ಶನಿವಾರ, ಮೇ 8, 2021
19 °C

ಬಹಿರಂಗ ಚರ್ಚೆಗೆ ಕಾಂಗ್ರೆಸ್ ಸಿದ್ಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಕಾಗೋಡು ತಿಮ್ಮಪ್ಪ ಅವರು ಸಚಿವರಾಗಿದ್ದ ಸಮಯದಲ್ಲಿ ಈ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಕೆಲಸ ಎಷ್ಟು ಮತ್ತು ಕಳೆದ ಏಳು ವರ್ಷಗಳಲ್ಲಿ ಗೋಪಾಲಕೃಷ್ಣ ಬೇಳೂರು ಶಾಸಕರಾದ ನಂತರ ಆಗಿರುವ ಅಭಿವೃದ್ಧಿ ಕೆಲಸ ಯಾವುದು ಎನ್ನುವ ಬಗ್ಗೆ ಬಹಿರಂಗ ಚರ್ಚೆಗೆ ಕಾಂಗ್ರೆಸ್ ಸಿದ್ಧವಿದೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ತೀ.ನಾ. ಶ್ರೀನಿವಾಸ್ ಸವಾಲು ಹಾಕಿದರು. ಈಚೆಗೆ ಬೇಳೂರು  ಅಭಿವೃದ್ಧಿ ಕೆಲಸಗಳ ಕುರಿತು ಕಾಂಗ್ರೆಸ್ ಅನ್ನು ಬಹಿರಂಗ ಚರ್ಚೆಗೆ ಆಹ್ವಾನಿಸಿದ್ದಕ್ಕೆ ಪ್ರತಿಯಾಗಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಗೋಪಾಲಕೃಷ್ಣ ಬೇಳೂರು ಅವರು ನಗರದ ಗಾಂಧಿ ಮೈದಾನದಲ್ಲಿ ವೇದಿಕೆ ನಿರ್ಮಿಸಿ ಕಾಂಗ್ರೆಸ್ ಅನ್ನು ಆಹ್ವಾನಿಸಿದಲ್ಲಿ ಅಂಕಿ ಅಂಶಗಳೊಂದಿಗೆ ಚರ್ಚಿಸಲು ಮುಂದಾಗುವುದಾಗಿ ಹೇಳಿದರು.ಈ ಹಿಂದೆ ಪುರಸಭೆಯಲ್ಲಿ ಕಾಂಗ್ರೆಸ್  ಆಡಳಿತವಿದ್ದಾಗ ಸಾಗರ ನಗರಕ್ಕೆ ಶರಾವತಿ ಹಿನ್ನೀರಿನಿಂದ ಕುಡಿಯುವ ನೀರು ತರುವ ಯೋಜನೆಯ ಸರ್ವೇ ಕಾರ್ಯಕ್ಕೆ ರೂ15 ಲಕ್ಷ ನೀಡಲಾಗಿತ್ತು. ಏಳು ವರ್ಷಗಳ ನಂತರ ಯೋಜನೆಗೆ ಟೆಂಡರ್ ಕರೆದಿರುವುದನ್ನೇ ದೊಡ್ಡ ಸಾಧನೆ ಎಂದು ಶಾಸಕ ಬೇಳೂರು ಬಿಂಬಿಸುತ್ತಿರುವುದು ಹಾಸ್ಯಾಸ್ಪದ ಆಗಿದೆ ಎಂದು ಟೀಕಿಸಿದರು.ಸಾಗರ ನಗರಕ್ಕೆ ಕುಡಿಯುವ ನೀರು ತರುವ ಯೋಜನೆ ಘೋಷಿಸಿದ ಸಂದರ್ಭದಲ್ಲೇ   ಅಂಜನಾಪುರ ಜಲಾಶಯದಿಂದ ಶಿಕಾರಿಪುರಕ್ಕೆ ನೀರು ಹರಿಸುವ ಯೋಜನೆ ರೂಪಿಸಲಾಗಿತ್ತು. ಆ ಯೋಜನೆ ಈಗಾಗಲೇ ಮುಕ್ತಾಯಗೊಂಡು ವರ್ಷಗಳೆ ಕಳೆದಿದೆ. ಹೀಗಿದ್ದರೂ ಸಾಗರದ ವಿಷಯದಲ್ಲಿ ವಿಳಂಬವೇಕೆ ಎಂದು ಜನರಿಗೆ ಶಾಸಕರೇ ವಿವರಿಸಬೇಕು ಎಂದು ಹೇಳಿದರು.ತುಮರಿ ಸೇತುವೆ ನಿರ್ಮಿಸುವುದಾಗಿ ಆ ಭಾಗದ ಜನರಿಂದ ಮತ ಪಡೆದ ಬಿಜೆಪಿ ಈಗ ಆ ವಿಷಯದ ಬಗ್ಗೆ ಮಾತನಾಡುವುದನ್ನೇ ನಿಲ್ಲಿಸಿದೆ. ಕಾಮಗಾರಿ ನಡೆಸಲು ಯಾವ ಕಂಪೆನಿಗಳು ಮುಂದೆ ಬರುತ್ತಿಲ್ಲ ಎಂಬ ಸುಳ್ಳು ಮಾಹಿತಿಯನ್ನು ಶಾಸಕರು ನೀಡುವ ಮೂಲಕ ಜನರನ್ನು ಹಾದಿ ತಪ್ಪಿಸುತ್ತಿದ್ದಾರೆ ಎಂದು ದೂರಿದರು.ಸಾಗರದ ನಗರಸಭೆ ಖಾಸಗಿ ಬಸ್‌ನಿಲ್ದಾಣ ನಿರ್ಮಾಣದ ವಿಷಯದಲ್ಲಿ ಜನರಿಗೆ ವಂಚನೆ ಎಸಗಿದೆ. ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಪಕ್ಕದಲ್ಲಿ ಖಾಸಗಿ ನಿಲ್ದಾಣ ಸ್ಥಾಪಿಸಲು ರೂ50 ಲಕ್ಷ  ಮೀಸಲಿಡುವುದಾಗಿ ಹೇಳಿದ್ದ ನಗರಸಭೆ ಆಡಳಿತ ಕಳೆದ ಬಜೆಟ್‌ನಲ್ಲಿ ಈ ಬಗ್ಗೆ ಚಕಾರವೆತ್ತಿಲ್ಲ. ನಗರಸಭಾ ಸದಸ್ಯರೊಬ್ಬರಿಗೆ ಸಹಾಯ ಮಾಡುವ ಉದ್ದೇಶದಿಂದ ಬಿ.ಎಚ್. ರಸ್ತೆಯಲ್ಲಿ ಖಾಸಗಿ ಬಸ್‌ನಿಲ್ದಾಣ ನಿರ್ಮಿಸ ಲಾಗುತ್ತಿದೆ ಎಂದು ಆರೋಪಿಸಿದರು.ನಗರದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಹಣ ಮಂಜೂರಾತಿ, ಆಶ್ರಯ ನಿವೇಶನ ಹಾಗೂ ಮನೆ ವಿತರಣೆ, ಬಗರ್‌ಹುಕುಂ ಪ್ರಕರಣಗಳ ವಿಲೇವಾರಿ, ಪಡಿತರ ಚೀಟಿ ವಿತರಣೆ, ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿದವರಿಗೆ ಸಕಾಲದಲ್ಲಿ ಕೂಲಿ ಪಾವತಿ ಇವೆ ಮೊದಲಾದ ವಿಷಯಗಳಲ್ಲಿ ಜನರಿಗೆ ನ್ಯಾಯ ಒದಗಿಸಲು ಶಾಸಕರು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ದೂರಿದರು.ನಗರಸಭಾ ಸದಸ್ಯ ಸುಂದರ್ ಸಿಂಗ್, ಗುಡ್ಡೆಮನೆ ನಾಗರಾಜ್, ದೇವದೇವನ್,  ರವಿ ಜಂಬಗಾರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.