ಬಹುಭಾಷಾ ತಜ್ಞ ಗೋಪಾಲಕೃಷ್ಣ

7

ಬಹುಭಾಷಾ ತಜ್ಞ ಗೋಪಾಲಕೃಷ್ಣ

Published:
Updated:

ಗೋವಿಂದ ಪೈ ಬಹುಭಾಷಾ ತಜ್ಞರಾಗಿದ್ದರು ಎಂದು ತಿಳಿದಿದ್ದೇವೆ. ಹಾಗೆಯೇ ಇನ್ನೂ ಹಲವು ವಿದ್ವಾಂಸರಿಗೆ ಮೂರಕ್ಕಿಂತ ಹೆಚ್ಚು ಭಾಷೆಗಳಲ್ಲಿ ಪ್ರಾವೀಣ್ಯವಿದ್ದ ವಿಷಯವನ್ನು ಕೇಳಿದ್ದೇವೆ. ಅಂತಹವರ ಬಗ್ಗೆ ಕೇಳಿ ತಿಳಿದಿದ್ದೇವಷ್ಟೇ ಹೊರತು ನೋಡಿರಲಿಲ್ಲ ಎಂದಮೇಲೆ ಒಡನಾಟವೂ ಇರಲಿಲ್ಲ ಎಂದೇ ಅರ್ಥ. ಈಗಲೂ ನಮ್ಮಡನಿರುವ ಮತ್ತು ನಮ್ಮ ಜೊತೆ ಒಡನಾಟವಿಟ್ಟುಕೊಂಡಿರುವ ಬಹುಭಾಷಾತಜ್ಞರಾದ ವಿದ್ವಾಂಸರೆಂದರೆ ಡಾ. ವಿ. ಗೋಪಾಲಕೃಷ್ಣ. ಇವರ ಮೂಲನೆಲೆ ಈಗಿನ ಗೌರೀಬಿದನೂರು ತಾಲ್ಲೂಕಿನ ದಾರಿನಾಯಕನ ಪಾಳ್ಯ.ಈಗಲೂ ಸ್ವಂತ ಊರಿನ ಜೊತೆ ಸಂಪರ್ಕವಿಟ್ಟುಕೊಂಡಿರುವ ಗೋಪಾಲಕೃಷ್ಣ ಈಗ ನೆಲೆಸಿರುವುದು ತಮಿಳುನಾಡಿನ ರಾಜಧಾನಿಯಾದ ಚೆನ್ನೈನಲ್ಲಿ. ಈ ವರ್ಷದ ಡಿಸೆಂಬರ್ 15ಕ್ಕೆ ಎಪ್ಪತ್ತನಾಲ್ಕು ತುಂಬಿ 75ನೇ ವರ್ಷಕ್ಕೆ ಅಡಿಯಿರಿಸಿದ ಗೋಪಾಲಕೃಷ್ಣ ಕನ್ನಡ, ತೆಲುಗು, ತಮಿಳು, ಮಲೆಯಾಳಂ ಮತ್ತು ಇಂಗ್ಲಿಷ್ ಭಾಷೆಗಳನ್ನು ಚೆನ್ನಾಗಿ ತಿಳಿದವರು. ಆಯಾ ಭಾಷೆಗಳಲ್ಲಿ ವಿಶಿಷ್ಟ ಕೃತಿಗಳನ್ನೂ ರಚಿಸಿದ್ದಾರೆ.ದಾರಿನಾಯಕನ ಪಾಳ್ಯದ ಶ್ಯಾನುಭೋಗರಾದ ವೆಂಕಟಸುಬ್ಬಯ್ಯ ಮತ್ತು ಗೌರಮ್ಮನವರ ಮಗನಾದ ಗೋಪಾಲಕೃಷ್ಣ ಅವರು ಒಳಾಂಗಣದಲ್ಲಿ ಕಲಿತದ್ದು ಇಂಟರ್ ಮೀಡಿಯಟ್‌ವರೆಗೆ ಮಾತ್ರ. ನಂತರದ ಅವರ ಕಲಿಕೆಯೆಲ್ಲವೂ ಖಾಸಗಿಯಾಗಿಯೇ ಆಗಿದೆ. ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣವನ್ನು ದಾರಿನಾಯಕನಪಾಳ್ಯದಲ್ಲೇ ಪಡೆದು, ಗೌರೀಬಿದನೂರಿನಲ್ಲಿ ಪ್ರೌಢಶಾಲಾ ವಿದ್ಯಾಭ್ಯಾಸವನ್ನು ಪೂರೈಸಿದ ನಂತರ ಮೈಸೂರು ವಿಶ್ವವಿದ್ಯಾನಿಲಯದಿಂದ ಇಂಟರ್‌ಮೀಡಿಯೆಟ್ ಮತ್ತು ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಎಡ್., ಪದವಿ ಪಡೆದಿದ್ದಾರೆ. ಖಾಸಗಿಯಾಗಿಯೇ, ಎಂ.ಎ. ಮತ್ತು ಪಿಎಚ್.ಡಿ., ಪದವಿಗಳನ್ನು ಪಡೆದಿದ್ದಾರೆ. 1966ರಿಂದ 1990ರವರೆಗೆ ದಾರಿನಾಯಕನ ಪಾಳ್ಯದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.ಮೂಲನೆಲೆ ಗೌರಿಬಿದನೂರು ತಾಲ್ಲೂಕಾದ ಕಾರಣ ಗೋಪಾಲಕೃಷ್ಣ ಅವರಿಗೆ ಸಹಜವಾಗಿಯೇ ಕನ್ನಡ ಮತ್ತು ತೆಲುಗು ಭಾಷೆಗಳ ಒಡನಾಟ. ಸ್ವಂತ ಆಸಕ್ತಿಯಿಂದ ಕಲಿತದ್ದು ತಮಿಳು ಮತ್ತು ಮಲೆಯಾಳಂ ಭಾಷೆಗಳು. ಮೈಸೂರಿನ ರೀಜನಲ್ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್‌ನಿಂದ ಇಂಗ್ಲಿಷ್ ಟೀಚಿಂಗ್ ಅಂಡ್ ಇನ್ಸ್‌ಟ್ರಕ್ಷನ್‌ನಲ್ಲಿ ಸರ್ಟಫಿಕೇಟ್ ಪಡೆದ ಅವರು, ಮೈಸೂರಿನ ಸಿಐಐಎಲ್‌ನಿಂದ ಮಲೆಯಾಳಂನಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಹೀಗೆ ಬಹುತೇಕ ದ್ರಾವಿಡ ಭಾಷೆಗಳ ಸಂಪರ್ಕ ಪಡೆದಿರುವ ಅವರ ಅಮೂಲ್ಯ ಸೇವೆ ದೊರೆತದ್ದು ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಏಷ್ಯನ್ ಸ್ಟಡೀಸ್‌ಗೆ. 1991ರಲ್ಲಿ ಆ ಸಂಸ್ಥೆಯಿಂದ ಪ್ರಕಟವಾದ `ಕರ್ನಾಟಕ ಜಾನಪದ ಸಂಸ್ಕೃತಿಯ ವಿಶ್ವಕೋಶ' (Encyclopaedia of the folk culture of Karnataka) ಗ್ರಂಥದ ಸಹಸಂಪಾದಕರಾಗಿ ಅವರ ಸೇವೆ ಅಭಿನಂದನಾರ್ಹ. ಅದೇ ಗ್ರಂಥದ ಆರಂಭದಲ್ಲಿ ದಾಖಲಾಗಿರುವಂತೆ ಅದು ಪರಿಚಯಾತ್ಮಕ ಲೇಖನಗಳ ಮೊದಲ ಸಂಪುಟ. ಇಂಗ್ಲಿಷ್ ಭಾಷೆಯಲ್ಲಿರುವ ಇಲ್ಲಿನ ಲೇಖನಗಳು ಕರ್ನಾಟಕವನ್ನು ಜಾನಪದೀಯ ಸಂಸ್ಕೃತಿಯ ಹಿನ್ನೆಲೆಯಲ್ಲಿ ತಿಳಿಯಲು ಸುಲಭಪ್ರವೇಶವಾಗಿವೆ.1995ರಲ್ಲಿ ಪ್ರಕಟವಾದ ಕನ್ನಡ-ಕನ್ನಡ-ಇಂಗ್ಲಿಷ್-ತಮಿಳು-ಜಪಾನೀ ಭಾಷೆಗಳ ಬಹುಭಾಷಾ ನಿಘಂಟಿನ ಮೊದಲ ಸಂಪುಟದಲ್ಲಿ ಸಂಪಾದಕ ಡಾ.ವಿ.ಗೋಪಾಲಕೃಷ್ಣ ಅವರ ಶ್ರಮ ಸ್ಪಷ್ಟವಾಗಿ ಕಾಣುತ್ತದೆ. ಇದೇ ಶ್ರಮವು ಅದೇ ಶ್ರೇಣಿಯ ಎರಡನೆಯ ಸಂಪುಟದಲ್ಲೂ ಕಾಣುತ್ತದೆ. ನಿಘಂಟು ಸಿದ್ಧತೆಯಲ್ಲಿ 1863ಕ್ಕೂ ಹೆಚ್ಚು ಗ್ರಂಥಗಳ ಉಪಯೋಗ ಪಡೆದಿರುವ ಸುಳಿವನ್ನು ಗ್ರಂಥದ ಆರಂಭದಲ್ಲೇ ಗುರುತಿಸಬಹುದು. `ಅ' ಕನ್ನಡ ವರ್ಣಮಾಲೆಯ ಮೊದಲನೆಯ ವರ್ಣ ಎಂಬ ಸೂಚನೆಯಿಂದ ಆರಂಭವಾಗಿ `ಅಪು'ವಿನವರೆಗೆ ಮೊದಲ ಸಂಪುಟದಲ್ಲೂ, `ಅಬಂಡ'ದಿಂದ ಆರಂಭವಾಗಿ `ಅಥರ್ವಣ'ದವರೆಗೆ ಎರಡನೆಯ ಸಂಪುಟದಲ್ಲೂ ಕನ್ನಡ ಶಬ್ದಗಳಿಗೆ ಕನ್ನಡ, ಇಂಗ್ಲಿಷ್, ತಮಿಳು ಮತ್ತು ಜಪಾನೀ ಭಾಷೆಗಳಲ್ಲಿ ಅರ್ಥ ನೀಡಲಾಗಿದೆ. ದ್ರಾವಿಡ ಭಾಷೆಗಳ ಅಧ್ಯಯನಕ್ಕೆ ಈ ನಿಘಂಟು ಉಪಯುಕ್ತವಾಗಿದೆ. ಬಹುತೇಕ ಈ ಕೃತಿಯ ಸಿದ್ಧತೆಯಲ್ಲಿ ಗೋಪಾಲಕೃಷ್ಣ ಪಟ್ಟ ಶ್ರಮಕ್ಕೆ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯ ಮನ್ನಣೆ ನೀಡಿ ಹಿರಿಯ ಸಂಶೋಧಕರಾಗಿ ಸೇವೆ ಸಲ್ಲಿಸಲು ಅವಕಾಶ ನೀಡಿತು.1960-1966ರವರೆಗೆ ಬೆಂಗಳೂರಿನಲ್ಲಿ ಅಂಚೆ ಇಲಾಖೆಯ ಆರ್.ಎಂ.ಎಸ್.ನಲ್ಲೂ, 1966-1990ರವರೆಗೆ ದಾರಿನಾಯಕನಪಾಳ್ಯದ ಪ್ರೌಢಶಾಲೆಯಲ್ಲಿ ಉಪಾಧ್ಯಾಯರಾಗಿಯೂ, 1990-2002ರವರೆಗೆ ಚೆನ್ನೈನ ಇನ್‌ಸ್ಟಿಟ್ಯೂಟ್ ಆಫ್ ಏಷ್ಯನ್ ಸ್ಟಡೀಸ್‌ನಲ್ಲಿ ಕನ್ನಡ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿಯೂ, ನಡುವೆ ಚೆನ್ನೈನ ಮದ್ರಾಸ್ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ, ನಂತರ ಕುಪ್ಪಂನ ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಹಿರಿಯ ಸಂಶೋಧಕರಾಗಿಯೂ ಸಾರ್ಥಕ ಸೇವೆ ಸಲ್ಲಿಸಿರುವ ಗೋಪಾಲಕೃಷ್ಣರ ವಿಶೇಷ ಆಸಕ್ತಿ ಸ್ಥಳನಾಮಗಳ ಅಧ್ಯಯನ. ತಮ್ಮ ಪಿಎಚ್.ಡಿ., ಅಧ್ಯಯನಕ್ಕೆ ಅವರು ಆರಿಸಿಕೊಂಡದ್ದು `ಕೋಲಾರ ಜಿಲ್ಲೆಯ ಸ್ಥಳನಾಮಗಳು'.ಪ್ರೊ.ಮರಿಯಪ್ಪಭಟ್ಟರ ಸಂಸ್ಮರಣ ಗ್ರಂಥದ ಸಂಪಾದನೆಯಲ್ಲೂ ಸಾರ್ಥಕ ಕೊಡುಗೆ ನೀಡಿರುವ ಗೋಪಾಲಕೃಷ್ಣ ಕನ್ನಡ, ತಮಿಳು ಮತ್ತು ಮಲೆಯಾಳಿ ಭಾಷೆಗಳಲ್ಲಿ ಮೂವತ್ತಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಒಂದು ನೂರ ಐವತ್ತಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದ್ದಾರೆ.2007ರಲ್ಲಿ ನಡೆದ ಗೌರಿಬಿದನೂರು ತಾಲ್ಲೂಕಿನ ಎರಡನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಗೌರವ ಗೋಪಾಲಕೃಷ್ಣರಿಗೆ ಸಂದಿದೆ. ಮಲೆಯಾಳದಿಂದ ಕನ್ನಡಕ್ಕೆ `ಕಂದರ' ಕಥಾಸಂಕಲನವನ್ನೂ, `ತತ್ವಮಸಿ' ಎಂಬ ಕೃತಿಯನ್ನೂ ಅನುವಾದಿಸಿದ್ದಾರೆ. ತಮಿಳಿನಿಂದ ಕನ್ನಡಕ್ಕೆ  `ಇದ್ದಲುಚೂರು', `ಕಡಲೋಡಿಗ', `ಪತ್ತು ಪಾಟು' ಕೃತಿಗಳನ್ನು ಅನುವಾದಿಸಿದ್ದಾರೆ. ಹೀಗೆ ಕನ್ನಡ, ತೆಲುಗು, ಮಲೆಯಾಳಂ, ತಮಿಳು ಮತ್ತು ಇಂಗ್ಲಿಷ್ ಭಾಷೆಗಳಿಗೆ ಅನುವಾದಗಳ ಮೂಲಕ ಸೇತುವೆ ಕಟ್ಟುತ್ತಿರುವ ಬಹುಭಾಷಾ ತಜ್ಞ, ಸ್ಥಳನಾಮ ವಿಜ್ಞಾನಿ, ನಿಘಂಟುಕಾರ ಗೋಪಾಲಕೃಷ್ಣ ಮತ್ತಷ್ಟು ಸಾರ್ಥಕ ಕೆಲಸಗಳನ್ನು ಮಾಡುವ ಶಕ್ತಿ ಪಡೆದಿದ್ದಾರೆ. ಗೋಪಾಲಕೃಷ್ಣರ ಕೆಲಸದ ಹುಮ್ಮಸ್ಸು ನೋಡಿದರೆ, ಎಪ್ಪತ್ತೈದರ ಸಂಖ್ಯಾ ವಿಶೇಷದ ವಯಸ್ಸು ಅವರ ಸಾರ್ಮರ್ಥ್ಯವನ್ನು ಹೆಚ್ಚಿಸಿದಂತಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry