ಬಸ್ ಸಿಬ್ಬಂದಿಯ ಸಮಯ ಪ್ರಜ್ಞೆ

7

ಬಸ್ ಸಿಬ್ಬಂದಿಯ ಸಮಯ ಪ್ರಜ್ಞೆ

Published:
Updated:

ಕಳೆದ ವಾರ ನನ್ನ ಸ್ನೇಹಿತನ ಮಗಳ ಮದುವೆಗೆಂದು ಮಂಗಳೂರಿನಿಂದ ಉಡುಪಿಗೆ ಹೋಗುವಾಗ ನಡೆದ ಘಟನೆ ಇದು. ಲೇಡಿಹಿಲ್‌ನಲ್ಲಿ ನಾನು  ಬೆಳಿಗ್ಗೆ 8.45ಕ್ಕೆ  ಹತ್ತಿದ ಖಾಸಗಿ ಬಸ್ ಕೊಟ್ಟಾರ ಬಸ್ ನಿಲ್ದಾಣಕ್ಕೆ ಬಂದಾಗ, ಸುಮಾರು 12-13 ವರ್ಷ ಪ್ರಾಯದ ಶಾಲಾ ಸಮವಸ್ತ್ರ ಧರಿಸಿದ್ದ ಹುಡುಗನೊಬ್ಬ ಅವಸರವಸರವಾಗಿ ಬಸ್ಸನ್ನೇರಿದ.

ಕಂಡಕ್ಟರ್ ಟಿಕೆಟ್ ಕೇಳಿದಾಗ, ತಂದೆ ತಾಯಿ ಹಾಗೂ ಸ್ನೇಹಿತರೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಿ ತನ್ನ ಊರಾದ ಹುಬ್ಬಳ್ಳಿಗೆ ಹಿಂದಿರುಗುತ್ತಿರುವಾಗ, ಕೊಟ್ಟಾರದಲ್ಲಿ ಹುಬ್ಬಳ್ಳಿಗೆ ಹೋಗುವ ಸರ್ಕಾರಿ ಬಸ್ಸನ್ನು ಹತ್ತುವ ಭರದಲ್ಲಿ ತನ್ನ ಬಳಗದವರಿಂದ ಬೇರ್ಪಟ್ಟಿರುವುದಾಗಿ, ಬಸ್ಸು ಹೋಗಿ 1-2 ನಿಮಿಷ ಆಗಿರಬಹುದೆಂದು ಅಳುತ್ತಾ ಹೇಳಿದನು.ಒಡನೆಯೇ ಕಾರ್ಯಪ್ರವೃತ್ತರಾದ ಚಾಲಕ ಸುರತ್ಕಲ್‌ನ ಬಸ್ಸು ಏಜೆಂಟರನ್ನು ಮೊಬೈಲ್ ಮೂಲಕ ಸಂಪರ್ಕಿಸಿ, ವಿಷಯ ತಿಳಿಸಿ ಹುಬ್ಬಳ್ಳಿಗೆ ಹೋಗುವ ಸರ್ಕಾರಿ ಬಸ್ ಅನ್ನು ಸ್ವಲ್ಪ ಹೊತ್ತು ಕಾಯಲಿಕ್ಕೆ ತಿಳಿಸಿದನು. ಚಾಲಕ ಮತ್ತು ನಿರ್ವಾಹಕ ಬಾಲಕನನ್ನು ತನ್ನವರೊಡನೆ ಸೇರಿಸುತ್ತೇವೆಂದು ಸಮಾಧಾನಪಡಿಸಿದರು.

ಕೊಟ್ಟಾರದ ನಂತರ ಕೂಳೂರಿನಲ್ಲಿ ಮಾತ್ರ ಬಸ್ಸನ್ನು ನಿಲ್ಲಿಸಿ ತದನಂತರ ವೇಗವಾಗಿ ಹೊರಟು ಸುರತ್ಕಲ್ ತಲುಪುವ ಮುಂಚೆಯೆ ಹುಬ್ಬಳ್ಳಿಗೆ ಹೋಗುವ ಸರ್ಕಾರಿ ಬಸ್ಸನ್ನು ಹಿಂದಿಕ್ಕಿ ಸುರತ್ಕಲ್ ತಲುಪಿದರು. ನಂತರ  ಹುಬ್ಬಳ್ಳಿಗೆ ಹೋಗುವ ಸರ್ಕಾರಿ ಬಸ್ಸು ಬಂದಿತು.

ತನ್ನವರಿಂದ ಬೇರ್ಪಟ್ಟಿದ್ದ ಬಾಲಕ ಹುಬ್ಬಳ್ಳಿ ಬಸ್ಸನ್ನೇರಿ ತನ್ನವರೊಡನೆ ಸೇರಿಕೊಂಡು ಕೃತಜ್ಞತಾಭಾವದಿಂದ ಕೈಜೋಡಿಸಿ ನಮಸ್ಕರಿಸಿ ಸಂತೋಷದಿಂದ ನಮ್ಮ ಬಸ್ಸಿನಲ್ಲಿರುವವರ ಕಡೆ ಕೈಬೀಸಿದನು. ಕೇವಲ 10-12 ನಿಮಿಷಗಳಲ್ಲಿ ನಡೆದು ಹೋದ ಈ ಘಟನೆಯಲ್ಲಿ ಚಾಲಕ ಮತ್ತು ನಿರ್ವಾಹಕನ ಸಮಯ ಪ್ರಜ್ಞೆ ಹಾಗೂ ಆ ಸಮಯದಲ್ಲಿ ಬಾಲಕನೊಡನೆ ನಡೆದುಕೊಂಡ ರೀತಿಯ ಬಗ್ಗೆ ಬಸ್ಸಿನಲ್ಲಿದ್ದವರು ಮಾತಾಡಿಕೊಳ್ಳುತ್ತಿದ್ದರೆ.ಚಾಲಕ  ಮತ್ತು ನಿರ್ವಾಹಕ ಏನೂ ನಡೆಯಲಿಲ್ಲವೆಂಬಂತೆ ತಮ್ಮ ಕೆಲಸದಲ್ಲಿ ತಲ್ಲೀನರಾದರು. ಬಸ್ಸಿನ ಸಿಬ್ಬಂದಿ ಎಂದಾಕ್ಷಣ ನಮ್ಮ ಮನದಲ್ಲಿ ತಾತ್ಸಾರ ಭಾವನೆ ಮೂಡುತ್ತದೆ. ಆದರೆ ಅವರಲ್ಲಿಯೂ ಮಾನವೀಯತೆಯುಳ್ಳವರು ಇದ್ದಾರೆ ಎಂಬುದು ಈ ಘಟನೆಯಿಂದ ತಿಳಿದುಬರುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry