ಬುಧವಾರ, ನವೆಂಬರ್ 13, 2019
21 °C

ಬಹಿಷ್ಕಾರದ ಪ್ರತಿಫಲ ಇಳಿಮನೆ ಸೇತುವೆ

Published:
Updated:
ಬಹಿಷ್ಕಾರದ ಪ್ರತಿಫಲ ಇಳಿಮನೆ ಸೇತುವೆ

ಸಿದ್ದಾಪುರ:  ಈ ಸೇತುವೆಗೂ ಚುನಾವಣೆಗೂ ಸಂಬಂಧವಿದೆ. ಹಲವು ದಶಕಗಳ ಬೇಡಿಕೆಯಾಗಿದ್ದ ಈ ಸೇತುವೆ ಸ್ಥಳೀಯರ ಚುನಾವಣೆ ಬಹಿಷ್ಕಾರದ ನಂತರವೇ ಈಡೇರಿದ್ದು ವಿಶೇಷ.ಈ ಇಳಿಮನೆ ಹೊಳೆಯ ಸೇತುವೆ ನಿರ್ಮಾಣದ ಬೇಡಿಕೆಯ ಸಲುವಾಗಿ ಮತದಾನದಂತಹ ಪವಿತ್ರ ಕರ್ತವ್ಯದಿಂದಲೇ ಜನತೆ ವಿಮುಖರಾಗುವ ಸಂದರ್ಭ ಬಂದಿದ್ದೂ ವಿಪರ್ಯಾಸದ ಸಂಗತಿ. ತಾಲ್ಲೂಕಿನ ಇಳಿಮನೆ, ನೈಗಾರ ಮತ್ತಿತರ ಊರುಗಳ ಜನರಿಗೆ ಮುಖ್ಯರಸ್ತೆಗೆ ಅಥವಾ ಪಟ್ಟಣಕ್ಕೆ ಬರಲು ಇಳಿಮನೆ ಹೊಳೆ ಅಡ್ಡಿಯಾಗಿತ್ತು. ಮಳೆಗಾಲದಲ್ಲಿ ಈ ಗ್ರಾಮಗಳ ನೂರಾರು  ಜನರ ಸಂಕಟ ಹೇಳತೀರದಾಗಿತ್ತು. ತುಂಬಿ ಹರಿಯುವ ಹೊಳೆಯನ್ನು ದಾಟಲು `ಸಂಕದ ಸರ್ಕಸ್' ಈ ಹಳ್ಳಿಗರಿಗೆ ಅನಿವಾರ್ಯವಾಗಿತ್ತು.ಆರೋಗ್ಯ ಕೆಟ್ಟರೆ ಕಂಬಳಿ ಜೋಲಿಯೇ ಗತಿಯಾದರೆ, ಶಾಲೆ-ಕಾಲೇಜುಗಳಿಗೆ ಹೋಗುವ ಮಕ್ಕಳು ವಾಪಸು ಬರುವವರೆಗೆ ಮನೆಯ ಜನರಿಗೆ ಆತಂಕ. ಇಂತಹ ಪರಿಸ್ಥಿತಿಯಿಂದ ಬಳಲಿದ್ದ ಈ ಭಾಗದ ಜನತೆ ಪ್ರತಿನಿಧಿಗಳ ಮುಂದೆ ಈ ಸೇತುವೆ ಮಾಡಿಕೊಡಲು ಬೇಡಿಕೆ ಮಂಡಿಸುತ್ತಲೇ ಬಂದಿದ್ದರು.ಆದರೆ ಅವರ ಬೇಡಿಕೆ ಮಾತ್ರ ಬೇಡಿಕೆಯಾಗಿಯೆ ಉಳಿದಿತ್ತು. ಆಸೆ ಹುಟ್ಟಿಸಿ ನಿರಾಸೆ ಮಾಡುವ ರೀತಿಯಲ್ಲಿ 2007ರಲ್ಲಿ  ಜನಪ್ರತಿನಿಧಿಗಳ ಉಪಸ್ಥಿತಿಯಲ್ಲಿ ಸೇತುವೆಗೆ ಶಂಕುಸ್ಥಾಪನೆಯನ್ನು ಮಾಡಲಾಗಿತ್ತು. ಸೇತುವೆಯ ಶಂಕುಸ್ಥಾಪನೆ ಆಗಿದ್ದರಿಂದ ಈ ಬಾರಿ ಮಳೆಗಾಲದಲ್ಲಿ ಕಷ್ಟಪಡಬೇಕಾಗಿಲ್ಲ ಎಂಬ ಸಂತಸವೂ ಜನರ ಮನಸ್ಸಲ್ಲಿ ಮೂಡಿತ್ತು. ಆದರೆ ಯಾವುದೋ ಕಾರಣದಿಂದ ಸೇತುವೆ ನಿರ್ಮಾಣ ಆರಂಭವಾಗಲೇ ಇಲ್ಲ.ತಮ್ಮ ಬೇಡಿಕೆ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತೆ ನಿಷ್ಫಲಗೊಂಡಿದ್ದರಿಂದ ರೊಚ್ಚಿಗೆದ್ದ ಇಳಿಮನೆ, ನೈಗಾರ, ಬೂದಗಿತ್ತಿ ಮತ್ತಿತರ ಗ್ರಾಮಗಳ ಜನರು ಕಳೆದ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೆ ಬಂದರು. ಅದರಂತೆ ಇಳಿಮನೆ ಶಾಲೆಯ ಮತಗಟ್ಟೆಯಲ್ಲಿದ್ದ 279 ಮತಗಳಲ್ಲಿ ಒಂದೂ ಮತ ಚಲಾವಣೆ ಆಗಲಿಲ್ಲ. ಆಗ ಒಮ್ಮೆಲೆ ಜನ ಪ್ರತಿನಿಧಿಗಳ ಚಿತ್ತವೂ ಇತ್ತ ಹರಿಯಿತು.ಇಳಿಮನೆ ಮತಗಟ್ಟೆ ವ್ಯಾಪ್ತಿಯ ಮತದಾರರುಜನಪ್ರತಿನಿಧಿಗಳ ಲಕ್ಷ್ಯವನ್ನು ಮತ್ತೆ ಸೆಳೆಯಲು ಆ ನಂತರ ನಡೆದ ಜಿಲ್ಲಾ ಪಂಚಾಯ್ತಿ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯನ್ನು ಬಹಿಷ್ಕಾರ ಮಾಡುವುದಕ್ಕೂ ಮನಸ್ಸು ಮಾಡಿದ್ದರು. ಆದರೆ ಈ ಬಾರಿ ಸಂಪೂರ್ಣ ಒಮ್ಮತ ಬಾರದ ಹಿನ್ನೆಲೆಯಲ್ಲಿ ಆ ನಿರ್ಧಾರವನ್ನು ಕೈ ಬಿಟ್ಟರು.ಈ ಮಧ್ಯೆ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಪಟ್ಟಣದ ಪ್ರವಾಸಿ ಗೃಹದಲ್ಲಿ ಈಭಾಗದ ಪ್ರಮುಖರು ಸೇತುವೆ ನಿರ್ಮಾಣದ ಬಗ್ಗೆ ಬೇಡಿಕೆ ಸಲ್ಲಿಸಿದರು. ಇದರ ಫಲವಾಗಿಯೋ ಎಂಬಂತೆ 2011ರ ನವೆಂಬರ್ 28ರಂದು ಸೇತುವೆಯ ಶಂಕುಸ್ಥಾಪನೆಯೂ ನೆರವೇರಿತು. ಅಂದು ಆರಂಭವಾದ ಇಳಿಮನೆ ಸೇತುವೆ ಕಾಮಗಾರಿ ಈಗ ಬಹುತೇಕ ಪೂರ್ಣಗೊಂಡಿದೆ. ಈ ಸೇತುವೆ ನಿರ್ಮಾಣವನ್ನು ಸುಮಾರು ರೂ 4 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ಮಾಡಿದ್ದು, 10 ಕಿ.ಮೀ. ದೂರದ ರಸ್ತೆಯನ್ನೂ ಸುಧಾರಣೆ ಮಾಡಲಾಗಿದೆ. ಅದರಲ್ಲಿ 2.7 ಕಿ.ಮೀ ರಸ್ತೆ ಡಾಂಬರೀಕರಣಗೊಂಡಿದೆ.`ಸಚಿವ ಕಾಗೇರಿ ಅವರು ಹೆಚ್ಚಿನ ಮುತವರ್ಜಿ ವಹಿಸಿದ್ದರಿಂದ ಸೇತುವೆ ನಿರ್ಮಾಣವಾಗಿದೆ. ನಮ್ಮ ಬೇಡಿಕೆ ಈಡೇರಿದೆ. ಆದ್ದರಿಂದ ಇನ್ನುಮುಂದೆ ಚುನಾವಣೆ ಬಹಿಷ್ಕಾರದಂತಹ ಕ್ರಮದ ಮೊರೆ ಹೋಗುವ ಅಗತ್ಯವಿಲ್ಲ' ಎನ್ನುತ್ತಾರೆ ಸ್ಥಳೀಯರು.ಆದ್ದರಿಂದ ತಾಲ್ಲೂಕಿನ ಇಳಿಮನೆ ಮತಗಟ್ಟೆಯಲ್ಲಿ ಈ ಬಾರಿ ಬೇರೆಯದ್ದೆ ಆದ ಚಿತ್ರ ಕಾಣಬಹುದು.  ಚುನಾವಣೆಯ ಮತದಾನ ಇಲ್ಲಿ ಅತ್ಯಂತ ಉತ್ಸಾಹದಿಂದ ನಡೆಯುವುದಕ್ಕೆ ಯಾವುದೇ ಅಡೆತಡೆಯಾಗುವ ಸಂಭವವಿಲ್ಲ.

 

ಪ್ರತಿಕ್ರಿಯಿಸಿ (+)