ಸೋಮವಾರ, ಏಪ್ರಿಲ್ 19, 2021
32 °C

ಬಸ್ ಸಂಪರ್ಕ ಕಲ್ಪಿಸಲು ಒತ್ತಾಯಿಸಿ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ಪಟ್ಟಣದಿಂದ ಶಿಕಾರಿಪುರ ತಾಲ್ಲೂಕಿನ ಕಿಟ್ಟದಹಳ್ಳಿ, ದಿಂಡದಹಳ್ಳಿ, ಬಾಗನಕಟ್ಟೆ, ಭೈರನಹಳ್ಳಿ ಮತ್ತು ಬೇಗೂರು ಗ್ರಾಮಗಳ ಮೂಲಕ ಶಿಕಾರಿಪುರಕ್ಕೆ ಬಸ್‌ಗಳ ಸಂಪರ್ಕ ಕಲ್ಪಿಸಬೇಕು ಎಂದು ಈ ಗ್ರಾಮಗಳ ಜನರು ಮಂಗಳವಾರ ವಾಯವ್ಯ ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ನೇತೃತ್ವ ವಹಿಸಿದ್ದ ಮಾಜಿ ಶಾಸಕ ಯು.ಬಿ. ಬಣಕಾರ ಮಾತನಾಡಿ, `ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ ಅವರು ಈ ಗ್ರಾಮಗಳಿಗೆ ಹಿರೇಕೆರೂರ ಘಟಕದಿಂದ ಬಸ್‌ಗಳ ಸಂಪರ್ಕ ಕಲ್ಪಿಸಲು ಸಾರಿಗೆ ಅಧಿಕಾರಿಗಳಿಗೆ  ಪತ್ರ ಬರೆದಿದ್ದಾರೆ. ಸಕಾಲದಲ್ಲಿ ಬಸ್‌ಗಳ ಸಂಪರ್ಕವಿಲ್ಲದೇ ಈ ಗ್ರಾಮಗಳ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದು, ವಿದ್ಯಾರ್ಥಿಗಳು ಶಾಲೆ-ಕಾಲೇಜುಗಳಿಗೆ ತೆರಳಲು ಪರದಾಡುವಂತಹ ಸ್ಥಿತಿ ಇದೆ ಎಂದು ದೂರಿದರು.

ಕೂಡಲೇ ಮಾರ್ಗಗಳ ಸಮೀಕ್ಷೆ ನಡೆಸಿ ಬಸ್‌ಗಳನ್ನು ಓಡಿಸಲು ಕ್ರಮ ಕೈಗೊಳ್ಳಬೇಕು~ ಎಂದು ಮನವಿ ಮಾಡಿದರು.

ಬಾಗನಕಟ್ಟೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೈ.ಬಿ. ಲೋಕೇಶ ಮಾತನಾಡಿ, ಈ ಗ್ರಾಮಗಳಿಗೆ ಬೆಳಿಗ್ಗೆ ಕೇವಲ ಒಂದು ಖಾಸಗಿ ಬಸ್ಸು ಬರುತ್ತಿದ್ದು, ನೂರಾರು ಪ್ರಯಾಣಿಕರು ಅದರಲ್ಲಿ ಸಂಚರಿಸುವ ಸ್ಥಿತಿ ಬಂದಿದೆ. ಇದರಿಂದ ರೋಗಿಗಳು, ಮಹಿಳೆಯರು ಹಾಗೂ ವೃದ್ಧರು ತೀವ್ರ ತೊಂದರೆಯನ್ನು ಅನುಭವಿಸಬೇಕಾಗಿದೆ. ಹಲವಾರು ಹೆಣ್ಣು ಮಕ್ಕಳು ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾರೆ ಎಂದು ಹೇಳಿದರು.

ಕಾಲೇಜು ವಿದ್ಯಾರ್ಥಿ ಅಣ್ಣಪ್ಪ ವೈ.ಎಚ್. ಮಾತನಾಡಿ, ಸರ್ಕಾರಿ ಬಸ್ಸುಗಳಲ್ಲಿ ಪಾಸ್ ಸೌಲಭ್ಯ ಇರುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಈ ಗ್ರಾಮಗಳಲ್ಲಿ ಬಹಳಷ್ಟು ಬಡ ಮಕ್ಕಳಿದ್ದಾರೆ. ನಿತ್ಯ ಹಣ ಖರ್ಚು ಮಾಡಿ ಶಾಲೆ, ಕಾಲೇಜುಗಳಿಗೆ ತೆರಳಲು ತೊಂದರೆ ಆಗುತ್ತಿದೆ. ಇದೇ ಕಾರಣದಿಂದ ಅನೇಕರು ವ್ಯಾಸಂಗವನ್ನು ಮೊಟಕುಗೊಳಿಸಿದ್ದಾರೆ. ಕಾರಣ ಸರ್ಕಾರಿ ಬಸ್‌ಗಳ ಸೌಲಭ್ಯ ಕಲ್ಪಿಸುವುದರಿಂದ ಬಡ ಮಕ್ಕಳಿಗೆ ಅನುಕೂಲ ಆಗುತ್ತದೆ ಎಂದರು.

ಬಾಗನಕಟ್ಟೆ ಗ್ರಾ.ಪಂ. ಮಾಜಿ ಅಧ್ಯಕ್ಷ ಕೆ.ಒ. ಲಿಂಗರಾಜ, ಭೈರನಹಳ್ಳಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಟಿ. ಕರಿಬಸಪ್ಪ, ಮಾಲತೇಶ ಬೇಗೂರ, ಸುರೇಶಪ್ಪ,  ಬಿ.ಟಿ. ಉಜಿನೆಪ್ಪ, ಸೋಮಶೇಖರಪ್ಪ, ಬಸವರಾಜಪ್ಪ, ಶಫೀಉಲ್ಲಾ, ಎಂ.ಎಚ್. ಮಂಜಪ್ಪ ಇದ್ದರು.

ವಾಯವ್ಯ ಸಾರಿಗೆ ಘಟಕ ವ್ಯವಸ್ಥಾಪಕ ನಂಜುಂಡಸ್ವಾಮಿ ಮನವಿ ಸ್ವೀಕರಿಸಿ, ಈ ಬಗ್ಗೆ ನಾಳೆಯೇ ಮಾರ್ಗ ಸಮೀಕ್ಷೆ ನಡೆಸಲಾಗುವುದು. ಮೇಲಧಿಕಾರಿಗಳೊಂದಿಗೆ ಚರ್ಚಿಸಿ ಶಿವಮೊಗ್ಗ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆದು ಹೊಸ ಮಾರ್ಗದಲ್ಲಿ ಬಸ್ ಓಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ತಪ್ಪು ತಿದ್ದುವ ರಂಗಭೂಮಿ

ಶಿಕಾರಿಪುರ: ಮನರಂಜನೆ ಮಾತ್ರ ನೀಡದೆ, ಸಮಾಜದಲ್ಲಿ ನಡೆಯುವ ತಪ್ಪುಗಳನ್ನು ತಿದ್ದುವ ನಿಟ್ಟಿನಲ್ಲಿ ನಮ್ಮ ರಂಗಭೂಮಿ ಕಾರ್ಯ ನಿರ್ವಹಿಸುತ್ತಿದೆ ಎಂದು ರಾಜ್ಯ ಉರ್ದು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮೌಲಾನ ಅಮ್ಜದ್ ಹುಸೇನ್ ಕರ್ನಾಟಕಿ ಹೇಳಿದರು.

ಪಟ್ಟಣದ ಜುಬೇದಾ ಕಾಲೇಜಿನಲ್ಲಿ ಮಂಗಳವಾರ ದಾವಣಗೆರೆಯ ರೇಣುಕಾ ದೇವಿ ಮಹಿಳೆ ಮತ್ತು ಮಕ್ಕಳ ಸಾಂಸ್ಕ್ರತಿಕ ಸಂಸ್ಥೆ, ಜಯಕರ್ನಾಟಕ ಕಲಾ ತಂಡದಿಂದ ನೀನಾಸಂ ಕಲಾವಿದರ ಸಹಯೋಗದಲ್ಲಿ ನಡೆದ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಂಗಭೂಮಿ ಕಲಾವಿದರು ಶೈಕ್ಷಣಿಕ ಕ್ಷೇತ್ರಕ್ಕೆ ಸಂಬಂಧಿಸಿದ ನಾಟಕಗಳನ್ನು ಪ್ರದರ್ಶಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ನಾಟಕ ಎಂದರೆ ಜೀವನದ ಒಂದು ಎಂದರು.

ಗುಡಿ ಸಂಸ್ಕ್ರತಿ ಸಂಸ್ಥಾಪಕ ಇಕ್ಬಾಲ್ ಅಹಮದ್ ಮಾತನಾಡಿ, ನಾಟಕಗಳು ವಿದ್ಯಾರ್ಥಿ ಹಾಗೂ ಸಮಾಜದ ಜನರ ವ್ಯಕ್ತತ್ವ ವಿಕಸನ ಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮನಸ್ಸಿನಲ್ಲಿರುವ ಭಾವನೆಗಳನ್ನು ವ್ಯಕ್ತಪಡಿಸಲು ರಂಗಭೂಮಿ ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂದರು.

ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್. ಹುಚ್ಚರಾಯಪ್ಪ, ರಂಗಕರ್ಮಿ ಸತೀಶ್ ಗಟ್ಟಿ, ಗುಲ್ಬರ್ಗಾ ಆಟ-ಮಾಟ ಕಲಾವಿದರಾದ ಅನಿಲ ರೇವೂರ, ಮಂಜು ಹಿರೇಮಠ, ನೀನಾಸಂನ ಕಲಾವಿದೆ ಜ್ಯೋತಿ, ಕುಮಾರ, ಜುಬೇದಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ರಿಹಾನಾ ಬಾನು ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.