ಬಹಿಷ್ಕಾರ ಮಧ್ಯೆ 19 ಮಸೂದೆಗಳಿಗೆ ಒಪ್ಪಿಗೆ

7

ಬಹಿಷ್ಕಾರ ಮಧ್ಯೆ 19 ಮಸೂದೆಗಳಿಗೆ ಒಪ್ಪಿಗೆ

Published:
Updated:

ಸುವರ್ಣ ವಿಧಾನಸೌಧ (ಬೆಳಗಾವಿ): ವಿಧಾನಮಂಡಲದ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಗುರುವಾರ ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಬಹಿಷ್ಕಾರದ ನಡುವೆಯೇ 19 ಮಸೂದೆಗಳಿಗೆ ವಿಧಾನಸಭೆ ಒಪ್ಪಿಗೆ ನೀಡಿತು. ಈ ಪೈಕಿ ಒಂಬತ್ತು ಮಸೂದೆಗಳಿಗೆ ಆಡಳಿತ ಪಕ್ಷದ ಹಲವು ಸದಸ್ಯರ ಪ್ರಬಲ ವಿರೋಧ ವ್ಯಕ್ತವಾಯಿತು.ಸಿತಾರ್ ವಾದಕ ಪಂಡಿತ್ ರವಿಶಂಕರ್ ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿ ಕಲಾಪದ ಆರಂಭದಲ್ಲಿ ನಿರ್ಣಯ ಅಂಗೀಕರಿಸಲಾಯಿತು. ತಕ್ಷಣವೇ ಮಸೂದೆಗಳ ಮಂಡನೆಗೆ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮುಂದಾದರು. ಆದರೆ, ಅದನ್ನು ವಿರೋಧಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶುಕ್ರವಾರವೂ ಕಲಾಪ ನಡೆಸುವ ತೀರ್ಮಾನ ಕೈಗೊಳ್ಳುವಂತೆ ಒತ್ತಾಯಿಸಿದರು.`ಉತ್ತರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಪ್ರಮುಖವಾಗಿರುವ ಕೃಷ್ಣಾ ನದಿ ನೀರಿನ ಬಳಕೆ ಕುರಿತು ಚರ್ಚೆ ಆರಂಭವಾಗಿದೆ. ಇನ್ನೂ ಪೂರ್ಣಗೊಂಡಿಲ್ಲ. ಅದಕ್ಕೆ ಸರ್ಕಾರ ಉತ್ತರ ನೀಡಿಲ್ಲ. ಅಕ್ರಮ ಗಣಿಗಾರಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಅಕ್ರಮಗಳ ಕುರಿತ ಮಹಾಲೇಖಪಾಲರ (ಸಿಎಜಿ) ವರದಿ ಮಂಡನೆ ಆಗಿದೆ. ಆ ಬಗ್ಗೆಯೂ ಸದನದಲ್ಲಿ ಚರ್ಚೆ ನಡೆಯಬೇಕು. ಈ ಉದ್ದೇಶದಿಂದ ಶುಕ್ರವಾರವೂ ಅಧೀವೇಶನ ನಡೆಸಬೇಕು' ಎಂದು ಆಗ್ರಹಿಸಿದರು.`ಸದನದಲ್ಲಿ ಚರ್ಚಿಸಬೇಕಾದ ವಿಷಯಗಳು ಇನ್ನೂ ಬಾಕಿ ಇವೆ. ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಸರ್ಕಾರ ಯಾವುದೇ ಹೇಳಿಕೆ ನೀಡಿಲ್ಲ. ಇಂತಹ ಸ್ಥಿತಿಯಲ್ಲಿ ತರಾತುರಿಯಲ್ಲಿ ಮಸೂದೆಗಳಿಗೆ ಅಂಗೀಕಾರ ಪಡೆದು ಹೊರಟುಹೋದರೆ ರಾಜ್ಯದ ಜನತೆಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಎಲ್ಲವನ್ನೂ ಪರಿಗಣಿಸಿ ಇನ್ನೂ ಒಂದು ದಿನ ಕಲಾಪ ನಡೆಸುವ ನಿರ್ಧಾರ ಕೈಗೊಳ್ಳಬೇಕು' ಎಂದು ಸಿದ್ದರಾಮಯ್ಯ ವಾದಿಸಿದರು.ಆದರೆ, ವಿರೋಧ ಪಕ್ಷದ ನಾಯಕರ ಬೇಡಿಕೆಯನ್ನು ತಳ್ಳಿಹಾಕಿದ ಈಶ್ವರಪ್ಪ, `ಕಲಾಪಗಳ ಪಟ್ಟಿಯ ಪ್ರಕಾರ ಸದನ ನಡೆಯಲಿ. ಬುಧವಾರವೇ ಕಲಾಪ ಅಂತ್ಯಗೊಳ್ಳಬೇಕಿತ್ತು. ಒಂದು ದಿನ ಹೆಚ್ಚುವರಿಯಾಗಿ ಸದನ ನಡೆಯುತ್ತಿದೆ. ಈಗ ಇನ್ನೂ ಒಂದು ದಿನ ನಡೆಸಲು ಸಾಧ್ಯವಿಲ್ಲ. ಬೇಕಿದ್ದರೆ ನಿಮ್ಮ ಬೇಡಿಕೆಯಂತೆ ಜನವರಿಯಲ್ಲಿ ವಿಶೇಷ ಅಧಿವೇಶನ ನಡೆಸೋಣ' ಎಂದರು. ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಕೂಡ ವಿಪಕ್ಷಗಳ ಬೇಡಿಕೆಗೆ ಮಣಿಯಲಿಲ್ಲ.ಕೆಲಕಾಲ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಹಗ್ಗಜಗ್ಗಾಟ ನಡೆಯಿತು. ಕೊನೆಗೂ ಪ್ರತಿಪಕ್ಷಗಳ ಬೇಡಿಕೆಯನ್ನು ಸರ್ಕಾರ ಒಪ್ಪಲಿಲ್ಲ. ಸಿದ್ದರಾಮಯ್ಯ ಅವರು, ಕಲಾಪ ಬಹಿಷ್ಕರಿಸುತ್ತಿರುವುದಾಗಿ ಪ್ರಕಟಿಸಿ ಹೊರನಡೆದರು. `ಸರ್ಕಾರ ತರಾತುರಿಯಲ್ಲಿ ಕಲಾಪ ಮುಗಿಸಲು ಪ್ರಯತ್ನಿಸುತ್ತಿದೆ. ಇವರಿಗೆ ಚರ್ಚೆ ಬೇಕಿಲ್ಲ. ಸಂಸದೀಯ ವ್ಯವಸ್ಥೆಯಲ್ಲಿ ನಂಬಿಕೆ ಇಲ್ಲ' ಎಂದು ಜರಿದು ಕಾಂಗ್ರೆಸ್ ಶಾಸಕರೊಂದಿಗೆ ಸದನದಿಂದ ಹೊರ ನಡೆದರು. ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಕೂಡ ಬಹಿಷ್ಕಾರ ತೀರ್ಮಾನ ಪ್ರಕಟಿಸಿ ತಮ್ಮ ಶಾಸಕರ ಜೊತೆ ನಿರ್ಗಮಿಸಿದರು.ನಂತರ ಒಂದು ಗಂಟೆಯ ಅವಧಿಯಲ್ಲೇ 13 ಮಸೂದೆಗಳನ್ನು ಅಂಗೀಕರಿಸಲಾಯಿತು. ನಗರ ಪ್ರದೇಶಗಳಲ್ಲಿ ಬಡವರು ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿ ಮನೆ ನಿರ್ಮಿಸಿರುವುದನ್ನು ಸಕ್ರಮ ಮಾಡುವುದು, `ಕರ್ನಾಟಕ ಗೋವಧೆ ಪ್ರತಿಬಂಧಕ ಮತ್ತು ಜಾನುವಾರು ಪರಿರಕ್ಷಣೆ' ಮಸೂದೆ ಸೇರಿದಂತೆ ನಾಲ್ಕು ಮಸೂದೆಗಳನ್ನು ವಿರೋಧ ಇಲ್ಲದೇ ಅಂಗೀಕರಿಸಲಾಯಿತು. ಉನ್ನತ ಸಚಿವ ಸಿ.ಟಿ.ರವಿ ಮಂಡಿಸಿದ 13 ಮಸೂದೆಗಳನ್ನು ಒಂದು ಗುಂಪಿನ ಶಾಸಕರು ಬಲವಾಗಿಯೇ ವಿರೋಧಿಸಿದರು. ವಿರೋಧದ ನಡುವೆಯೂ ಈ ಮಸೂದೆಗಳಿಗೆ ಸದನದ ಒಪ್ಪಿಗೆ ದೊರೆಯಿತು.ಪೂರಕ ಬಜೆಟ್‌ಗೆ ಅನುಮೋದನೆ

ಸುವರ್ಣ ವಿಧಾನಸೌಧ (ಬೆಳಗಾವಿ): ರೂ 9,197 ಕೋಟಿ ಮೊತ್ತದ ಪೂರಕ ಬಜೆಟ್‌ಗೆ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಗುರುವಾರ ವಿಧಾನ ಪರಿಷತ್‌ನಲ್ಲಿ ಒಪ್ಪಿಗೆ ಪಡೆದರು.

ರೈತರ ಸಾಲ ಮನ್ನಾ, ಗ್ರಾಮೀಣ ವಿದ್ಯುದೀಕರಣ ಮೊದಲಾದ ಪ್ರಮುಖ ಯೋಜನೆಗಳ ಅನುಷ್ಠಾನಕ್ಕಾಗಿ ಈ ಪೂರಕ ಬಜೆಟ್ ಮಂಡಿಸಲಾಗಿದೆ ಎಂದು ತಿಳಿಸಿದರು. ತೆರಿಗೆ ಸಂಗ್ರಹ ಕಾರ್ಯ ತೃಪ್ತಿಕರವಾಗಿದ್ದು, ರಾಜ್ಯದ ಹಣಕಾಸು ಸ್ಥಿತಿ ಉತ್ತಮವಾಗಿದೆ ಎಂದು ಅವರು ಪ್ರತಿಪಾದಿಸಿದರು.ಇದಕ್ಕೂ ಮುನ್ನ ನಡೆದ ಚರ್ಚೆಯಲ್ಲಿ ವಿರೋಧ ಪಕ್ಷದ ಸದಸ್ಯರು, `ಆರ್ಥಿಕ ಶಿಸ್ತು ತರಲು ಸರ್ಕಾರ ವಿಫಲವಾಗಿದೆ' ಎಂದು ಹರಿಹಾಯ್ದರು. `ಗೊತ್ತು-ಗುರಿ ಇಲ್ಲದೆ ಸಾಲ ಮನ್ನಾದಂತಹ ಜನಪ್ರಿಯ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವ ಕಾರಣ, ಸರ್ಕಾರದ ಮೇಲೆ ಹೆಚ್ಚುವರಿ ಹೊರೆ ಬಿದ್ದಿದೆ. ಸಹಕಾರಿ ಕ್ಷೇತ್ರವನ್ನು ಇಂತಹ ಯೋಜನೆಗಳು ಭ್ರಷ್ಟಗೊಳಿಸಿವೆ' ಎಂದು ಜೆಡಿಎಸ್‌ನ ಎಂ.ಸಿ. ನಾಣಯ್ಯ ದೂರಿದರು.`ಲಕ್ಷ ಕೋಟಿ ರೂಪಾಯಿಗೂ ಅಧಿಕ ಸಾಲ ಮಾಡಿರುವ ಸರ್ಕಾರ, ರಾಜ್ಯದ ಮೇಲೆ ದೊಡ್ಡ ಹೊರೆ ಹಾಕಿದೆ' ಎಂದು ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು. ಪೂರಕ ಬಜೆಟ್‌ಗೆ ಬುಧವಾರವೇ ವಿಧಾನ ಸಭೆಯಲ್ಲಿ ಅನುಮೋದನೆ ಸಿಕ್ಕಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry