ಮಂಗಳವಾರ, ಮೇ 18, 2021
30 °C

ಬಹುಮನಿ ಸುಲ್ತಾನರ ಸ್ಮಾರಕ ಸಂರಕ್ಷಿಸಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ನಗರದಲ್ಲಿ ಆಳ್ವಿಕೆ ನಡೆಸಿದ ಬಹುಮನಿ ಸುಲ್ತಾನರು ನಿರ್ಮಿಸಿದ ಕೋಟೆ, ಮಸೀದಿಗಳು ಅದ್ವಿತೀಯವಾಗಿದ್ದು, ಅವುಗಳನ್ನು ಸಂರಕ್ಷಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದು ಸರ್ಕಾರಿ ಮಹಾವಿದ್ಯಾಲಯದ ಸ್ನಾತಕೋತ್ತರ ಇತಿಹಾಸ ವಿಭಾಗದ ಉಪನ್ಯಾಸಕ ಡಾ. ಶಂಭುಲಿಂಗ ವಾಣಿ ಬುಧವಾರ ಇಲ್ಲಿ ಕರೆ ನೀಡಿದರು.ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ಪರಂಪರೆಯ ರಾಷ್ಟ್ರೀಯ ಪ್ರತಿಷ್ಠಾನ (ಇನ್‌ಟ್ಯಾಕ್) ಗುಲ್ಬರ್ಗ ಘಟಕ ವಿಶ್ವ ಪರಂಪರೆ ದಿನಾಚರಣೆ ನಿಮಿತ್ತ ಕೋಟೆಯಲ್ಲಿ ಆಯೋಜಿಸಿದ್ದ ಜಾಥಾವನ್ನುದ್ದೇಶಿಸಿ ಅವರು ಉಪನ್ಯಾಸ ನೀಡಿದರು.ಜಾಮಿಯಾ ಮಸೀದಿ ಹಾಗೂ ಕೋಟೆಯ ಮೇಲೆ ನಿರ್ಮಿಸಿರುವ 25 ಅಡಿ ಉದ್ದದ ತೋಪು ವಿಶ್ವವಿಖ್ಯಾತಿ ಪಡೆದಿವೆ. ಇವುಗಳನ್ನು ನೋಡಲು ಪ್ರತಿ ವರ್ಷ ವಿದೇಶೀಯರು ಗುಲ್ಬರ್ಗಕ್ಕೆ ಭೇಟಿ ಕೊಡುತ್ತಿದ್ದಾರೆ. ಇಡೀ ಮಸೀದಿಯು 75 ಗೊಮ್ಮಟಗಳ ಆಧಾರದಲ್ಲಿ ನಿಂತಿರುವುದು ಅಚ್ಚರಿ ಮೂಡಿಸುತ್ತದೆ. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕ್ರಿ.ಶ. 1376ರಲ್ಲಿ  ನಿರ್ಮಾಣವಾದ ಮಸೀದಿ ಇದಾಗಿದೆ ಎಂದರು.ಸರ್ಕಾರಿ ಮಹಾವಿದ್ಯಾಲಯ ಸ್ನಾತಕೋತ್ತರ ಇತಿಹಾಸ ವಿಭಾಗ ಮುಖ್ಯಸ್ಥ ಡಾ. ಸರ್ವೋದಯ ಶಿವಪುತ್ರ ಮಾತನಾಡಿ, ಗುಲ್ಬರ್ಗದ ಕಲೆ, ಸಾಹಿತ್ಯ, ಧರ್ಮ ಮತ್ತು ಸಂಸ್ಕೃತಿ ವಿಶಿಷ್ಟತೆಯಿಂದ ಕೂಡಿದೆ. ಇಲ್ಲಿನ ಸ್ಮಾರಕಗಳನ್ನು ಕಾಪಾಡಿಕೊಳ್ಳುವ ಮೂಲಕ ಸಂಸ್ಕೃತಿಯನ್ನು ಉಳಿಸಬೇಕಿದೆ ಎಂದರು.ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿ ಮೊನೇಶ ಕುರವತ್ತಿ ಮಾತನಾಡಿದರು. ಡಾ. ಶಶಿಶೇಖರ ರೆಡ್ಡಿ ನಿರೂಪಿಸಿದರು. ಪ್ರೊ. ಗುರುಪ್ರಕಾಶ ಹೂಗಾರ ವಂದಿಸಿದರು. ಸರ್ಕಾರಿ ಮಹಾವಿದ್ಯಾಲಯ ಸ್ನಾತಕೋತ್ತರ ಇತಿಹಾಸ ವಿಭಾಗ, ಇನಾಮದಾರ ಮಹಾವಿದ್ಯಾಲಯದ ವಿದ್ಯಾರ್ಥಿಗಳು, ಇನ್‌ಟ್ಯಾಕ್ ಪದಾಧಿಕಾರಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು. ಕೋಟೆಯಲ್ಲಿರುವ ರಣಮಂಡಲ್, ವಿದೇಶಿ ಮಾರುಕಟ್ಟೆ, ಜಾಮೀಯಾ ಮಸೀದಿಗಳಿಗೆ ಜಾಥಾ ಮೂಲಕ ತಲುಪಿ, ಅವುಗಳ ಮಹತ್ವವನ್ನು ತಿಳಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.