ಮಂಗಳವಾರ, ಮಾರ್ಚ್ 2, 2021
23 °C
ಉದ್ಯೋಗ ಖಾತ್ರಿ ಯೋಜನೆ: ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಭೇಟಿ

ಬಹುಗ್ರಾಮ ನೀರಿನ ಯೋಜನೆ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಹುಗ್ರಾಮ ನೀರಿನ ಯೋಜನೆ ಪರಿಶೀಲನೆ

ಚಾಮರಾಜನಗರ: ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಹಾಗೂ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ವಿವಿಧ ಕಾಮಗಾರಿ ಸ್ಥಳಕ್ಕೆ ಮಂಗಳವಾರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್ ಚಂದ್ರ ಭೇಟಿ ನೀಡಿ ಪರಿಶೀಲಿಸಿದರು.ಕುಡಿಯುವ ನೀರು ಯೋಜನೆ ಸಂಬಂಧ ನಂಜನಗೂಡಿನ ಹುಲ್ಲಹಳ್ಳಿಯ ಕಬಿನಿ ನದಿತೀರದಲ್ಲಿ ನಿರ್ಮಾಣವಾಗುತ್ತಿರುವ ಜಾಕ್ವೆಲ್ ಕಾಮಗಾರಿ ವೀಕ್ಷಿಸಿದರು. ಬಳಿಕ ಗುಂಡ್ಲುಪೇಟೆ ತಾಲ್ಲೂಕಿನ ಕುರುಬರ ಹುಂಡಿಗೆ ತೆರಳಿ ನೀರಿನ ಯೋಜನೆಗೆ ಸಂಬಂಧಿಸಿದಂತೆ ಅಲ್ಲಿ ಶೇಖರಿಸಲಾಗಿರುವ ಸಾಮಗ್ರಿ, ಪೈಪ್‌ಗಳ ನಿರ್ವಹಣೆ ಬಗ್ಗೆ ಚರ್ಚಿಸಿದರು.ಕೋಟೆಕೆರೆ ಗ್ರಾಮಕ್ಕೆ ಭೇಟಿ ನೀಡಿದ ಅವರು, ಉದ್ಯೋಗ ಖಾತ್ರಿ ಯೋಜನೆಯಡಿ ₹ 12.60 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ರಾಜೀವ್‌ಗಾಂಧಿ ಸೇವಾ ಕೇಂದ್ರ ಪರಿಶೀಲಿಸಿದರು. ‘ಕೇಂದ್ರದ ಅಂಗಳದಲ್ಲಿ ಸಾಕಷ್ಟು ಸ್ಥಳಾವಕಾಶ ಇದೆ. ಇಲ್ಲಿ ಗಿಡನೆಟ್ಟು ಬೆಳೆಸಬೇಕು. ಕೇಂದ್ರದ ಮುಂಭಾಗದಲ್ಲಿ ನೀರು ನುಗ್ಗದಂತೆ ತಡೆಯಲು ಚರಂಡಿ ನಿರ್ಮಿಸಬೇಕು’ ಎಂದು ಸೂಚಿಸಿದರು.ಭೋಗಯ್ಯನಹುಂಡಿಯಲ್ಲಿ ₹ 11.90 ಲಕ್ಷ ವೆಚ್ಚದಲ್ಲಿ ನಿರ್ಮಿಸುತ್ತಿರುವ ಅಂಗನವಾಡಿ ಕಟ್ಟಡದ ಕಾಮಗಾರಿ ಪರಿಶೀಲಿಸಿದರು. ‘ಕಾಮಗಾರಿ ನಡೆಯುತ್ತಿರುವ ಸ್ಥಳದ ಪಕ್ಕದಲ್ಲಿ ತಗ್ಗುಪ್ರದೇಶ ಇದೆ. ಇದನ್ನು ಸರಿಪಡಿಸಬೇಕು. ಗುಣಮಟ್ಟದ ಕೆಲಸ ಮಾಡಬೇಕು’ ಎಂದು ನಿರ್ದೇಶನ ನೀಡಿದರು.ಕಮರಹಳ್ಳಿಗೆ ಭೇಟಿ ನೀಡಿ ಇಂಗುಗುಂಡಿ ನಿರ್ಮಾಣ ಕೆಲಸ ವೀಕ್ಷಿಸಿದರು. ನೀರು ಸರಾಗವಾಗಿ ಹರಿದು ಬರುವಂತೆ ಹಾದಿ ನಿರ್ಮಿಸಬೇಕು. ರಸ್ತೆಯ ಮತ್ತೊಂದು ಬದಿಯಲ್ಲಿ ವ್ಯರ್ಥವಾಗುವ ನೀರು ಸದ್ಬಳಕೆಯಾಗಲು ಕಾಮಗಾರಿ ನಿರ್ವಹಿಸಬೇಕು ಎಂದು ಹೇಳಿದರು.ಹಾಲಹಳ್ಳಿಗೆ ಭೇಟಿ ನೀಡಿದ ಅವರು, ಕೊಣಳಕಟ್ಟೆ ಕೆರೆಯ ಹೂಳು ಎತ್ತಿ ರಿವಿಟ್‌ಮೆಂಟ್ ಹಾಕುವ ₹ 2 ಲಕ್ಷ ವೆಚ್ಚದ ಕಾಮಗಾರಿ ಪರಿಶೀಲಿಸಿದರು. ಕೊಳಚೆ ನೀರು ಕೆರೆಗೆ ಸೇರದಂತೆ ತಡೆಸಲು ಅಗತ್ಯ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು. ಬಳಿಕೆ ನಿಟ್ರೆ ಗ್ರಾಮದ ವ್ಯಾಪ್ತಿ ನಿರ್ಮಾಣವಾಗುತ್ತಿರುವ ಕೃಷಿ ಹೊಂಡದ ಕಾಮಗಾರಿ ಪರಿಶೀಲಿಸಿದರು.ಫಲಾನುಭವಿಯೊಂದಿಗೆ ಸಮಾಲೋಚಿಸಿದ ಅವರು, ಕೃಷಿ ಹೊಂಡದಿಂದ ಆಗಬಹುದಾದ ಪ್ರಯೋಜನ ಕುರಿತು ಮಾಹಿತಿ ಪಡೆದುಕೊಂಡರು. ಸಮೀಪದಲ್ಲಿಯೇ ₹ 3 ಲಕ್ಷ ವೆಚ್ಚದಡಿ ನಿರ್ಮಾಣ ಮಾಡಿರುವ ಸಾಮೂಹಿಕ ಬಳಕೆಯ ಒಕ್ಕಣೆ ಕಣ ವೀಕ್ಷಿಸಿದರು. ಕಣಕ್ಕೆ ತೆರಳುವ ರಸ್ತೆ ದುರಸ್ತಿಪಡಿಸಲು ಸೂಚಿಸಿದರು.ನಿಟ್ರೆ ಗ್ರಾಮ ಪಂಚಾಯಿತಿ ಕಚೇರಿಗೆ ಭೇಟಿ ನೀಡಿ ಅಲ್ಲಿ ಸೌರಶಕ್ತಿ ಬಳಕೆಯಿಂದ ಕಂಪ್ಯೂಟರ್ ಮತ್ತಿತರ ವ್ಯವಸ್ಥೆ ನಿರ್ವಹಣೆಯಾಗುತ್ತಿರುವ ಬಗ್ಗೆ ಮಾಹಿತಿ ಪಡೆದರು. ನಂತರ ಹಂಗಳ ಗ್ರಾಮ ಪಂಚಾಯಿತಿಗೆ ತೆರಳಿ ರಾಜ್ಯದ ಮೊದಲ ‘ಜಿಪಿ–ಒನ್’ ಸೇವೆ ಅಳವಡಿಕೆ ವ್ಯವಸ್ಥೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.ನರೇಗಾ ನಿರ್ದೇಶಕ ಚಂದ್ರಶೇಖರ್‌ ಮಸಗುಪ್ಪಿ, ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎಚ್. ನರಸಿಂಹಮೂರ್ತಿ, ಉಪ ಕಾರ್ಯದರ್ಶಿ ಎನ್‌. ಮುನಿರಾಜಪ್ಪ, ಸಹಾಯಕ ಯೋಜನಾಧಿಕಾರಿ ಸಿದ್ದಲಿಂಗಸ್ವಾಮಿ, ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್ ದೇವರಾಜು, ಗುಂಡ್ಲುಪೇಟೆ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಪುಷ್ಪಾ ಕಮ್ಮಾರ್ ಹಾಜರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.