ಬಹುಬಗೆಯ ಹೊಸತನ

7

ಬಹುಬಗೆಯ ಹೊಸತನ

Published:
Updated:
ಬಹುಬಗೆಯ ಹೊಸತನ

ಬುಧವಾರ ನಡೆದ ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಹಲವು ಬಗೆಯ ಹೊಸತನದಿಂದ ತುಂಬಿತ್ತು.ಪ್ರತಿವರ್ಷವೂ ಸಾಂಪ್ರದಾಯಿಕವಾಗಿ ನಡೆಯುವ ರಾಜ್ಯಪಾಲರ ಭಾಷಣದ ವ್ಯಾಪ್ತಿಯಲ್ಲೂ ಹೊಸತನವಿತ್ತು. ಹಿಂದಿನ ವರ್ಷಗಳಂತೆ ತಮ್ಮ ಸರಕಾರದ ಸಾಧನೆಗಳ ಮಾರುದ್ದದ ಪಟ್ಟಿ ನೀಡಲು ಅವರು ಹೋಗಲಿಲ್ಲ.ಇರುವ ಸಮಸ್ಯೆಗಳೇನು?- ಅವುಗಳ ನಿವಾರಣೆಗೆ ತಮ್ಮ ಸರಕಾರ ಮಾಡಬೇಕೆಂದಿರುವ ಕೆಲಸಗಳೇನೆಂಬುದನ್ನು ಸಂಕ್ಷಿಪ್ತವಾಗಿ ಪ್ರಸ್ತಾಪಿಸಿದರು. ರಾಜ್ಯ ವಿಧಾನಮಂಡಲದ ಇತಿಹಾಸದಲ್ಲಿಯೇ ಇದು ರಾಜ್ಯಪಾಲರ ಅತಿ ಪುಟ್ಟ ಭಾಷಣ. ಕೇವಲ 20 ನಿಮಿಷಗಳಲ್ಲಿ ಈ ವಾರ್ಷಿಕ ಸಂಸದೀಯ ಉತ್ಸವ ಮುಗಿಯಿತು.ಹಿತ-ಮಿತವಾದ ರಾಜ್ಯಪಾಲರ ಈ ಭಾಷಣದಿಂದ ಸಂತುಷ್ಟರಾದವರು ಸುದ್ದಿಗಾರರ ಬಳಗ. ಹಿಂದಿನ ವರ್ಷಗಳಲ್ಲಿ ಒಂದು-ಒಂದೂಕಾಲು ಗಂಟೆ ಕಾಲ ನಡೆಯುತ್ತಿದ್ದ ರಾಜ್ಯಪಾಲರ ಭಾಷಣಗಳನ್ನು ನೆನಸಿಕೊಂಡ ಸುದ್ದಿಗಾರರೊಬ್ಬರು ರಾಜ್ಯಪಾಲರಿಗೆ ಮೆಲುದನಿಯಲ್ಲಿ ವಂದಿಸಿದರು.ಕೇವಲ ಮೂವರು ಸದಸ್ಯರ ಸಂಪುಟದ ನೇತೃತ್ವದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗಿರುವುದು ವಿಧಾನಮಂಡಲದ ಇತಿಹಾಸದಲ್ಲೇ ಇದು ಮೊದಲು.

ಹದಿನೇಳು ದಿನಗಳ ಹಿಂದೆ ರಾಜ್ಯದ ಮುಖ್ಯಮಂತ್ರಿ ಯಾಗಿದ್ದ ದೇವರಾಜ ಅರಸು ಬುಧವಾರದ ಜಂಟಿ ಅಧಿವೇಶನದಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನ ಅಲಂಕರಿಸಿದ್ದರು.ರಾಜ್ಯದ ಇತಿಹಾಸದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರು ವಿರೋಧಪಕ್ಷದ ನಾಯಕರಾದುದು ಇದೇ ಮೊದಲು. ಸುಮಾರು ಎಂಟು ವರ್ಷಗಳ ಕಾಲ ಅರಸು ತುಂಬಿದ್ದ ಮುಖ್ಯಮಂತ್ರಿ ಆಸನವನ್ನು ಆರ್. ಗುಂಡೂರಾವ್ ಭರ್ತಿ ಮಾಡಿದ್ದರು.

ಸಭೆಯ ಬಲಭಾಗದಲ್ಲಿ ಸಚಿವರುಗಳಿಗಾಗಿ ಮೀಸಲಾಗಿದ್ದ ಮೊದಲ ಸಾಲಿನ ಕುರ್ಚಿಗಳು ಕೆಲವು ಖಾಲಿಯಾಗಿದ್ದವು.ಮುಖ್ಯಮಂತ್ರಿಯ ಎರಡನೇ ಸ್ಥಾನದಲ್ಲಿ ಬಂಗಾರಪ್ಪ ಮತ್ತು ಮೂರನೇ ಸ್ಥಾನದಲ್ಲಿ ವೀರಪ್ಪ ಮೊಯ್ಲಿ ಕುಳಿತ ಮೇಲೆ ಹಲವು ಕುರ್ಚಿಗಳು ಖಾಲಿಯಾಗಿದ್ದುದನ್ನು ಕಂಡ ಕೆಲವರು ಕಾಂಗೈ ಸದಸ್ಯರಿಗೆ ಅಲ್ಲಿ ಕುಳಿತುಕೊಳ್ಳುವ ಸಹಜ ಆತುರ.ನಾಳೆಯಾದರೂ ನಮ್ಮವೇ...?


“ನಾಳೆಯಾದರೂ ನಾವು ಮಂತ್ರಿಗಳಾಗುವವರೇ”, ಎಂಬ ವೈಚಾರಿಕ ಗುಂಗಿನಲ್ಲಿನಲ್ಲಿರಬೇಕು- ಜಿ.ಪಿ. ಒಡೆಯರಾಜ್, ಎಂ. ರಘುಪತಿ, ಮಾಣಿಕರಾವ್ ಪಾಟೀಲ್, ಜೆ.ಡಿ. ಸೋಮಪ್ಪ ಮತ್ತು ಭೀಮಣ್ಣ ಖಂಡ್ರೆ ಸಚಿವರಿಗಾಗಿ ಇರುವ ಪೀಠಗಳಲ್ಲಿ ಆಸೀನರಾದರು.ಏಕಕಾಲದಲ್ಲಿ ನಗುವನ್ನು ಬೀರಿ- ಮಾತುಗಳನ್ನು ತೂರುವ ಚಳಕವನ್ನು ಮೈಗೂಡಿಸಿಕೊಂಡಿರುವ ವಿಧಾನಪರಿಷತ್ತಿನ ಕಾಂಗೈ ಸದಸ್ಯೆ ಎಂ. ರಘುಪತಿ ಅವರು ರಾಜ್ಯಪಾಲರು ಬರುವ ಮೊದಲು ಸಭೆಗೆ ಒಂದು ಸುತ್ತು ಬಂದು, ಕೈ-ಕುಲುಕಿ ಹಾಸ್ಯಚಟಾಕಿ ಹಾರಿಸಿದರು.ಹೋದವರ್ಷ ಸಭೆಯ ಎಡಭಾಗದಲ್ಲಿದ್ದ ರಘುಪತಿ ಈ ಸಲ ಬಲಭಾಗಕ್ಕೆ ಸರಿದಿದ್ದಾರೆ. ಈ ನಲ್ಮೆ ಅವರಲ್ಲಿ ಎದ್ದು ಕಾಣುತ್ತಿತ್ತು.ಎಡದಿಂದ ಬಲಕ್ಕೆ ಹೋದವರು ಮತ್ತೆಷ್ಟೋ ಮಂದಿ ಇದ್ದರು. ತಮ್ಮ ಹಳೆಯ ನಾಯಕನನ್ನು ಸಭೆಯ ಎಡಭಾಗಕ್ಕೆ ತಳ್ಳಿ “ನಾವು ಆಗಲೂ ಬಲ ಈಗಲೂ ಬಲ” ಎನ್ನುವ ಗಂಭೀರ ಮುಖಮುದ್ರೆಯಲ್ಲಿ ಕುಳಿತ ಸದಸ್ಯರ ಸಂಖ್ಯೆ ಬಲು ದೊಡ್ಡದು.ನಿರ್ವಹಿಸಿದ ಸಂಪ್ರದಾಯ

ಸಾಮಾನ್ಯವಾಗಿ ಹೊಸ ವರ್ಷದ ಅಧಿವೇಶನ ಸೇರಿದಾಗ ಸರಕಾರಿ ಪಕ್ಷದ ಗಣ್ಯರು ವಿರೋಧಿ ಪಕ್ಷದ ಸದಸ್ಯರನ್ನು ಮಾತನಾಡಿಸುವುದೊಂದು ಪರಿಪಾಠ. ಕಂದಾಯ ಸಚಿವ ಬಂಗಾರಪ್ಪ ಈ ಸಂಸದೀಯ ಸಂಪ್ರದಾಯವನ್ನು ಯಶಸ್ವಿಯಾಗಿ ನಿರ್ವಹಿಸಿದರು.

ಸಭೆಗೆ ರಾಜ್ಯಪಾಲರು ಬರುವುದಕ್ಕೆ ಆರು ನಿಮಿಷ ಮೊದಲು ಆಗಮಿಸಿದ ವಿರೋಧ ಪಕ್ಷದ ನಾಯಕ ದೇವರಾಜ ಅರಸು ತಮ್ಮ ಸಂಗಾತಿಗಳೊಡನೆ ಕುಶಲ ಸಂಭಾಷಣೆಯಲ್ಲಿ ನಿರತರಾದರು.ಅರಸು ಆಗಮನಕ್ಕೆ ವಿರೋಧ ಪಕ್ಷದ ಸದಸ್ಯರಿಂದ ಕರತಾಡನ ಆಯಿತು. ಮುಖ್ಯಮಂತ್ರಿ ಗುಂಡೂರಾವ್ ಸಭೆಗೆ ಪ್ರವೇಶಿಸಿದಾಗ ಆಳುವ ಪಕ್ಷದ ಸದಸ್ಯರು ಕರತಾಡನ ಮಾಡಿದರು.ಪತ್ತೆ ಆಗದ ವಿಚಾರ

ಬುಧವಾರ ನಡೆದುದು ಎರಡೂ ಸದನಗಳ ಜಂಟಿ ಸಮಾವೇಶವಾದುದರಿಂದ, ಹಿಂದೆ ಅರಸು ಬೆಂಬಲಿಗರಾಗಿದ್ದವರಲ್ಲಿ ಈಗೆಷ್ಟು ಮಂದಿ ಅವರನ್ನು ಹಿಂಬಾಲಿಸಿರುವರೆಂಬುದನ್ನು ಪತ್ತೆ ಹಚ್ಚಲಾಗಿಲ್ಲ.ಒಂದು ಅಂದಾಜಿನ ಮೇರೆಗೆ ಅರಸು ಒಂದಿಗೆ ಸದ್ಯಕ್ಕೆ 37 ಮಂದಿ ಸದಸ್ಯರಿದ್ದಾರೆ. ಅವರ ಹಿಂದಿನ ಸಚಿವ ಸಹೋದ್ಯೋಗಿಗಳ ಪೈಕಿ ಈಗ ಅವರೊಂದಿಗುಳಿದಿರುವವ ರೆಂದರೆ ಅಜೀಜ್‌ಸೇಟ್, ಬಿ. ಸುಬ್ಬಯ್ಯಶೆಟ್ಟಿ, ನಜೀರ್ ಅಹಮದ್ ಸಿದ್ದಿಕಿ, ದಾಮೋದರ್ ಮೂಲ್ಕಿ, ಜಿ. ರಾಮೇಗೌಡ, ಕೆ. ಪ್ರಭಾಕರ, ಬಿ. ಬಸವಲಿಂಗಪ್ಪ, ಡಿ.ಬಿ. ಚಂದ್ರೇಗೌಡ, ಎಲ್.ಜಿ. ಹಾವನೂರ್ ಮತ್ತು ನಾಣಯ್ಯ.ಕಳೆದ ಸೆಪ್ಟೆಂಬರ್‌ನಲ್ಲಿ ಜನತಾಪಕ್ಷ ತ್ಯಜಿಸಿ ಅರಸು ಕಾಂಗ್ರೆಸ್ ಸೇರಿದ್ದ ಜೆ.ಎಚ್. ಪಟೇಲ್, ಮುಳ್ಳೂರು ಆನಂದರಾವ್, ಜೀವರಾಜ ಆಳ್ವ, ಎಚ್.ಡಿ. ಚೌಡಯ್ಯ ಮತ್ತು ಆತ್ಮಾನಂದ ಬುಧವಾರ ಅರಸು ಒಂದಿಗೇ ಇದ್ದರು. ಆಳುವ ಪಕ್ಷದೊಡನೆ ಇವರು ಮಾಡಿದ್ದ ಸಹವಾಸ ಅಲ್ಪಾಯುಷಿಯಾಯಿತು....

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry