ಸೋಮವಾರ, ಮೇ 23, 2022
21 °C

ಬಹುತಾರಾ ಪುನೀತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ಯಾಮೆರಾ ಕಣ್ಣುಗಳು ಎಗ್ಗಿಲ್ಲದೆ ರೆಪ್ಪೆ ಬಡಿಯುತ್ತಿದ್ದವು. ಮಂದಸ್ಮಿತೆ ರಾಧಿಕಾ ಪಂಡಿತ್ ಪಕ್ಕದಲ್ಲಿ ಶಿವರಾಜ್‌ಕುಮಾರ್. ತಮ್ಮದೇ ಗತ್ತಿನಿಂದ ಕೂತ ರವಿಚಂದ್ರನ್ ಎದುರು ಪುಟ್ಟ ಹುಡುಗನ ಭಂಗಿಯಲ್ಲಿ ನಿಂತ ಪುನೀತ್ ಗಂಭೀರ ಮಾತು. ಯಾರದ್ದೋ ಜೋಕಿಗೆ ಯೋಗೀಶ್ ನಗು. ಬಲತೋಳಿನ ಮೇಲೆ ಅಂಟಿಸಿಕೊಂಡ ಬೆಣ್ಣೆಕೃಷ್ಣನ ಹಚ್ಚೆ ತೋರಿಸಿ ಮುಖ ಅರಳಿಸಿದ ಅವರ ತಾಯಿ. ಹಿರಿಯ ನಟಿ ಜಯಮ್ಮನವರೊಟ್ಟಿಗೆ ಪಾರ್ವತಮ್ಮನವರ ಕಷ್ಟ-ಸುಖದ ಹಂಚಿಕೆ. ಹೊಸ ಹೇರ್‌ಸ್ಟೈಲ್ ಹೇಗಿದೆ ಎಂದು ಆಪ್ತರಲ್ಲಿ ಅಭಿಪ್ರಾಯ ಸಂಗ್ರಹಿಸುತ್ತಿದ್ದ ಪುನೀತ್ ಮಡದಿ. ಭಾವೀ ನಾಯಕ ಇವನೇ ಎಂಬಂತೆ ಪಕ್ಕದಲ್ಲಿ ಸಮಕ್ಕೂ ಬೆಳೆದ ಮಗನನ್ನು ನಿಲ್ಲಿಸಿಕೊಂಡಿದ್ದ ರಾಘವೇಂದ್ರ ರಾಜ್‌ಕುಮಾರ್. ಕಂಠೀರವ ಸ್ಟುಡಿಯೋ

ಆವರಣದಲ್ಲಿ ಹೀಗೇ ಕಣ್ಣಾಡಿಸಿದಷ್ಟೂ ಚಿತ್ರಗಳು. ‘ನಾಡೋಡಿಗಳ್’ ರೀಮೇಕ್ ಸಿನಿಮಾ ಮುಹೂರ್ತದ ಸಂದರ್ಭ ಅದು. ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಕ್ಲಾಪ್‌ಬೋರ್ಡ್ ಮೇಲೆ ‘ಪ್ರೊಡಕ್ಷನ್ ನಂ.5’ ಎಂದಷ್ಟೆ ಇತ್ತು. ಎಂದಿನಂತೆ ರವಿಚಂದ್ರನ್ ಕ್ಲಾಪ್ ಮಾಡಿದರು. ಮೇಕಪ್ ಹಾಕಿಕೊಂಡ ಮುಖಗಳು ಎಣಿಕೆ ತಪ್ಪುವಷ್ಟಿದ್ದವು. ರೀಮೇಕ್ ಸರದಾರ ಎಂದೇ ಖ್ಯಾತಿವೆತ್ತ ಮಾದೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನೊಬ್ಬ ನಿರ್ದೇಶಕ ಗುರುಪ್ರಸಾದ್ ಸಂಭಾಷಣೆ ಬರೆದಿದ್ದಾರೆಂಬುದು ವಿಶೇಷ. ‘ಜಾಕಿ’ ಹಾಡುಗಳ ಯಶಸ್ಸಿನ ಗಾಳಿಮೇಲೆ ತೇಲಾಡುತ್ತಿರುವ ಪಿ.ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಗುಂಡನೆ ಟೋಪಿ, ಥ್ರೀ ಫೋರ್ತ್‌ ಚೆಡ್ಡಿ ತೊಟ್ಟಿದ್ದ ವರ್ಕೋಹಾಲಿಕ್ ಸತ್ಯ ಹೆಗಡೆ ಛಾಯಾಗ್ರಾಹಕ.

 

ತೊಂಬತ್ತು ದಿನಗಳ ಚಿತ್ರೀಕರಣಕ್ಕೆ ತಂಡ ಸಜ್ಜಾಗಿದೆ. ಬೆಂಗಳೂರು, ಮೇಲುಕೋಟೆ, ಶ್ರವಣಬೆಳಗೊಳ ಹೀಗೆ ವಿವಿಧ ಜಾಗಗಳಲ್ಲಿ ಶೂಟಿಂಗ್ ಸುತ್ತಾಟ. ವಿದೇಶಕ್ಕೆ ಹೋಗಬೇಕೋ ಬೇಡವೋ ಎಂಬುದು ಇನ್ನೂ ತೀರ್ಮಾನವಾಗಿಲ್ಲ- ಇಷ್ಟು ವಿವರವನ್ನು ಪಟಪಟನೆ ಹೇಳಿದ್ದು ಮಾದೇಶ್.

ಒಂದು ರೀತಿ ಹಬ್ಬದ ವಾತಾವರಣವಿದ್ದ ಕಂಠೀರವ ಸ್ಟುಡಿಯೋ ಆವರಣಕ್ಕೆ ಕಾರೊಂದು ಬಂದು ನಿಂತಿತು. ಅದರಿಂದ ಇಳಿದದ್ದು ಹಾಲು ಬಣ್ಣದ ಹುಡುಗಿ. ಸೂರ್ಯನ ಕಿರಣಗಳು ಆಕೆಗೆ ತಾಕುವ ಮೊದಲೇ ಕೊಡೆಯೊಂದು ಗರಿಬಿಚ್ಚಿ ನೆರಳೊಡ್ಡಿತು. ಆ ಕೊಡೆ ಹಿಡಿದದ್ದು ಆಕೆಯ ತಂದೆ ಎಂಬುದು ವಿಶೇಷ. ಹುಡುಗಿಯ ಹೆಸರು ಅಭಿನಯ. ‘ನಾಡೋಡಿಗಳ್’ ತಮಿಳು ಹಾಗೂ ತೆಲುಗಿನಲ್ಲಿ ಬಂದ ಅದರ ರೀಮೇಕ್ ‘ಶಂಭೋ ಶಿವಶಂಭೋ’ದಲ್ಲಿ ತಂಗಿಯ ಪಾತ್ರದಲ್ಲಿ ಮಿಂಚಿರುವ ಹುಡುಗಿಯೇ ಅಭಿನಯ. ಮುಗ್ಧ ಕಣ್ಣುಗಳ ಹುಡುಗಿಗೆ ಮಾತು ಬರುವುದಿಲ್ಲ. ಸಿಕ್ಕ ಅವಕಾಶಕ್ಕೆ ಧನ್ಯವಾದ ಹೇಳಿದ್ದೂ ಕೊಡೆ ಹಿಡಿದ ಅವರ ತಂದೆಯೇ.

‘ನಾಡೋಡಿಗಳ್’ ನೋಡಿದ ಕ್ಷಣದಲ್ಲೇ ‘ಈ ಪಾತ್ರವನ್ನು ಅಪ್ಪು, ಆ ಪಾತ್ರ ಕಿಟ್ಟಿ, ಆ ಇನ್ನೊಂದು ಪಾತ್ರವನ್ನು ಯೋಗಿ ಮಾಡಿದೆ ಚೆನ್ನ’ ಎಂದು ಪುನೀತ್ ಹಾಗೂ ತಾವು ಮಾತಾಡಿಕೊಂಡಿದ್ದಾಗಿ ರಾಘವೇಂದ್ರ ರಾಜ್‌ಕುಮಾರ್ ನೆನಪಿಸಿಕೊಂಡರು. ಆಗ ಅಂದುಕೊಂಡಂತೆಯೇ ಈಗ ಎಲ್ಲವೂ ಆಗಿದೆ. ಅಜಯ್, ನಮ್ಮ ಬಸವ ಚಿತ್ರದಲ್ಲಿ ಪುನೀತ್ ಒಟ್ಟಿಗೆ ನಟಿಸುವ ಅವಕಾಶ ಕೈತಪ್ಪಿಹೋಗಿದ್ದನ್ನು ಸ್ಮರಿಸಿಕೊಂಡ ಶ್ರೀನಗರ ಕಿಟ್ಟಿ ಈ ಚಿತ್ರಕ್ಕೆ ಸಂತೋಷದಿಂದಲೇ ಬಣ್ಣ ಹಚ್ಚಿ ಕೂತಿದ್ದರು. ಆಸೆ ಪೂರೈಸಿತು ಎಂದಷ್ಟೆ ಹೇಳಿ ಸಣ್ಣ ಗಡ್ಡ ನೀವಿಕೊಂಡಿದ್ದು ಯೋಗಿ. ರಾಜ್‌ಕುಮಾರ್ ಮನೆಯ ಪ್ರತಿಷ್ಠಿತ ಬ್ಯಾನರ್‌ನಲ್ಲಿ ಅಭಿನಯಿಸುವ ಅವಕಾಶ ಸಿಕ್ಕಿರುವುದೇ ಸಂತೋಷ ಎಂದು ಬೀಗಿದ್ದು ರಾಧಿಕಾ ಪಂಡಿತ್.

ತಮ್ಮ ನಿರ್ಮಾಣ ಸಂಸ್ಥೆಗೆ ರೀಮೇಕ್ ಹೊಸತೇನಲ್ಲ ಎಂಬುದನ್ನು ರಾಘವೇಂದ್ರ ರಾಜ್‌ಕುಮಾರ್ ಸೂಚ್ಯವಾಗಿ ಹೇಳಿದರು. ‘ಮೋಡದ ಮರೆಯಲ್ಲಿ’, ‘ಆಸೆಗೊಬ್ಬ ಮೀಸೆಗೊಬ್ಬ’ ತರಹದ ಚಿತ್ರಗಳನ್ನು ಅವರು ಉದಾಹರಣೆಯಾಗಿ ಹೆಸರಿಸಿದರು. ‘ಕಿಟ್ಟಿ, ಯೋಗಿ, ರಾಧಿಕಾ, ಅಭಿನಯ ಎಲ್ಲರ ನಟನೆಯ ಫ್ಯಾನ್ ನಾನು’ ಎಂದದ್ದು ಪುನೀತ್. ಅವರು ಅಭಿನಯಿಸುತ್ತಿರುವ ಬಹುನಾಯಕರ ಮೊದಲ ಚಿತ್ರವಿದು. ಈ ಪ್ರಯತ್ನ ಯಶಸ್ವಿಯಾದರೆ ಮುಂದೆಯೂ ಇನ್ನಷ್ಟು ಬಹುತಾರಾ ಚಿತ್ರಗಳಲ್ಲಿ ನಟಿಸುವ ಬಯಕೆ ಅವರಿಗಿದೆ.ರಂಗಾಯಣ ರಘು, ಅಚ್ಯುತ ರಾವ್, ಸುಧಾ ಬೆಳವಾಡಿ ಮೊದಲಾದವರು ಪಾತ್ರವರ್ಗದಲ್ಲಿರುವ ಈ ಚಿತ್ರವು ಮೂಲ ಚಿತ್ರದ ಛಾಯೆಯಲ್ಲೇ ಮೂಡಿಬರಲಿದೆ. ಪ್ರಾದೇಶಿಕತೆಯ ದೃಷ್ಟಿಯಿಂದ ಕೆಲವು ಬದಲಾವಣೆಗಳನ್ನು ಮಾತ್ರ ಮಾಡಿಕೊಂಡಿದ್ದೇವೆ ಎಂಬುದು ರಾಘವೇಂದ್ರ ಸ್ಪಷ್ಟೀಕರಣ.

‘ಜಾಕಿ’ ತೆರೆಕಂಡ ನಾಲ್ಕೇ ದಿನದಲ್ಲಿ ಪುನೀತ್ ತಮ್ಮದೇ ಮನೆ ನಿರ್ಮಾಣದ ಇನ್ನೊಂದು ಚಿತ್ರಕ್ಕೆ ಸಜ್ಜಾಗಿರುವುದು ಕೂಡ ವಿಶೇಷವೇ ಹೌದು. ಸಂಭಾಷಣೆ ಬರೆದ ಗುರುಪ್ರಸಾದ್ ಮಾತ್ರ ಮಾತಿನ ಗೋಷ್ಠಿಗೆ ಗೈರು ಹಾಜರಾಗಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.