ಬಹಿರ್ದೆಸೆ ಸ್ಥಳದಲ್ಲೆ ಶೌಚ ಜಾಗೃತಿ ಪ್ರಯತ್ನ!

7

ಬಹಿರ್ದೆಸೆ ಸ್ಥಳದಲ್ಲೆ ಶೌಚ ಜಾಗೃತಿ ಪ್ರಯತ್ನ!

Published:
Updated:

ಸಮುದಾಯ ನೇತೃತ್ವದ ಸಂಪೂರ್ಣ ನೈರ್ಮಲ್ಯ ಯೋಜನೆ

ಕೋಲಾರ: ಜಿಲ್ಲೆಯಲ್ಲಿ ಬಯಲು ಬಹಿರ್ದೆಸೆಗೆ ಹೋಗುವವರು ಇನ್ನು ನಿರಾಳವಾಗಿರುವಂತಿಲ್ಲ. ಬೆಳಗಿನ ಜಾವ 5 ಗಂಟೆಗೆ ಅವರಿರುವ ಸ್ಥಳಕ್ಕೆ ತೆರಳಿ ಜಾಗೃತಿ ಮೂಡಿಸುವ ಜನ ಸಜ್ಜಾಗುತ್ತಿದ್ದಾರೆ. ಶೌಚಾಲಯ ನಿರ್ಮಿಸಿಕೊಳ್ಳಲು ಸಹಾಯಧನ ಪಡೆದು ಸುಮ್ಮನಾಗುವಂತಿಲ್ಲ. ಶೌಚಾಲಯ ನಿರ್ಮಿಸಿದ್ದರೂ ಅನ್ಯ ಉದ್ದೇಶಗಳಿಗೆ ಬಳಸುವವರಿಗೂ ಜಾಗೃತಿ ಪಾಠ ಮಾಡಲಿದ್ದಾರೆ! ಐದು ವರ್ಷದ ಹಿಂದೆ ಆರಂಭವಾದ ಸಂಪೂರ್ಣ ಸ್ವಚ್ಛತಾ ಆಂದೋಲನವನ್ನು ತ್ವರಿತಗತಿಯಲ್ಲಿ ಅನುಷ್ಠಾನಗೊಳಿಸುವ ಸಲುವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಜಾರಿಗೆ ಬಂದಿರುವ,ಮಲವಿಸರ್ಜನೆ ಸ್ಥಳಕ್ಕೇ ತೆರಳಿ ಶೌಚಾಲಯದ ಮಹತ್ವಗಳ ಕುರಿತು ಜಾಗೃತಿ ಮೂಡಿಸುವ ಸಿಎಲ್‌ಟಿಎಸ್ (ಕಮ್ಯುನಿಟಿ ಲೆಡ್ ಟೋಟಲ್ ಸ್ಯಾನಿಟೇಶನ್- ಸಮುದಾಯ ನೇತೃತ್ವದ ಸಂಪೂರ್ಣ ನೈರ್ಮಲ್ಯ) ಯೋಜನೆಯನ್ನು ಅನುಷ್ಠಾನಕ್ಕೆ ತರಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.ಜಿಲ್ಲೆಯ 90 ಗ್ರಾಮ ಪಂಚಾಯಿತಿಗಳನ್ನು ಈ ಉದ್ದೇಶಕ್ಕೆಂದೇ ಆಯ್ಕೆ ಮಾಡಿಕೊಳ್ಳಲಾಗಿದೆ. ಬಂಗಾರಪೇಟೆ ತಾಲ್ಲೂಕಿನ ಎಲ್ಲ ಗ್ರಾ.ಪಂ.ಗಳನ್ನು ಆಯ್ಕೆ ಮಾಡಿರುವುದು ಗಮನಾರ್ಹ.ಕರ್ನಾಟಕವೂ ಸೇರಿದಂತೆ ದೇಶದ ಕೆಲವು ರಾಜ್ಯಗಳ ಬಹುತೇಕ ಜಿಲ್ಲೆಗಳಲ್ಲಿ ಯೋಜನೆ ಜಾರಿಯಾಗಿದೆ. ಜಾರಿಯಾಗಿರುವ ಹಲವು ಗ್ರಾಮ ಪಂಚಾಯಿತಿಗಳು ನಿರ್ಮಲ ಗ್ರಾಮ ಪುರಸ್ಕಾರವನ್ನೂ ಪಡೆದಿವೆ.ಸಂಪೂರ್ಣ ಸ್ವಚ್ಛತಾ ಆಂದೋಲನದ ಅನುಷ್ಠಾನದಲ್ಲಿ ಹಿಂದೆ ಉಳಿದಿರುವ ಕೋಲಾರ ಜಿಲ್ಲೆಯಲ್ಲೂ ಯೋಜನೆ ಜಾರಿಗೆ ಬರಲಿರುವುದು ವಿಶೇಷ.ಸಮುದಾಯವನ್ನೇ ಸ್ವಚ್ಛತೆ ಬಗ್ಗೆ ಸಜ್ಜುಗೊಳಿಸುವುದು, ಶೌಚಾಲಯ ಪ್ರೋತ್ಸಾಹ ಧನವನ್ನು ಪಡೆದು ಸುಮ್ಮನಿರುವ ಆಲೋಚನೆಯನ್ನು ಬಿಟ್ಟು ನಿಜವಾಗಿಯೂ ಶೌಚಾಲಯಗಳನ್ನು ನಿರ್ಮಿಸಿಕೊಳ್ಳಲು ಉತ್ತೇಜಿಸುವುದೇ ಈ ಯೋಜನೆ ವಿಶೇಷ. ಬೆಳಿಗ್ಗೆ 5 ಗಂಟೆಗೇ ಎದ್ದು ಬಯಲು ಬಹಿರ್ದೆಸೆ ಸ್ಥಳಗಳಿಗೆ ತೆರಳಿ ಜಾಗೃತಿ ಮೂಡಿಸುವುದು ಮತ್ತೊಂದು ವಿಶೇಷ.ಗ್ರಾಮ ಸಮುದಾಯದ ಗ್ರಾಮ ಪಂಚಾಯ್ತಿ ಸದಸ್ಯರು, ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರು, ಶಿಕ್ಷಕರು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆಯ ಸಿಬ್ಬಂದಿಯನ್ನು ಗ್ರಾಮ/ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸೇರಿಸಿ ಅವರಿಗೆ ಸಂಪೂರ್ಣ ಸ್ವಚ್ಛತಾ ಆಂದೋಲನ ಗುರಿ, ಉದ್ದೇಶಗಳು, ಆರೋಗ್ಯ, ಪರಿಸರ ನೈರ್ಮಲ್ಯ, ವೈಯಕ್ತಿಕ ಸ್ವಚ್ಛತೆ, ಘನ ಮತ್ತು ತ್ಯಾಜ್ಯ ವಸ್ತುಗಳ ವಿಲೇವಾರಿ ಮುಂತಾದ ವಿಷಯಗಳ ಬಗ್ಗೆ ಅರಿವು ಮೂಡಿಸುವುದು ಯೋಜನೆಯ ಮೊದಲ ಹಂತ.ನಂತರ ಅದೇ ಗ್ರಾಮದಲ್ಲಿ ಉತ್ತಮ ಹಾಗೂ ಸ್ವಚ್ಛ ಸ್ಥಳ ಮತ್ತು ಅತೀ ಕೆಟ್ಟ ಸ್ಥಳ ಅಂದರೆ ಜನರು ಬಹಿರ್ದೆಸೆಗೆ ಹೋಗುವ ಸ್ಥಳವನ್ನು ಗುರುತಿಸಲಾಗುವುದು.ಜನರಿಗೆ ಸ್ವಚ್ಛ ಸ್ಥಳದ ಮಹತ್ವವನ್ನು ವಿವರಿಸಿ ನಂತರ ಬಹಿರ್ದೆಸೆಗೆ ಉಪಯೋಗಿಸುವ ಸ್ಥಳದ ಹತ್ತಿರವೇ ಸಭೆಯನ್ನು ಸೇರಿಸಿ, ಬಯಲು ಮಲವಿಸರ್ಜನೆಯಿಂದ ಆಗುರ ಅಪಾಯಗಳ ಬಗ್ಗೆ ಪ್ರಾಯೋಗಿಕವಾಗಿ ಜಾಗೃತಿ ಮೂಡಿಸುವುದು, ಶೌಚಾಲಯ ನಿರ್ಮಾಣಕ್ಕೆ ಪ್ರೋತ್ಸಾಹಿಸುವುದು ಎರಡನೇ ಹಂತ.ಯೋಜನೆಯಡಿ ಆಯ್ಕೆ ಮಾಡಿಕೊಳ್ಳಲಾದ ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲಿ ಈ ಕಾರ್ಯಕ್ರಮ ಅನುಷ್ಠಾನಕ್ಕೆ ಬರಲಿದೆ. ಅದಕ್ಕೆಂದೇ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಆಯ್ದವರಿಗೆ ತರಬೇತಿಯನ್ನು ನೀಡಲಾಗುತ್ತಿದೆ. ತರಬೇತುದಾರರಿಗೆ ಕಳೆದ ಸೆಪ್ಟೆಂಬರ್‌ನಲ್ಲಿ ಕಾಮಸಮುದ್ರದ ಮೈರಾಡ ಸಂಸ್ಥೆಯಲ್ಲಿ ತರಬೇತಿಯನ್ನೂ ನೀಡಲಾಗಿದೆ.ಕೋಲಾರ ತಾಲ್ಲೂಕಿನಲ್ಲಿ 16, ಮಾಲೂರಿನಲ್ಲಿ 15, ಬಂಗಾರಪೇಟೆಯಲ್ಲಿ 34, ಶ್ರೀನಿವಾಸಪುರದಲ್ಲಿ 10, ಮುಳಬಾಗಲಿನಲ್ಲಿ 15 ಗ್ರಾಮ ಪಂಚಾಯತಿಗಳನ್ನು ಆಯ್ಕೆ ಮಾಡಲಾಗಿದೆ.ಬಂಗಾರಪೇಟೆಯ 37 ಗ್ರಾಪಂಗಳ ಪೈಕಿ 3 ಗ್ರಾಪಂಗಳು ಈಗಾಗಲೇ ನಿರ್ಮಲ ಗ್ರಾಮ ಪುರಸ್ಕಾರವನ್ನು ಪಡೆದಿವೆ. ಹೀಗಾಗಿ ಇಡೀ ತಾಲ್ಲೂಕನು ಸ್ವಚ್ಛಗ್ರಾಮವನ್ನಾಗಿಸುವ ದೃಷ್ಟಿಯಿಂದ ಎಲ್ಲ ಗ್ರಾಪಂಗಳನ್ನೂ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ ಸೋಮವಾರ ‘ಪ್ರಜಾವಾಣಿ’ಗೆ ತಿಳಿಸಿದರು.ಕೆಲವು ಗ್ರಾಪಂ ಜನಪ್ರತಿನಿಧಿಗಳ ಮನೆಯಲ್ಲೂ ಶೌಚಾಲಯಗಳಿಲ್ಲದಿರುವುದು ಬೆಳಕಿಗೆ ಬಂದಿದೆ. ಅಂಥವರೂ ಸೇರಿದಂತೆ ಎಲ್ಲ ಹಳ್ಳಿಗರಲ್ಲಿ ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸುವುದು, ನಿರ್ಮಿಸಲಾದ ಶೌಚಾಲಯಗಳನ್ನು ನಿಜವಾದ ಉದ್ದೇಶಕ್ಕೆ ಬಳಸುವಂತೆ ಪ್ರೇರೇಪಿಸುವುದೇ ಯೋಜನೆಯ ಉದ್ದೇಶ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry