ಶನಿವಾರ, ನವೆಂಬರ್ 23, 2019
17 °C

ಬಹುಕಾಲ ಉಳಿಯದ ಕಾರಂತರ ಆಶಯ: ಬಿ.ಸುರೇಶ್

Published:
Updated:
ಬಹುಕಾಲ ಉಳಿಯದ ಕಾರಂತರ ಆಶಯ: ಬಿ.ಸುರೇಶ್

ಬೆಂಗಳೂರು: `ತೇರು ಕಟ್ಟಲು, ಎಳೆಯಲು ಸಾಮಾನ್ಯವಾಗಿ ಜನರಿರುತ್ತಾರೆ, ಆದರೆ, ಉತ್ಸವ ಮುಗಿದ ಮೇಲೆ ಕಸ ಗುಡಿಸಲು ಯಾರೊಬ್ಬರೂ ಇರುವುದಿಲ್ಲ. ಅಂತೆಯೇ ಬಿ.ವಿ.ಕಾರಂತರ ಉತ್ಸವವಾದ ಆಶಯ ಬಹುಕಾಲ ಉಳಿಯಲಿಲ್ಲ ಎಂಬುದಕ್ಕೆ ಪ್ರಸ್ತುತ ರಂಗಾಯಣ ಎದುರಿಸುತ್ತಿರುವ ಸವಾಲುಗಳೇ ಸಾಕ್ಷಿ' ಎಂದು ನಿರ್ದೇಶಕ ಬಿ.ಸುರೇಶ್ ಅಭಿಪ್ರಾಯಪಟ್ಟರು.ರಂಗಭೂಮಿ ಕ್ರಿಯಾಸಮಿತಿಯು ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ಆಯೋಜಿಸಿದ್ದ `ಸ್ವಾಯತ್ತ ರಂಗಾಯಣ'ವಿಚಾರಸಂಕಿರಣದಲ್ಲಿ ಅವರು ಮಾತನಾಡಿ, `ಉತ್ಸವವಾದಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದ ಕಾರಂತರು ಇದೇ ಮನಸ್ಥಿತಿಯಲ್ಲಿ ರಂಗಾಯಣ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದರಿಂದ ಈ ಪರಿಸ್ಥಿತಿ ಎದುರಾಗಿರಬಹುದು' ಎಂದು ಪ್ರತಿಪಾದಿಸಿದರು.`ರಂಗಭೂಮಿ ಸದಾ ಚಲನಶೀಲವಾಗಿರಬೇಕು. ವರ್ಗಾವಣೆ ಆದ ಮಾತ್ರಕ್ಕೆ ಕಲಾವಿದರು ಮನೆಯಲ್ಲಿ ಕುಳಿತುಕೊಂಡು ಕಾಲ ಕಳೆಯುವುದರಿಂದ ರಂಗಭೂಮಿ ಕಲಿಸುವ ಚಲನಶೀಲತೆ ಬಗ್ಗೆಯೇ ಪ್ರಶ್ನೆ ಏಳುತ್ತದೆ. ಅಲ್ಲದೇ ಕಲಾವಿದರು ಅತಂತ್ರ ಸ್ಥಿತಿಯಲ್ಲಿದ್ದಾಗ ಮಾತ್ರ ಸೃಜನಶೀಲತೆಯಿಂದ ಮುಂದುವರಿಯಲು ಸಾಧ್ಯವಿದೆ' ಎಂದು ತಿಳಿಸಿದರು.`25 ವರ್ಷಗಳಿಂದ ರಂಗಾಯಣದಲ್ಲಿ ಪ್ರದರ್ಶನಗೊಂಡ ಬಹುತೇಕ ನಾಟಕಗಳಿಗೆ ಹೂಡಿದ ಹಣವನ್ನು ವಾಪಸ್ ಪಡೆಯಲು ಸಾಧ್ಯವಾಗಿಲ್ಲ. ಇದೇ ಮಾತನ್ನು ರಚನಾತ್ಮಕ ನೆಲೆಯಲ್ಲಿ ರೂಪುಗೊಂಡ `ನೀನಾಸಂ' ಸಂಸ್ಥೆಗೆ ಅನ್ವಯಿಸಲು ಆಗುವುದಿಲ್ಲ. ಸರ್ಕಾರದಿಂದ ಸಹಾಯಧನ ಪಡೆದೂ ರಂಗಾಯಣದಲ್ಲಿ ನಾಟಕಗಳು ಮರುಪ್ರದರ್ಶನಗೊಳ್ಳುತ್ತಿಲ್ಲ' ಎಂದು ವಿಷಾದ ವ್ಯಕ್ತಪಡಿಸಿದರು.ಚಿಂತಕ ಪ್ರೊ.ಎಸ್.ಆರ್.ರಮೇಶ್, `ಚಲನಶೀಲತೆಯ ಹೆಸರಿನಲ್ಲಿ ರಂಗತಂಡಗಳನ್ನು ವಿವಿಧೆಡೆ ವರ್ಗಾವಣೆ ಮಾಡುವ ಮೂಲಕ ರಂಗಾಯಣ ಸಂಸ್ಥೆಯನ್ನು ಛಿದ್ರಗೊಳಿಸಲಾಗುತ್ತಿದೆ. ಅಲ್ಲದೇ ಕಾರಂತರ ದಿಕ್ಕುಬಿಟ್ಟು ಅದರ ವಿರುದ್ಧ ದಿಕ್ಕಿನೆಡೆಗೆ ಸಾಗುತ್ತಿರುವುದಕ್ಕೆ ಕಲಾವಿದರಲ್ಲಿ ಒಗ್ಗಟ್ಟಿಲ್ಲದೇ ಇರುವುದೇ ಕಾರಣ ಹೊರತು, ಕಾರಂತರಲ್ಲ' ಎಂದು ಪ್ರತ್ಯುತ್ತರ ನೀಡಿದರು.`ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹಣ ನೀಡುವ ಏಜೆನ್ಸಿಯಾಗಿ ರೂಪುಗೊಳ್ಳುತ್ತಿದ್ದು, ಇಲಾಖೆಯ ಸಚಿವರು, ನಿರ್ದೇಶಕರ ಕೈಗೊಂಬೆಯಾಗಿ ಕಲಾವಿದರು ವರ್ತಿಸಬೇಕಾಗಿರುವುದು ಒಟ್ಟು ಕಲಾಸಂಸ್ಕೃತಿಯ ದುರಂತ. ಪ್ರತಿಭಟನೆಯ ಸೂಚಕವಾಗಿದ್ದ ರಂಗಭೂಮಿಯಲ್ಲೇ ದಬ್ಬಾಳಿಕೆ ತಾಂಡವವಾಡುತ್ತಿದೆ' ಎಂದು ಕಳವಳ ವ್ಯಕ್ತಪಡಿಸಿದರು.ರಂಗಾಯಣದ ಮಾಜಿ ನಿರ್ದೇಶಕ ಡಾ.ಬಿ.ವಿ.ರಾಜಾರಾಂ, `ಯಾವುದೇ ಸ್ವಾತಂತ್ರ್ಯ ನೀಡದೇ ಸರ್ಕಾರ ರಂಗಾಯಣವನ್ನು ಅತಂತ್ರ ಸ್ಥಿತಿಯಲ್ಲಿಟ್ಟಿದೆ. ಪ್ರಶ್ನಿಸುವವರ ವಿರುದ್ಧ ದಮನಕಾರಿ ನೀತಿಯನ್ನು ಅನುಸರಿಸುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.  ರಂಗನಿರ್ದೇಶಕ ಚಿದಂಬರರಾವ್ ಜಂಬೆ ಮತ್ತಿತರರು ಹಾಜರಿದ್ದರು.

ಪ್ರತಿಕ್ರಿಯಿಸಿ (+)