ಬಹಿಷ್ಕಾರ: ನಾಲ್ವರು ಕಾರ್ಮಿಕರ ಮೇಲೆ ಹಲ್ಲೆ

7
ಶಾಂತಿಸಭೆ ನಡೆಸಿದರೂ ನಿಲ್ಲದ ವಿವಾದ

ಬಹಿಷ್ಕಾರ: ನಾಲ್ವರು ಕಾರ್ಮಿಕರ ಮೇಲೆ ಹಲ್ಲೆ

Published:
Updated:

ಮದ್ದೂರು: ಉಪ್ಪಾರದೊಡ್ಡಿಯಲ್ಲಿ ಈಚೆಗೆ ನಡೆದಿದ್ದ ಸಾಮೂಹಿಕ ಬಹಿಷ್ಕಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಕೃಷಿ ಕೂಲಿಕಾರರ ಮೇಲೆ ಗ್ರಾಮದ ಮುಖಂಡರು ಹಲ್ಲೆ ನಡೆಸಿರುವ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.ಎರಡು ತಿಂಗಳ ಹಿಂದೆ ಗ್ರಾಮದ ಮುಖಂಡರಿಂದ ಸಾಮೂಹಿಕ ಬಹಿಷ್ಕಾರದ ಶಿಕ್ಷೆಗೆ ಒಳಗಾಗಿದ್ದ ಪುಟ್ಟರಾಮು ಸೌಭಾಗ್ಯಮ್ಮ ದಂಪತಿಗಳು ಕಬ್ಬು ಕಡಿಯುವ ಮೇಸ್ತ್ರಿಗಳಾಗಿ ಕೆಲಸ ಮಾಡುತ್ತಿದ್ದು, ಬೆಳಿಗ್ಗೆ ಇವರ ಉಸ್ತುವಾರಿಯಲ್ಲಿ ಕಬ್ಬು ಕಡಿಯಲು ತೆರಳುತ್ತಿದ್ದ ಕೂಲಿಕಾರರಾದ ದೇವಿರಮ್ಮ, ಮಹದೇವು, ರಾಚಯ್ಯ, ಸಾಕಮ್ಮ ಅವರುಗಳನ್ನು ಗ್ರಾಮದ ಮುಖಂಡ ಕುಳ್ಳಯ್ಯ, ಅವರ ಮಗ ಶಶಿಕುಮಾರ್, ಅಣ್ಣನ ಮಗ ಕುಮಾರ, ಆತನ ಹೆಂಡತಿ ಜಯಮ್ಮ ಅಡ್ಡಗಟ್ಟಿದರು.`ಬಹಿಷ್ಕಾರಕ್ಕೆ ಒಳಗಾದ ಪುಟ್ಟರಾಮು ಸೌಭಾಗ್ಯಮ್ಮ ಅವರೊಂದಿಗೆ ಕಬ್ಬು ಕಡಿಯಲು ಹೋಗುವಂತಿಲ್ಲ. ಹೋದರೆ ಅವರಿಗೆ ಆದ ಗತಿಯು ನಿಮಗೆ ಕಾದಿದೆ' ಎಂದು ಧಮಕಿ ಹಾಕಿದರು. ಅಲ್ಲದೇ ಅವರ ಮೇಲೆ ಹಲ್ಲೆ ನಡೆಸಿದರು. ನಾಲ್ವರನ್ನು ಅಲ್ಲಿಯೇ ಇದ್ದ ಚರಂಡಿಯೊಂದಕ್ಕೆ ತಳ್ಳಿ ಗಾಯಗೊಳಿಸಿದರು' ಎಂದು ಕಾರ್ಮಿಕರು ದೂರಿನಲ್ಲಿ ತಿಳಿಸಿದ್ದಾರೆ.ದೌರ್ಜನ್ಯ ನಿಂತಿಲ್ಲ: `ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಶಾಂತಿ ಸೌಹಾರ್ದ ಸಭೆ ನಡೆಸಿ ತೆರಳಿದ ಒಂದು ತಿಂಗಳಿಂದಲೇ ಮತ್ತೇ ನಮ್ಮ ಮೇಲಿನ ಬಹಿಷ್ಕಾರ ಮುಂದುವರಿದಿದೆ. ಅಲ್ಲದೇ ನಮ್ಮಂದಿಗೆ ಯಾವ ಕೂಲಿಕಾರರು ಕೆಲಸಕ್ಕೆ ಹೋಗದಂತೆ ನಿರ್ಬಂಧ ಹೇರಲಾಗಿದೆ. ಈ ನಾಲ್ವರು ನಮ್ಮಂದಿಗೆ ಕಬ್ಬು ಕಡಿಯಲೆಂದು ಹೋಗುತ್ತಿದ್ದಾಗ ಯಜಮಾನ ಕುಳ್ಳಯ್ಯನ ಕುಟುಂಬವರ್ಗ ಮೇಲೆ ಅಮಾನವೀಯ ಹಲ್ಲೆ ನಡೆಸಿದೆ.ಅಲ್ಲದೇ ನಮಗೂ ಅವರು ಪ್ರಾಣ ಭಯವೊಡ್ಡಿದ್ದಾರೆ. ನಮಗೆ ಸೂಕ್ತ ರಕ್ಷಣೆ ನೀಡಿ' ಎಂದು ಪುಟ್ಟರಾಮು ಸೌಭಾಗ್ಯಮ್ಮ ದಂಪತಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.ದೂರು ಸ್ವೀಕರಿಸಿದ ಪಿಎಸ್‌ಐ ಚಂದ್ರಶೇಖರ್ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry