ಬಸ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

ಶುಕ್ರವಾರ, ಮೇ 24, 2019
25 °C

ಬಸ್ ಮಾಲೀಕರ ವಿರುದ್ಧ ಕಠಿಣ ಕ್ರಮಕ್ಕೆ ಸೂಚನೆ

Published:
Updated:

ಚಿತ್ರದುರ್ಗ:  ಅಪಘಾತ ಘಟನೆಗಳು ಪದೇಪದೇ ಸಂಭವಿಸುತ್ತಿದ್ದು, ಅಹಿತಕರ ಘಟನೆಗಳಿಗೆ ಕಾರಣವಾಗುವ ಖಾಸಗಿ ಬಸ್ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗೆ ಆದೇಶಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಜೆ. ಪುಟ್ಟಸ್ವಾಮಿ ತಿಳಿಸಿದರು. 

ಸೋಮವಾರ ನಡೆದ ಬಸ್ ಅಪಘಾತದಲ್ಲಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಮಂಗಳವಾರ ಭೇಟಿ ಮಾಡಿ ಸಾಂತ್ವನ ಹೇಳಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಚಾಲಕರ ಅಜಾಗರೂಕತೆಯಿಂದ ಇಂತಹ ಅಪಘಾತಗಳು ಸಂಭವಿಸುತ್ತಿವೆ. ನೂರಾರು ಕುಟುಂಬಗಳು ಬೀದಿ ಪಾಲಾಗುತ್ತಿದ್ದಾರೆ. ಆದ್ದರಿಂದ ಖಾಸಗಿ ಬಸ್‌ನಿಲ್ದಾಣದಲ್ಲೇ ಪ್ರತಿಯೊಬ್ಬ ಚಾಲಕನನ್ನು ತಪಾಸಣೆ ಮಾಡಬೇಕು. ಮದ್ಯ ಸೇವಿಸಿ ಬಸ್ ಚಲಾಯಿಸುವ ಚಾಲಕರ ವಿರುದ್ಧ ಕ್ರಮಕೈಗೊಳ್ಳಬೇಕು. ಈ ಬಗ್ಗೆ ಪೋಲಿಸರು ಕಾರ್ಯ ಪ್ರವೃತ್ತರಾಗಲು ಸೂಚಿಸಲಾಗಿದೆ. ಸಾರ್ವಜನಿಕರು ಸಹ ಜಾಗೃತರಾಗಬೇಕು. ಬಸ್‌ಗಳಲ್ಲೂ ನಿಗದಿಪಡಿಸಿ ಪ್ರಯಾಣಿಕರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿಗೆ ಅವಕಾಶ ನೀಡಿದರೆ ಪೊಲೀಸರಿಗೆ ದೂರು ನೀಡಬೇಕು ಎಂದರು.

ಖಾಸಗಿ ಬಸ್‌ಗಳಿಗೆ ವೇಗ ನಿಯಂತ್ರಕ ಅಳವಡಿಸುವಂತೆ ಸರ್ಕಾರ ಕ್ರಮ ಕೈಗೊಂಡಿದೆ. ಹಳೇ ಖಾಸಗಿ ಬಸ್‌ಗಳಿಗೆ ಪರವಾನಗಿ ನವೀಕರಣ ಮಾಡುವ ಸಮಯದಲ್ಲಿ ವೇಗನಿಯಂತ್ರಕ ಕಡ್ಡಾಯ ಅಳವಡಿಸುವಂತೆ ಆರ್‌ಟಿಒ ಹಾಗೂ ಪೋಲಿಸ್ ಇಲಾಖೆಗೆ ಆದೇಶಿಸಲಾಗಿದೆ. ಕೆಎಸ್‌ಆರ್‌ಟಿಸಿ ಬಸ್ ಸಂಚಾರವಿಲ್ಲದ ಜಿಲ್ಲೆಯ ಎಲ್ಲ ಸ್ಥಳಗಳಿಗೂ ಹೊಸ ಬಸ್‌ಗಳ ಸಂಚಾರಕ್ಕೆ ಸಾರಿಗೆ ಸಚಿವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಪಘಾತದಲ್ಲಿ ಮೃತಪಟ್ಟ ಸಂಬಂಧಿಕರಿಗೆ ಮತ್ತು ಗಾಯಾಳುಗಳಿಗೆ ಪರಿಹಾರ ನೀಡುವ ಬಗ್ಗೆ ಮುಖ್ಯಮಂತ್ರಿ ಜತೆ ಚರ್ಚಿಸಲಾಗಿದೆ ಎಂದು ತಿಳಿಸಿದರು.

ಟ್ರಾಮಾ ಕೇಂದ್ರಕ್ಕೆ ಸರ್ಕಾರ ಹಣ ಬಿಡುಗಡೆ ಮಾಡಿದ್ದು, ಇನ್ನೂ 3 ತಿಂಗಳ ಒಳಗೆ ಪೂರ್ಣ ಸೌಕರ್ಯಗಳೊಂದಿಗೆ ಅಲ್ಲಿಯೇ ಚಿಕಿತ್ಸೆ ನೀಡುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗೆ ಸೂಚಿಸಲಾಗಿದೆ. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನೇಕಾರರ ಸಾಲಮನ್ನಾ ಮಾಡಲಾಗಿದ್ದು, ಆದರೆ, ಫಲಾನುಭವಿಗಳ ಆಯ್ಕೆಯಲ್ಲಿ ಲೋಪವಾಗಿದ್ದು, ಸರ್ಕಾರದ ಹಣವನ್ನು ದುರುಪಯೋಗವಾಗಿದೆ. ಈ ಬಗ್ಗೆ ಪ್ರತಿ ಜಿಲ್ಲೆಗೆ ಉನ್ನತ ಅಧಿಕಾರಿಗಳನ್ನು ನೇಮಿಸಲಾಗಿದ್ದು, ತನಿಖೆ ನಡೆಸಿ ವರದಿ ಬಂದ ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry