ಬಹಿರಂಗ ಚರ್ಚೆಗೆ ಬನ್ನಿ: ಕಾಗೋಡು ಸವಾಲು

7

ಬಹಿರಂಗ ಚರ್ಚೆಗೆ ಬನ್ನಿ: ಕಾಗೋಡು ಸವಾಲು

Published:
Updated:

ತುಮರಿ: ನಿರಂತರವಾಗಿ ಧ್ವನಿ ಎತ್ತುತ್ತಿರುವ ನನ್ನ ಹೋರಾಟವನ್ನು ಚುನಾವಣಾ ರಾಜಕೀಯ ಎಂದು ವ್ಯಂಗ್ಯವಾಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ ಸರ್ಕಾರದ ಸಾಧನೆಯನಿಟ್ಟುಕೊಂಡು ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸವಾಲು ಹಾಕಿದರು.ಅವರು ಶುಕ್ರವಾರ ಕರೂರು ಹೋಬಳಿಯ ವಿವಿಧ ಗ್ರಾಮಗಳಿಗೆ ಭೇಟಿ ನೀಡಿ ಜನರ ಕುಂದುಕೊರತೆ ಆಲಿಸಿ ಮಾತನಾಡಿದರು.ಅಧಿಕಾರ ದೊರೆತಾಗ ಜನರ ಹಿತಕ್ಕಾಗಿ ದುಡಿಯದೆ ಸ್ವಂತಕ್ಕಾಗಿ ಆಸ್ತಿ ಮತ್ತು ಹಣ ಮಾಡುವುದೇ ರಾಜಕೀಯ ಎಂದು ತಿಳಿದಿರುವ ಯಡಿಯೂರಪ್ಪ, ಅರಣ್ಯ ಮತ್ತು ಬಗರ್‌ಹುಕುಂ ಒತ್ತುವರಿ ಮಾಡಿದವರನ್ನು ಜೈಲಿಗೆ ಕಳುಹಿಸಲು ಕಾಯ್ದೆ ತಿದ್ದುಪಡಿ ಮಾಡಿದ ಹಿನ್ನಲೆ ಏನು ಎಂದು ಪ್ರಶ್ನಿಸಿದರು.ಬಡವರು ಮತ್ತು ದಲಿತರ ಪರವಾಗಿ ಅರಣ್ಯ ಹಕ್ಕು ಮತ್ತು ಬಗರ್‌ಹುಕುಂ ಕಾಯ್ದೆಗಳನ್ನು ವ್ಯವಸ್ಥಿತವಾಗಿ ಜಾರಿ ಮಾಡಿಕೊಟ್ಟರೆ ರಾಜಕೀಯ ನಿವೃತ್ತಿ ಘೋಷಿಸಿ ಯಡಿಯೂರಪ್ಪನವರ ಹಿಂಬಾಲಕನಾಗುವುದಾಗಿ ಸವಾಲು ಹಾಕಿದ ಅವರು, ಬಡವರ ಬಗ್ಗೆ ಕಾಳಜಿ ಇಲ್ಲದ ಯಡಿಯೂರಪ್ಪರ ರಾಜಕೀಯ ಭಾಷಣ `ಭೂತದ ಬಾಯಲ್ಲಿ ಭಗವದ್ಗೀತೆ~ ಇದ್ದಂತೆ ಎಂದು ಛೇಡಿಸಿದರು.ಸಾಗರ ತಾಲ್ಲೂಕಿನಲ್ಲಿ ಶೋಕಿ ಮಾಡುವುದೇ ರಾಜಕೀಯ ಎಂದು ಭಾವಿಸಿರುವ ಶಾಸಕ ಬೇಳೂರು ಗೋಪಾಲಕೃಷ್ಣ ರಾಜಕೀಯದ ಮೂಲ ಮೌಲ್ಯಗಳನ್ನು ಗಾಳಿಗೆ ತೂರಿದ್ದಾರೆ. ಬಗರ್‌ಹುಕುಂ, ಆಶ್ರಯ ಹಕ್ಕುಪತ್ರಗಳನ್ನು ನೀಡದೆ ಅಧಿಕಾರಿಗಳ ಮೂಲಕ ವಸೂಲಿ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.ಜಿಲ್ಲಾ ಪಂಚಾಯ್ತಿ ಸದಸ್ಯೆ ಪದ್ಮಾವತಿ ಚಂದ್ರಕುಮಾರ್, ರತ್ನಾಕರ್ ಹೊನಗೋಡು, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಷಣ್ಮುಖಪ್ಪ, ಮುಖಂಡರಾದ ಹೊಳೆಯಪ್ಪ, ಜೆ.ಡಿ. ಧನದತ್ತ ಜೈನ್ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry