ಭಾನುವಾರ, ಮೇ 16, 2021
22 °C
ಶಿಕಾರಿಪುರದ ವಿವಿಧ ಗ್ರಾಮಗಳ ಗ್ರಾಮಸ್ಥರ ಪ್ರತಿಭಟನೆ, ಅಧಿಕಾರಿಗಳ ವಿರುದ್ಧ ಆಕ್ರೋಶ

ಬಸ್ ಸಂಚಾರ ಪುನರಾರಂಭಕ್ಕೆ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಿ ಶಿಕಾರಿಪುರ ತಾಲ್ಲೂಕಿನ ವಿವಿಧ ಗ್ರಾಮಗಳ ಗ್ರಾಮಸ್ಥರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.ಈ ಹಿಂದೆ ಶಿಕಾರಿಪುರ ಪಟ್ಟಣದಿಂದ ನೆಲವಾಗಿಲು ಮೂಲಕ ಹಳೇ ಗೊದ್ದನಕೊಪ್ಪ, ಹೊಸಗೊದ್ದನಕೊಪ್ಪ, ಹಳೆ-ಹೊಸ ಮುಗುಳಗೆರೆ, ನಿಂಬೆಗೊಂದಿ, ಮತ್ತಿಕೋಟೆ ಮಾರ್ಗವಾಗಿ ರಾಣೆಬೆನ್ನೂರಿಗೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸುತ್ತಿತ್ತು. ಇದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಹಾಯವಾಗಿತ್ತು.ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯುಕ್ತವಾಗಿತ್ತು. ಸರ್ಕಾರ ನಿಗದಿಪಡಿಸಿದ್ದ ಶುಲ್ಕ ಪಾವತಿಸಿ ವಿದ್ಯಾರ್ಥಿಗಳು ಬಸ್ ಪಾಸ್ ಕೂಡ ಮಾಡಿಸಿಕೊಂಡಿದ್ದರು. ಆದರೆ, ಈಗ ಏಕಾಏಕಿ ಬಸ್ ಸೇವೆ ರದ್ದುಗೊಳಿಸಲಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.ಈ ಮಾರ್ಗದಲ್ಲಿ ಈಗ ಖಾಸಗಿ ಬಸ್‌ಗಳು ಸಂಚಾರ ನಡೆಸಿವೆ. ಖಾಸಗಿ ಬಸ್‌ಗಳ ಓಡಾಟದ ಹಿಂದೆ ಸಾರಿಗೆ ಅಧಿಕಾರಿಗಳ ಕುಮ್ಮಕ್ಕು ಇದೆ ಎಂದು ಗ್ರಾಮಸ್ಥರು ಆರೋಪಿಸಿದರು.ಸ್ಥಗಿತಗೊಳಿಸಿರುವ ಸರ್ಕಾರಿ ಬಸ್ ಸಂಚಾರ ಪುನರಾರಂಭಿಸುವಂತೆ ಆಗ್ರಹಿಸಿ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿಕೊಳ್ಳಲಾಗಿದೆ. ಆದರೂ ಇದುವರೆಗೂ ಬಸ್ ಸಂಚಾರ ವ್ಯವಸ್ಥೆ ಮಾಡಲು  ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.ಸರ್ಕಾರಿ ಬಸ್ ಸಂಚಾರ ಸ್ಥಗಿತದಿಂದ ನೂರಾರು ರೂಪಾಯಿ ಪಾವತಿಸಿ ವಿದ್ಯಾರ್ಥಿಗಳು ಮಾಡಿಸಿದ್ದ ಬಸ್‌ಪಾಸ್ ಅನುಪಯುಕ್ತವಾಗಿದೆ. ಖಾಸಗಿ ಬಸ್‌ಗಳಲ್ಲಿ ವಿಪರೀತ ಜನಜಂಗುಳಿಯಿಂದ ಮಹಿಳೆಯರು, ವಯೋವೃದ್ಧರು ಪ್ರಯಾಣಿಸುವುದು ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಸ್ಥಗಿತಗೊಳಿಸಿರುವ ಸರ್ಕಾರಿ ಬಸ್ ಸಂಚಾರವನ್ನು ತಕ್ಷಣವೇ ಪುನರಾರಂಭಿಸಬೇಕು. ಖಾಸಗಿ ಬಸ್ ಮಾಲೀಕರ ಜತೆ ಶಾಮೀಲಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದರು.ಪ್ರತಿಭಟನೆಯ ನೇತೃತ್ವವನ್ನು ಬಸರಾಜಪ್ಪ, ಸುರೇಶ, ಸಿದ್ದಪ್ಪ, ಶಿವಪ್ಪ, ರುದ್ರಪ್ಪ, ನಾಗಪ್ಪ, ಆನಂದಪ್ಪ ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.