ್‌ನಿಂದ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಹೋಗುವ ರಸ್ತೆಗಳ ಬದಿಗಳಲ್ಲಿ ಮರಗಳಿವೆ. ಅದರ ಸುತ್ತಲೂ ದೊಡ್ಡ ದೊಡ್ಡ ಹಳ್ಳಗಳ ಥರ ಇದೆ. ಹೀಗಾಗಿ ಪಾದಚಾರಿಗಳು ಸಲೀಸಾಗಿ ಓಡಾಡುವುದೇ ಕಷ್ಟವಾಗಿದೆ.

 

ಆ ಕಡೆ ಈ ಕಡೆ ನೋಡುತ್ತ ಹಳ್ಳದಲ್ಲಿ ಬೀಳುವವರೇ ಜಾಸ್ತಿಯಾಗಿದೆ. ವಯಸ್ಸಾದ ಹೆಂಗಸರು, ಮಕ್ಕಳ ತೊಂದರೆ ಬಗ್ಗೆ ಹೇಳುವಂತೆಯೇ ಇಲ್ಲ.ಆದ್ದರಿಂದ ಫುಟ್‌ಪಾತ್‌ನಲ್ಲಿ ಹಿಂದಿನಂತೆ ತೊಂದರೆಯಿಲ್ಲದೆ ಓಡಾಡಲು ಅನುಕೂಲ ಮಾಡಿಕೊಡಬೇಕಾಗಿ  ಪಾಲಿಕೆಯ ಆಯುಕ್ತರಲ್ಲಿ ವಿನಂತಿ.

- ಎಂ. ಮಲ್ಲೇಶಯ್ಯ

ಶೌಚಾಲಯ ಲಾಬಿ

ಬೆಂಗಳೂರಿಗರು ಕ್ಯಾಪಿಟೇಶನ್ ಲಾಬಿ, ಹೆಲ್ಮೆಟ್ ಲಾಬಿ, ಡೊನೇಶನ್ ಲಾಬಿ, ಪಾರ್ಕಿಂಗ್ ಲಾಬಿ ನೋಡಿ ಆಯಿತು. ಈಗ ಹೊಸದೊಂದು ಲಾಬಿ ತಲೆ ಎತ್ತಿದೆ. ಅದೇ `ಶೌಚಾಲಯ ಲಾಬಿ~.ಈ ಲಾಬಿಯವರು ಇತ್ತೀಚಿನ ದಿನಗಳಲ್ಲಿ ಫುಟ್‌ಪಾತ್ ಸಹ ಬಿಡದೆ ಎಲ್ಲೆಂದರಲ್ಲಿ ಟೈಲ್ಸ್ ಅಳವಡಿಸಿ ಶೌಚಾಲಯ ನಿರ್ಮಿಸಿ `ಎರಡೂ ವಿಸರ್ಜನೆಗಳಿಗೂ~ ಮುಲಾಜಿಲ್ಲದೆ ಶುಲ್ಕ ವಸೂಲಿ ಮಾಡುತ್ತಾರೆ.ಇವರ ಹಾವಳಿಯಿಂದಾಗಿ ಬೆಂಗಳೂರಿನಲ್ಲಿ ಉಚಿತ ಮೂತ್ರಾಲಯಗಳು ಮಾಯವಾಗಿವೆ. ಇನ್ನು ಈ ಶೌಚಾಲಯಗಳು ಅಧಿಕೃತವೊ, ಅನಧಿಕೃತವೊ ತಿಳಿಯದು. ಈ ಲಾಬಿ ಹಿಂದೆ ನೌಕರಶಾಹಿ ಸಹ ಶಾಮೀಲಾಗಿರಬಹುದು. ಆದ್ದರಿಂದ ಪಾಲಿಕೆ ಆಯುಕ್ತರು ಇತ್ತ ಗಮನ ಹರಿಸಿ ಈ ಲಾಬಿಯನ್ನು ಹತೋಟಿಯಲ್ಲಿ ಇಡಬೇಕೆಂದು ಮನವಿ.

- ಬಿ ಎಸ್ ಎಂ ಕುಮಾರ್

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry